Site icon Vistara News

Yuvraj Singh : ಅಂಗವಿಕಲರಂತೆ ರೀಲ್ಸ್​ ಮಾಡಿದ ಯುವರಾಜ್​, ಹರ್ಭಜನ್​ ಸಿಂಗ್ ವಿರುದ್ಧ ದೂರು ದಾಖಲು

Yuvraj Singh

ನವದೆಹಲಿ: ಲೆಜೆಂಡ್ಸ್ ವಿಶ್ವ ಕಪ್​ನ ಉದ್ಘಾಟನಾ ಆವೃತ್ತಿಯಲ್ಲಿ ಗೆಲುವು ಸಾಧಿಸಿದ ಖುಷಿಯಲ್ಲಿ ಮಾಡಿದ ವಿಡಿಯೊ ಭಾರತದ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್ (Yuvraj Singh), ಹರ್ಭಜನ್ ಸಿಂಗ್, ಸುರೇಶ್ ರೈನಾ ಮತ್ತು ಗುರ್ಕೀರತ್ ಮಾನ್ ಗೆ ಸಮಸ್ಯೆಯಾಗಿ ಮಾರ್ಪಟ್ಟಿದೆ. ಎಲ್ಲರ ವಿರುದ್ಧ ಅಂಗವಿಕಲರನ್ನು ಅಪಹಾಸ್ಯ ಮಾಡಿದ ಆರೋಪದ ಮೇಲೆ ಪೊಲೀಸ್ ದೂರು ದಾಖಲಿಸಲಾಗಿದೆ. ವಿಶೇಷವೆಂದರೆ, ಮಾಜಿ ಕ್ರಿಕೆಟಿಗರು ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್​ನಲ್ಲಿ ರೀಲ್ ಅನ್ನು ಪೋಸ್ಟ್ ಮಾಡಿದ್ದರು. ಅಲ್ಲಿ ಅವರು ನಟ ವಿಕ್ಕಿ ಕೌಶಲ್ ಅವರ ಮುಂಬರುವ ಚಿತ್ರ ಬ್ಯಾಡ್ ನ್ಯೂಸ್​ನ ವೈರಲ್ ಹಾಡಿನ ‘ತೌಬಾ-ತೌಬಾ’ ಹಾಡಿಗೆ ಹೆಜ್ಜೆ ಹಾಕಿದ್ದರು.

ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್ ಫೈನಲ್​​ನಲ್ಲಿ ಭಾಗವಹಿಸಿದ ನಂತರ ಕ್ರಿಕೆಟಿಗರು ತಮ್ಮ ದೇಹದ ಸ್ಥಿತಿಯನ್ನು ಹಾಸ್ಯಮಯ ರೀತಿಯಲ್ಲಿ ತೋರಿಸಿದ್ದರು. ಈ ಕಿರು ಕ್ಲಿಪ್ ವಿಕ್ಕಿ ಕೌಶಲ್ ಅವರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಅವರು ಪೋಸ್ಟ್​ಗೆ ನಗುವ ಎಮೋಜಿಗಳೊಂದಿಗೆ ಕಾಮೆಂಟ್ ಮಾಡಿದ್ದರು. ಆದಾಗ್ಯೂ, ಭಾರತದ ಪ್ಯಾರಾ-ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಅವರು ಕ್ರಿಕೆಟಿಗರು ವಿಕಲಚೇತನರನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಟೀಕಿಸಿದ್ದರು. ಅವರ ಆಕ್ರೋಶದ ನಂತರ, ಹರ್ಭಜನ್. ರೀಲ್ ಅನ್ನು ತೆಗೆದು ತಮ್ಮ ಇನ್ಸ್ಟಾಗ್ರಾಮ್ ಮೂಲಕ ಕ್ಷಮೆ ಯಾಚಿಸಿದ್ದರು.

ಅಂಗವಿಕಲರ ಉದ್ಯೋಗ ಉತ್ತೇಜನದ ರಾಷ್ಟ್ರೀಯ ಕೇಂದ್ರದ (ಎನ್​ಸಿಪಿಇಡಿಪಿ) ಕಾರ್ಯನಿರ್ವಾಹಕ ನಿರ್ದೇಶಕ ಅರ್ಮಾನ್ ಅಲಿ ಅವರು ಅಮರ್ ಕಾಲೋನಿ ಪೊಲೀಸ್ ಠಾಣೆಯ ಎಸ್ಎಚ್ಒಗೆ ಕ್ರಿಕೆಟಿಗರ ವಿರುದ್ಧ ದೂರು ದಾಖಲಿಸಿರುವುದರಿಂದ ಈ ವಿಷಯ ಮತ್ತಷ್ಟು ಬೆಳೆದಿದೆ.

ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅರ್ಮಾನ್ ಸೂಚನೆ

ಕ್ರಿಕೆಟಿಗರಲ್ಲದೆ, ಮೆಟಾ ಇಂಡಿಯಾದ ಉಪಾಧ್ಯಕ್ಷೆ ಮತ್ತು ವ್ಯವಸ್ಥಾಪಕ ನಿರ್ದೇಶಕಿ ಸಂಧ್ಯಾ ದೇವನಾಥನ್ ಕೂಡ ಮಾಹಿತಿ ತಂತ್ರಜ್ಞಾನ ಕಾಯ್ದೆ, 2000 ಅನ್ನು ಉಲ್ಲಂಘಿಸಿದ್ದಾರೆ ಎಂದು ದೂರು ನೀಡಲಾಗಿದೆ. “ಈ ವೀಡಿಯೊ ಭಾರತದ ಸಂವಿಧಾನದ 21 ನೇ ವಿಧಿಯ ಸ್ಪಷ್ಟ ಉಲ್ಲಂಘನೆಯಾಗಿದೆ, ಇದು ಪ್ರತಿಯೊಬ್ಬ ವ್ಯಕ್ತಿಗೆ ಘನತೆಯಿಂದ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ. ಇದು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಕಾಯ್ದೆ, 2016 ರ ಸೆಕ್ಷನ್ 92 ಅನ್ನು ಉಲ್ಲಂಘಿಸುತ್ತದೆ ಮತ್ತು ನಿಪುನ್ ಮಲ್ಹೋತ್ರಾ ವಿರುದ್ಧ ಸೋನಿ ಪಿಕ್ಚರ್ಸ್ ಫಿಲ್ಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (2004 ಎಸ್ಸಿಸಿ ಆನ್ಲೈನ್ ಎಸ್ಸಿ 1639) ಪ್ರಕರಣದಲ್ಲಿ ಸ್ಥಾಪಿಸಲಾದ ಸುಪ್ರೀಂ ಕೋರ್ಟ್​ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆ ” ಎಂದು ಅರ್ಮಾನ್ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Chennai Super King : ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಕ್ರಿಕೆಟ್ ಅಕಾಡೆಮಿ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​

ಕ್ರಿಕೆಟಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅರ್ಮಾನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. “ಅವರ ಕೃತ್ಯಗಳಿಗಾಗಿ ಅವರಿಗೆ ದಂಡ ವಿಧಿಸಬೇಕು” ಎಂದು ಅರ್ಮಾನ್ ಅಭಿಪ್ರಾಯಪಟ್ಟಿದ್ದಾರೆ.

Exit mobile version