ಮುಂಬಯಿ: ವಿಶ್ವದ ಅತಿದೊಡ್ಡ ಮತ್ತು ಶ್ರೇಷ್ಠ ಕ್ರೀಡಾಕೂಟವಾದ ಒಲಿಂಪಿಕ್ಸ್‌ನಲ್ಲಿ 1900ರ ಬಳಿಕ ಕ್ರಿಕೆಟ್ ಸ್ಪರ್ಧೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ(Los Angeles 2028 Olympics) ಕ್ರಿಕೆಟ್(2028 Olympics Cricket) ಪಂದ್ಯವನ್ನು ಪದಕ ಸ್ಪರ್ಧೆಯಾಗಿ ಅಳವಡಿಸಲು ನಿರ್ಧರಿಸಲಾಗಿದೆ. ಜತೆಗೆ ಫ್ಲ್ಯಾಗ್ ಫುಟ್‌ಬಾಲ್, ಬೇಸ್‌ಬಾಲ್, ಸಾಫ್ಟ್ ಬಾಲ್ ಕ್ರೀಡೆಗಳೂ ಇರಲಿವೆ.
ಸೋಮವಾರ ಮುಂಬಯಿಯಲ್ಲಿ ನಡೆದ 141ನೇ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಸಭೆಯಲ್ಲಿ ಈ ನಿರ್ಧಾರವನ್ನು ಅಧಿಕೃತಗೊಳಿಸಲಾಯಿತು. ಅಕ್ಟೋಬರ್ 10ರಂದೇ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸೇರ್ಪಡೆಗೊಳ್ಳಲಿದೆ ಎನ್ನುವುದು ತಿಳಿದುಬಂದಿತ್ತು. ಆದರೆ ಇದು ಅಧಿಕೃತವಾಗಿರಲಿಲ್ಲ. ಈಗ ಇದು ಅಧಿಕೃತಗೊಂಡಿದೆ. ಕ್ರಿಕೆಟ್ ಸೇರಿ ಒಟ್ಟು 5 ಕ್ರೀಡೆಗಳನ್ನು ಸೇರಿಸಲಾಗಿದೆ. ಸಾಫ್ಟ್‌ಬಾಲ್, ಲ್ಯಾಕ್ರೋಸ್, ಫ್ಲ್ಯಾಗ್ ಫುಟ್‌ಬಾಲ್, ಬೇಸ್‌ಬಾಲ್, ಸ್ಕ್ವಾಷ್ ಇರಲಿದೆ.
ಇದೇ ವರ್ಷದ ಆರಂಭದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಆರು ತಂಡಗಳ ಟಿ20 ಕೂಟದ ಕ್ರಿಕೆಟ್ ನಡೆಸುವಂತೆ ವೇಳಾಪಟ್ಟಿಯನ್ನು ರಚಿಸಿ ಗೇಮ್ಸ್‌ನ ಸಂಘಟನ(IOC) ಸಮಿತಿಗೆ ಶಿಫಾರಸು ಮಾಡಿತ್ತು. ಇದೀಗ ಒಲಿಂಪಿಕ್ಸ್ ಸಮಿತಿಯಿಂದ ಕ್ರಿಕೆಟ್ ಸೇರ್ಪಡೆಯಾಗಿದೆ. ಆದರೆ ಯಾವ ತಂಡ ಮತ್ತು ಯಾವ ಆಧಾರದಲ್ಲಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎನ್ನುವುದು ಸದ್ಯದ ಕುತೂಹಲ.
The proposal from the Organising Committee of the Olympic Games Los Angeles 2028 (@LA28) to include five new sports in the programme has been accepted by the IOC Session.
— IOC MEDIA (@iocmedia) October 16, 2023
Baseball/softball, cricket (T20), flag football, lacrosse (sixes) and squash will be in the programme at…
ಒಂದು ಬಾರಿ ನಡೆದಿತ್ತು ಕ್ರಿಕೆಟ್
ಒಲಿಂಪಿಕ್ಸ್‌ನಲ್ಲಿ ಇಷ್ಟರವರೆಗೆ ಒಮ್ಮೆ ಮಾತ್ರ ಕ್ರಿಕೆಟ್ ಸ್ಪರ್ಧೆ ನಡೆದಿದೆ. 1896ರ ಉದ್ಘಾಟನ ಏಥೆನ್ಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆಯನ್ನು ಸೇರ್ಪಡೆಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಭಾಗವಹಿಸುವ ತಂಡಗಳ ಕೊರತೆಯಿಂದ ರದ್ದು ಮಾಡಲಾಗಿತ್ತು. ಆದರೆ ನಾಲ್ಕು ವರ್ಷಗಳ ಬಳಿಕ 1900ರ ಪ್ಯಾರಿಸ್ ಒಲಿಪಿಕ್ಸ್‌ನಲ್ಲಿ ಕ್ರಿಕೆಟ್ ಸ್ಪರ್ಧೆ ಮೊದಲ ಬಾರಿ ಜರಗಿದೆ. ಗ್ರೇಟ್ ಬ್ರಿಟನ್ ಮತ್ತು ಆತಿಥೇಯ ಫ್ರಾನ್ಸ್ ಮಾತ್ರ ಸ್ಪರ್ಧಿಸಿದ್ದು, ಬ್ರಿಟನ್ ಚಿನ್ನ ಜಯಿಸಿತ್ತು.ಸೈಂಟ್ ಲೂಯಿಸ್‌ನಲ್ಲಿ 1904ರಲ್ಲಿ ನಡೆದ ಒಲಿಂಪಿಕ್ಸನಲ್ಲಿ ಕ್ರಿಕೆಟ್ ಸ್ಪರ್ಧೆಗೆ ಸಿದ್ಧಥೆ ನಡೆಸಲಾಗಿದ್ದರೂ ಅಂತಿಮವಾಗಿ ರದ್ದುಗೊಂಡಿತ್ತು. ಆ ಬಳಿಕ ಯಾವುದೇ ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್ ಸ್ಪರ್ಧೆ ನಡೆದಿಲ್ಲ.
ಇದನ್ನೂ ಓದಿ 2028 Olympics Cricket: ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್; ಐಒಸಿ ಒಲವು
ಕ್ರಿಕೆಟ್ ಸೇರ್ಪಡೆಗೆ ಹಲವು ವರ್ಷಗಳಿಂದ ಶ್ರಮ
ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟವನ್ನು ಸೇರಿಸಬೇಕು ಎಂಬ ಚರ್ಚೆ ಹಲವಾರು ವರ್ಷಗಳಿಂದ ನಡೆಯುತ್ತಲೇ ಬಂದಿದೆ. ಇದಕ್ಕೆ ಹಲವಾರು ಕಾರಣಗಳಿವೆ. ನ್ಯಾಯಯುತವಾಗಿ ಪಂದ್ಯ ನಡೆಸುವುದು ಕಷ್ಟ. ಕ್ರಿಕೆಟ್ ಅಭಿಮಾನಿಗಳಿಗೂ ಇದು ತಿಳಿದಿರುವಂತದ್ದೆ. ಹಲವಾರು ಬಾರಿ, ತೀರ್ಪುಗಳು ವಿವಾದ ಸೃಷ್ಟಿಸಿರುವುದೂ ಉಂಟು. ಎಷ್ಟೇ ತಂತ್ರಜ್ಞಾನಗಳನ್ನು ಬಳಸುತ್ತಿದ್ದರೂ, ಕೆಲವೊಂದು ಬಾರಿ ಅಂಪೈರ್ ಗಳಿಂದ ತಪ್ಪು ನಿರ್ಧಾರಗಳು ಬಂದಿವೆ. ಇನ್ನೊಂದೆಡೆ ಸಮಯದ ಅಭಾವ ಕೂಡ ಮಹತ್ವ ಪಡೆದುಕೊಂಡಿದೆ. ಕ್ರಿಕೆಟ್ ಹೋರಾಂಗಣ ಆಟವಾದ ಕಾರಣ ಒಂದು ಪಂದ್ಯ ನಡೆಯಬೇಕಿದ್ದರೆ ಕನಿಷ್ಠ 2-3 ಘಂಟೆಗಳನ್ನು ಮೀಸಲಿಡಬೇಕು. ಇದು ಕೂಡ ಹಿನ್ನಡೆಗೆ ಕಾರಣವಾಗಿರಬಹುದು. ಆದರೆ ಈಗ ಈ ಸಮಸ್ಯೆ ಬಗೆಹರಿದಿದೆ. ಲಾಸ್ ಏಂಜಲೀಸ್ ಸಂಘಟಕರು ಒಂದು ಕೈ ನೋಡಿಯೇ ಬಿಡೋಣ ಎಂದು ಕ್ರಿಕೆಟ್ ಟೂರ್ನಿ ನಡೆಸಲು ಸೈ ಎಂದಿದ್ದಾರೆ.