ಅಹಮದಾಬಾದ್: ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೇ ಹಾಗೂ ಕೊನೇ ಟೆಸ್ಟ್ ಪಂದ್ಯ ಎರಡೂ ದೇಶಗಳ ಕ್ರಿಕೆಟ್ ರಾಜತಾಂತ್ರಿಕತೆಗೆ ಸಾಕ್ಷಿಯಾಯಿತು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಆಲ್ಬನೀಸ್ ಪಂದ್ಯದ ಮೊದಲ ದಿನ ಅಹಮದಾಬಾದ್ನ ಮೊಟೆರಾ ಸ್ಟೇಡಿಯಮ್ನಲ್ಲಿ ಉಪಸ್ಥಿತರಿದ್ದರು. ಎರಡೂ ದೇಶಗಳ ಗಣ್ಯರು ಹಾಗೂ ಉದ್ಯಮಿಗಳು ತಮ್ಮ ತಮ್ಮ ರಾಷ್ಟ್ರ ನಾಯಕರ ಜತೆ ಹಾಜರಿದ್ದರು.
ಪಂದ್ಯ ಆರಂಭಗೊಳ್ಳುವ ಮೊದಲು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್ ಸ್ಟೇಡಿಯಮ್ಗೆ ಆಗಮಿಸಿದರು. ಮೈದಾನದಲ್ಲಿ ಬಿಸಿಸಿಐ ಅಧಿಕಾರಿಗಳು ಹಾಗೂ ಸ್ಥಳೀಯ ಗಣ್ಯರಿಂದ ಗೌರವ ಸ್ವೀಕರಿಸಿದ ಅವರು ಬಳಿಕ ನಡೆದ ಕಾರ್ಯಕ್ರಮದಲ್ಲಿ ಕ್ರಿಕೆಟ್ ತಂಡದ ನಾಯಕರಿಗೆ ಟೋಪಿ ಹಸ್ತಾಂತರಿಸಿದರು. ಪ್ರಧಾನಿ ಮೋದಿ ಅವರು ರೋಹಿತ್ ಶರ್ಮಗೆ ಟೋಪಿ ನೀಡಿದರೆ, ಆಲ್ಬನೀಸ್ ಆಸ್ಟ್ರೇಲಿಯಾ ತಂಡದ ನಾಯಕ ಸ್ಟೀವ್ಸ್ಮಿತ್ಗೆ ಕ್ಯಾಪ್ ಕೊಟ್ಟರು.
ಎರಡೂ ದೇಶಗಳ ಪ್ರಧಾನಿಗಳು ಸ್ಮರಣೀಯ ಫೋಟೋಗಳಿಗೆ ಪೋಸ್ ಕೊಟ್ಟರು. ಇದೇ ವೇಳೆ ಮಾಜಿ ಕೋಚ್ ಹಾಗೂ ವೀಕ್ಷಕ ವಿವರಣೆಗಾರ ರವಿಶಾಸ್ತ್ರಿ ಅವರು ಪ್ರಧಾನಿಗಳ ಉಪಸ್ಥಿತಿಯ ಮಹತ್ವವನ್ನು ವಿವರಿಸಿದರು.
ತಮ್ಮಿಬ್ಬರ ಸೆಲ್ಫಿಯನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಆಸ್ಟ್ರೇಲಿಯಾ ಪ್ರಧಾನಿ ಆಲ್ಬನೀಸ್ ಅವರು, 75 ವರ್ಷಗಳ ಗೆಳೆತನದ ಪ್ರತೀಕ ಎಂದು ಬರೆದುಕೊಂಡಿದ್ದಾರೆ. ಪಂದ್ಯದ ಮೊದಲ ದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವೀಕ್ಷಕ ವಿವರಣೆ ನೀಡಿದ್ದು ವಿಶೇಷ.
ಪ್ರಧಾನಿ ಮೋದಿಯ ಭೇಟಿ ಸಂದರ್ಭದ ಚಿತ್ರಗಳು
ಅದಕ್ಕೂ ಮೊದಲು ಎರಡೂ ದೇಶಗಳ ಪ್ರಧಾನಿಗಳು ಗಾಲ್ಫ್ ಕಾರ್ ಮೇಲೆ ನಿಂತು ಮೈದಾನಕ್ಕೊಂದು ಸುತ್ತು ಹೊಡೆದರು. ಸಾವಿರಾರ ಪ್ರೇಕ್ಷಕರು ಕರತಾಡನದ ಮೂಲಕ ತಮ್ಮ ದೇಶದ ನಾಯಕರಿಗೆ ಅಭಿನಂದನೆ ಸಲ್ಲಿಸಿದರು. ನಾಯಕರ ಭೇಟಿ ಹಿನ್ನೆಲೆಯಲ್ಲಿ ಮೈದಾನಕ್ಕೆ ಎಸ್ಪಿಜಿ ಭದ್ರತೆ ಒದಗಿಸಲಾಗಿತ್ತು. ಸುಮಾರು 1 ಲಕ್ಷ ಕ್ರಿಕೆಟ್ ಅಭಿಮಾನಿಗಳು ಮೊದಲ ದಿನ ಪಂದ್ಯ ವೀಕ್ಷಣೆ ಮಾಡಲಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ಪ್ರಕಾರ ಮಹಿಳೆಯರು ಬರೀ ಗೃಹಿಣಿಯರಲ್ಲ, ರಾಷ್ಟ್ರ ನಿರ್ಮಾಣದ ರೂವಾರಿಗಳು; ವಿಡಿಯೊ ಸಂದೇಶ ಕೊಟ್ಟ ರುಚಿರಾ ಕಾಂಬೋಜ್
ಪ್ರಧಾನಿ ಮೋದಿ ಅವರ ಆಹ್ವಾನದ ಮೇರೆಗೆ ಆಸ್ಟ್ರೇಲಿಯಾ ಪ್ರಧಾನಿ ಆಂಟೋನಿ ಆಲ್ಬನೀಸ್ ಭಾರತಕ್ಕೆ ಭೇಟಿ ಕೊಟ್ಟಿದ್ದಾರೆ. ಸ್ಟೇಡಿಯಮ್ನಿಂದ ನಿರ್ಗಮಿಸಲಿರುವ ಎರಡೂ ದೇಶಗಳ ನಾಯಕರು ಅಹಮದಾಬಾದ್ನಲ್ಲಿ ನಡೆಯಲಿರುವ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.