ಬೆಂಗಳೂರು: ಅಮೆರಿಕದ ಲಾಸ್ ಏಂಜಲೀಸ್ನಲ್ಲಿ 2028ರಲ್ಲಿ ನಡೆಯಲಿರುವ ಒಲಿಂಪಿಕ್ ಕ್ರೀಡಾಕೂಟಕ್ಕೆ ಸೇರಿಸುವಲ್ಲಿನ ತನ್ನ ಪ್ರಯತ್ನದಲ್ಲಿ ಜಾಗತಿಕ ಕ್ರಿಕೆಟ್ ಕ್ಷೇತ್ರ (Cricket News) ಯಶಸ್ಸು ಸಾಧಿಸಿದೆ. ವರದಿಗಳ ಪ್ರಕಾರ ಕ್ರಿಕೆಟ್, ಫ್ಲ್ಯಾಗ್ ಫುಟ್ಬಾಲ್, ಬೇಸ್ಬಾಲ್ ಮತ್ತು ಸಾಫ್ಟ್ಬಾಲ್ ಕ್ರೀಡೆಗಳು ಅನುಮೋದನೆಗೆ ಕಳುಹಿಸಲಾಗಿರುವ ಒಲಿಂಪಿಕ್ಸ್ ಕ್ರೀಡೆಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿವೆ. ಮುಂಬರುವ ಟಿ20 ವಿಶ್ವ ಕಪ್ನ ಆತಿಥ್ಯವನ್ನು ಅಮೆರಿಕಕ್ಕೆ ಜಂಟಿಯಾಗಿ ವೆಸ್ಟ್ ಇಂಡೀಸ್ ಜತೆ ನೀಡಲಾಗಿದೆ. ಇದೇ ಕಾರಣಕ್ಕೆ ಅಲ್ಲಿಂದ ನಾಲ್ಕು ವರ್ಷಗಳ ಬಳಿಕ ನಡೆಯುವ ಒಲಿಂಪಿಕ್ಸ್ನಲ್ಲೂ ಕ್ರಿಕೆಟ್ಗೂ ಮಹತ್ವ ಸಿಕ್ಕಿದೆ ಎನ್ನಲಾಗಿದೆ.
ಲಾಸ್ ಏಂಜಲೀಸ್ ಒಲಿಂಪಿಕ್ಸ್ ಸಂಘಟನಾ ಸಮಿತಿಯು ಮುಂದಿನ 24 ಗಂಟೆಗಳಲ್ಲಿ ಕ್ರೀಡಾಕೂಟಕ್ಕೆ ಸೇರ್ಪಡೆ ಮಾಡಬಹುದಾಗ ಕ್ರೀಡೆಗಳ ಆಯ್ಕೆ ಕುರಿತು ಸಾರ್ವಜನಿಕರಿಂದ ಅಭಿಪ್ರಾಯ ಪಡೆಯಲು ಮುಂದಾಗಿದೆ. ಈ ವೇಳೆ ಕ್ರಿಕೆಟ್ ಜತೆಗೆ ಉಳಿದ ಕ್ರೀಡೆಗಳ ಆಯ್ಕೆಯನ್ನೂ ಖಚಿತಗೊಳಿಸಬಹುದು ಎನ್ನಲಾಗಿದೆ.
ಲಾಸ್ ಏಂಜಲೀಸ್ 2028 ಒಲಿಂಪಿಕ್ಸ್ ಆಯೋಜಕರು ಕ್ರಿಕೆಟ್ ಅನ್ನು ಕ್ರೀಡಾಕೂಟದಲ್ಲಿ ಸೇರಿಸಲು ಶಿಫಾರಸು ಮಾಡಿರುವ ನಿರ್ಧಾರಕ್ಕೆ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸಂತಸ ವ್ಯಕ್ತಪಡಿಸಿದೆ. ಎರಡು ವರ್ಷಗಳ ಪ್ರಕ್ರಿಯೆಯ ಪ್ರಯತ್ನದ ಬಳಿಕ. ಲಾಸ್ ಏಂಜಲೀಸ್ನಲ್ಲಿ ಸೇರಿಸಬೇಕಾದ ಕ್ರೀಡೆಗಳ ಪಟ್ಟಿಯಲ್ಲಿ ಕ್ರಿಕೆಟ್ ಅನ್ನು ಸೇರ್ಪಡೆಗೊಳಿಸಿದೆ. ಇದನ್ನು ಈಗ ಐಒಸಿಗೆ ಅನುಮೋದನೆಗಾಗಿ ಕಳುಹಿಸಬೇಕಾಗಿದೆ.
ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಮಾತನಾಡಿ, “ಎಲ್ಎ 28 ಕ್ರಿಕೆಟ್ ಅನ್ನು ಒಲಿಂಪಿಕ್ಸ್ನಲ್ಲಿ ಸೇರಿಸಲು ಶಿಫಾರಸು ಮಾಡಿರುವುದರಿಂದ ನಮಗೆ ಸಂತೋಷವಾಗಿದೆ. ಇದು ಅಂತಿಮ ನಿರ್ಧಾರವಲ್ಲದಿದ್ದರೂ, ಒಂದು ಶತಮಾನಕ್ಕೂ ಹೆಚ್ಚು ಅವಧಿಯಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಅನ್ನು ನೋಡುವ ನಿಟ್ಟಿನಲ್ಲಿ ಇದು ಬಹಳ ಮಹತ್ವದ ಹೆಜ್ಜೆಯಾಗಿದೆ ಎಂದು ಹೇಳಿದರು.
ಇದನ್ನೂ ಓದಿ : ಫೈನಲ್ ಪ್ರವೇಶಿಸಿ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಲವ್ಲಿನಾ ಬೋರ್ಗಹೈನ್
ಕಳೆದ ಎರಡು ವರ್ಷಗಳಲ್ಲಿ ಹೊಸ ಕ್ರೀಡಾ ಮೌಲ್ಯಮಾಪನ ಪ್ರಕ್ರಿಯೆಯಲ್ಲಿ ಲಾಸ್ ಏಂಜಲಿಈಸ್ 28 ನೀಡಿದ ಬೆಂಬಲಕ್ಕಾಗಿ ನಾನು ಧನ್ಯವಾದ ಹೇಳಲು ಬಯಸುತ್ತೇನೆ .ಮುಂದಿನ ವಾರ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸಮಯದಲ್ಲಿ ಭಾರತದಲ್ಲಿ ನಡೆಯಲಿರುವ ಐಒಸಿ ಅಧಿವೇಶನದಲ್ಲಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ನಾವು ಎದುರು ನೋಡುತ್ತಿದ್ದೇವೆ ಎಂದು ಅವರು ಹೇಳಿದರು.
ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಯ್ಕೆಯಾಗುವುದು ಯಾವಾಗ?
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಕಾಂಗ್ರೆಸ್ ಸಭೆ ಅಕ್ಟೋಬರ್ 16ರಂದು ಮುಂಬೈನಲ್ಲಿ ನಡೆಯಲಿದೆ. ಆ ಅಧಿವೇಶನದಲ್ಲಿ, 5 ಕ್ರೀಡೆಗಳನ್ನು ಸೇರಿಸುವ ಕುರಿತು ಮತ ಲೆಕ್ಕಾಚಾರ ನಡೆಯುತ್ತದೆ ಹಾಗೂ ಅಂತಿಮವಾಗಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಕ್ರಿಕೆಟ್ ಜೊತೆಗೆ ಇತರ 5 ಕ್ರೀಡೆಗಳನ್ನು ಪಟ್ಟಿಗೆ ಸೇರಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.
ನ್ಯಾಷನಲ್ ಫುಟ್ಬಾಲ್ ಲೀಗ್ (ಎನ್ಎಫ್ಎಲ್) ನ ಅಗಾಧ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು ಯುಎಸ್ ಮೂಲದ ಕ್ರೀಡಾಕೂಟಕ್ಕೆ ಆಕರ್ಷಕ ಆಯ್ಕೆಯಾಗಿರುವ ಫ್ಲ್ಯಾಗ್ ಫುಟ್ಬಾಲ್, ಸ್ಕ್ವಾಷ್ ಮತ್ತು ಲ್ಯಾಕ್ರೋಸ್ ಕ್ರೀಡೆಯನ್ನೂ ಅನುಮೋದನೆಗೆ ಕಳುಹಿಸಿದೆ. 2022 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ನ ಅದ್ಭುತ ಯಶಸ್ಸಿನ ನಂತರ ಕ್ರಿಕೆಟ್ ಸೇರ್ಪಡೆ ಒತ್ತಾಯ ಹೆಚ್ಚಾಗಿತ್ತು. ಒಲಿಂಪಿಕ್ಸ್ನಲ್ಲಿ ಕ್ರಿಕೆಟ್ ಕಾಣಿಸಿಕೊಂಡಿದ್ದು 1900ರಲ್ಲಿ ಕೊನೇ ಬಾರಿ. ಹೀಗಾಗಿ ಇದು ಮಹತ್ವದ ಹೆಜ್ಜೆ ಎನಿಸಲಿದೆ.