Site icon Vistara News

CWG-2022 | ಕಾಮನ್ವೆಲ್ತ್‌ ಸಾಧಕರಿಗೆ ಶನಿವಾರ ಮೋದಿ ನಿವಾಸದಲ್ಲಿ ಆತಿಥ್ಯ

cwg-2022

ನವ ದೆಹಲಿ : ಲಂಡನ್‌ನ ಬರ್ಮಿಂಗ್ಹಮ್‌ನಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG-2022) ಪದಕ ಗೆದ್ದ ಭಾರತದ ಅಥ್ಲೀಟ್‌ಗಳಿಗೆ ಶನಿವಾರ (ಆಗಸ್ಟ್‌ ೧೩ರಂದು) ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಆತಿಥ್ಯ ಆಯೋಜಿಸಲಾಗಿದೆ. ನರೇಂದ್ರ ಮೋದಿಯವರ ಹಾಗೂ ಪ್ರಧಾನ ಮಂತ್ರಿಗಳ ಅಧಿಕೃತ ಟ್ವೀಟ್‌ ಖಾತೆಯಿಂದ ಈ ವಿಷಯವನ್ನು ಪ್ರಕಟಿಸಲಾಗಿದೆ. ಬೆಳ್ಳಗ್ಗೆ ೧೧ ಗಂಟೆಗೆ ಈ ಆತಿಥ್ಯ ಕಾರ್ಯಕ್ರಮ ನಡೆಯಲಿದೆ.

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದಿಂದ ೨೧೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಅದರಲ್ಲಿ ೬೧ ಮಂದಿ ಪದಕ ಗೆದ್ದಿದ್ದಾರೆ. ಇದರಲ್ಲಿ ೨೨ ಚಿನ್ನ, ೧೬ ಬೆಳ್ಳಿಯ ಪದಕ ಹಾಗೂ ೨೩ ಕಂಚಿನ ಪದಕಧಾರಿಗಳಿದ್ದಾರೆ. ಅವರೆಲ್ಲರೂ ಪ್ರಧಾನಿ ಮೋದಿಯವರ ಆತಿಥ್ಯ ಸ್ವೀಕಾರ ಮಾಡಲಿದ್ದಾರೆ.

ಭಾರತದ ಅಥ್ಲೀಟ್‌ಗಳು ಪದಕಗಳನ್ನು ಗೆದ್ದಾಗ ಪ್ರಧಾನ ಮಂತ್ರಿಯವರ ಟ್ವೀಟ್ ಖಾತೆಯಿಂದ ಪ್ರತಿ ಬಾರಿಯೂ ಅಭಿನಂದನೆ ಸಲ್ಲಿಸಲಾಗಿತ್ತು. ಅಂತೆಯೇ ನಾಳೆ ಅರವ ನಿವಾಸಕ್ಕೆ ಹೋಗುವವರಿಗೂ ಅವರು ಅಭಿನಂದನೆ ಸಲ್ಲಿಸಲಿದ್ದಾರೆ. ಸ್ಪರ್ಧೆಗೆ ತೆರಳಿದ ಎಲ್ಲರೂ ಈ ಕೂಟದಲ್ಲಿ ಪಾಲ್ಗೊಳ್ಳುವರೇ ಎಂಬ ಬಗ್ಗೆ ಮಾಹಿತಿ ಇಲ್ಲ.

ಕಾಮನ್ವೆಲ್ತ್‌ ಗೇಮ್ಸ್‌ಗೆ ಅಥ್ಲೀಟ್‌ಗಳು ಹೋಗುವ ಮೊದಲು ನರೇಂದ್ರ ಮೋದಿ ಅವರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾತನಾಡಿ ಉತ್ತೇಜನ ನೀಡಿದ್ದರು. ಇದೀಗ ಅವರು ಶಹಬ್ಬಾಸ್‌ಗಿರಿ ನೀಡಲಿದ್ದಾರೆ.

ಒಲಿಂಪಿಕ್ಸ್‌ ಬಳಿಕವೂ ಅಭಿನಂದಿಸಿದ್ದರು

ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದು ಬಂದ ಅಥ್ಲೀಟ್‌ಗಳನ್ನು ನಿವಾಸಕ್ಕೆ ಆಹ್ವಾನಿಸಿ ಆತಿಥ್ಯ ನೀಡಿದ್ದರು. ಮೋದಿಯವರ ಸತ್ಕಾರಕ್ಕೆ ಕ್ರೀಡಾಪಟುಗಳು ಮೆಚ್ಚಿ ಮಾತನಾಡಿದ್ದರು.

ಇದನ್ನೂ ಓದಿ | ವಿಸ್ತಾರ Explainer | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ 61 ಪದಕಗಳು, ಇದು ಸಾಕೊ ಇನ್ನೂ ಬೇಕೋ?

Exit mobile version