Site icon Vistara News

Hardik Pandya : ಹಾರ್ದಿಕ್ ಪಾಂಡ್ಯ ಸಹೋದರನ ಪೊಲೀಸ್​ ಕಸ್ಟಡಿ ವಿಸ್ತರಣೆ; ಏನಿದು ಕೇಸ್​?

Hardik Pandya

ನವದೆಹಲಿ: ಕ್ರಿಕೆಟಿಗ ಸಹೋದರರಾದ ಹಾರ್ದಿಕ್ ಹಾಗೂ ಕೃಣಾಲ್ ಪಾಂಡ್ಯ (Hardik Pandya) ಅವರಿಗೆ ಜಂಟಿ ವ್ಯವಹಾರ ಮಾಡುವ ನೆಪದಲ್ಲಿ 4 ಕೋಟಿ ರೂ.ಗಳನ್ನು ವಂಚಿಸಿದ ಅವರ ಮಲ ಸಹೋದರ ವೈಭವ್ ಪೊಲೀಸ್ ಕಸ್ಟಡಿಯನ್ನು ನ್ಯಾಯಾಲಯ ಮಂಗಳವಾರ ಏಪ್ರಿಲ್ 19 ರವರೆಗೆ ವಿಸ್ತರಿಸಿದೆ. ಆರೋಪಿ ವೈಭವ್ ಪಾಂಡ್ಯ ಅವರ ಹಿಂದಿನ ರಿಮಾಂಡ್ ಅವಧಿ ಮುಗಿದ ನಂತರ ಅವರನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಹೆಚ್ಚಿನ ತನಿಖೆಗಾಗಿ ವೈಭವ್ ಅವರ ಕಸ್ಟಡಿ ವಿಸ್ತರಿಸುವಂತೆ ಮುಂಬೈ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (ಇಒಡಬ್ಲ್ಯೂ) ನ್ಯಾಯಾಲಯಕ್ಕೆ ಮನವಿ ಮಾಡಿದೆ. ವೈಭವ್ ಪರ ವಕೀಲ ನಿರಂಜನ್ ಮುಂಡರಗಿ ಅವರು ಇಒಡಬ್ಲ್ಯೂ ಮನವಿಯನ್ನು ವಿರೋಧಿಸದ ಕಾರಣ, ನ್ಯಾಯಾಲಯವು ಅವರ ಕಸ್ಟಡಿಯನ್ನು ಶುಕ್ರವಾರದವರೆಗೆ ವಿಸ್ತರಿಸಿತು. ಕ್ರಿಕೆಟಿಗ ಸಹೋದರರಿಗೆ 4 ಕೋಟಿ ರೂ.ಗಿಂತ ಹೆಚ್ಚು ವಂಚಿಸಿದ ಆರೋಪದ ಮೇಲೆ 37 ವರ್ಷದ ವೈಭವ್ ಏಪ್ರಿಲ್ 8 ರಂದು ಬಂಧನಕ್ಕೆ ಒಳಗಾಗಿದ್ದ.

ಆರಂಭದಲ್ಲಿ ವೈಭವ್ ಅವರು ‘ಇದು ಕೌಟುಂಬಿಕ ವಿಷಯ. ತಪ್ಪು ತಿಳುವಳಿಕೆಯಿಂದಾಗಿ ಪ್ರಕರಣ ದಾಖಲಿಸಲಾಗಿದೆ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಕ್ರಿಕೆಟಿಗ ಸಹೋದರರು ವೈಭವ್ ಅವರೊಂದಿಗೆ ಮುಂಬೈನಲ್ಲಿ ಪಾಲುದಾರಿಕೆ ಆಧಾರಿತ ಸಂಸ್ಥೆಯನ್ನು ಸ್ಥಾಪಿಸಿದ್ದರು. 2021 ರಲ್ಲಿ ಅವರು ಪಾಲಿಮರ್ ವ್ಯವಹಾರವನ್ನು ಪ್ರಾರಂಭಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಉದ್ಯಮದ ಪಾಲುದಾರಿಕೆಯ ನಿಯಮಗಳ ಪ್ರಕಾರ ಹಾರ್ದಿಕ್ ಹಾಗೂ ಕೃಣಾಳ್​ ತಲಾ 40 ಪ್ರತಿಶತದಷ್ಟು ಮತ್ತು ವೈಭವ್ ಉಳಿದ ಶೇಕಡಾ 20 ಮೊತ್ತವನ್ನು ಬಂಡವಾಳವನ್ನು ಹೂಡಿಕೆ ಮಾಡಿದ್ದ . ನಿಯಮಗಳ ಪ್ರಕಾರ, ವೈಭವ್ ವ್ಯವಹಾರದ ದೈನಂದಿನ ಕಾರ್ಯಾಚರಣೆಗಳನ್ನು ನಿರ್ವಹಿಸಬೇಕಾಗಿತ್ತು. ಲಾಭವನ್ನು ಹೂಡಿಕೆ ಅನುಪಾತದಲ್ಲಿ ವಿತರಿಸಬೇಕಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: T20 World Cup : ವಿಶ್ವ ಕಪ್​ ತಂಡದಲ್ಲಿ ಹಾರ್ದಿಕ್ ಪಾಂಡ್ಯಗೆ ನೋ ಚಾನ್ಸ್​; ಆಯ್ಕೆದಾರರ ಇಂಗಿತ ಬಹಿರಂಗ

ಆದರೆ ಪಾಂಡ್ಯ ಸಹೋದರರಿಗೆ ಮಾಹಿತಿ ನೀಡದೆ ವೈಭವ್ ಅದೇ ವ್ಯವಹಾರದಲ್ಲಿ ಮತ್ತೊಂದು ಸಂಸ್ಥೆಯನ್ನು ಸ್ಥಾಪಿಸಿದ್ದ. ಇದರಿಂದಾಗಿ ಪಾಲುದಾರಿಕೆ ಒಪ್ಪಂದವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಲಾಗಿತ್ತು. ಹೊಸ ಕಂಪನಿ ಸ್ಥಾಪಿಸುವುದರೊಂದಿಗೆ, ಮೂಲ ಪಾಲುದಾರಿಕೆ ಸಂಸ್ಥೆಯ ಲಾಭವು ಕ್ಷೀಣಿಸಿ ಸುಮಾರು 3 ಕೋಟಿ ರೂ.ಗಳ ನಷ್ಟ ಎದುರಿಸಿತ್ತು.

ಈ ಅವಧಿಯಲ್ಲಿ, ವೈಭವ್ ತನ್ನ ಸ್ವಂತ ಲಾಭವನ್ನು ಶೇಕಡಾ 20 ರಿಂದ 33 ರಷ್ಟು ಹೆಚ್ಚಿಸಿ ಹಾರ್ದಿಕ್ ಪಾಂಡ್ಯ ಮತ್ತು ಅವರ ಸಹೋದರನಿಗೆ ನಷ್ಟವನ್ನುಂಟು ಮಾಡಿದ್ದ ವೈಭವ್ ಪಾಲುದಾರಿಕೆ ಖಾತೆಯಿಂದ ಹಣವನ್ನು ತನ್ನ ಸ್ವಂತಕ್ಕೆ ಬಳಸಿದ್ದ. ಇದು ಸುಮಾರು 1 ಕೋಟಿ ರೂಪಾಯಿ. ಹೀಗಾಗಿ ನಷ್ಟವಾದ 3 ಕೋಟಿ ಹಾಗೂ ದುರ್ಬಳಕೆ ಮಾಡಿಕೊಂಡ 1 ಕೋಟಿ ಸೇರಿ ನಾಲ್ಕು ಕೋಟಿ ರೂಪಾಯಿ ವಂಚನೆ ಪ್ರಕರಣ ಹೂಡಲಾಗಿತ್ತು.

Exit mobile version