ಲೀಸೆಸ್ಟರ್: ಆಧುನಿಕ ಯುಗದ ಕ್ರಿಕೆಟಿಗರೆಲ್ಲರೂ ಟೆಸ್ಟ್ ಮಾದರಿಯಲ್ಲಿ ೧೦ ಸಹಸ್ರ ರನ್‌ಗಳ ವಿಶ್ವ ದಾಖಲೆ ಮಾಡುವ ಮೊದಲೇ ಅಂಥ ಬೃಹತ್ ಸಾಧನೆ ಮಾಡಿದವರು ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಆರಂಭಿಕ ಆಟಗಾರ ಸುನೀಲ್ ಗವಾಸ್ಕರ್ ಅವರು. ಹೀಗಾಗಿ ಟೆಸ್ಟ್ ಕ್ರಿಕೆಟ್ ಎಂದಾಗ ಕ್ರಿಕೆಟ್ ಕಾರಿಡಾರ್‌ನಲ್ಲಿ ಮೊದಲು ಕೇಳಿ ಬರುವ ಹೆಸರು ಅವರದ್ದೇ. ಇಂತಹ ಶ್ರೇಷ್ಠ ಆಟಗಾರನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ Leicestershire ಕ್ಲಬ್ ತನ್ನ ಸ್ಟೇಡಿಯಮ್‌ಗೆ ಅವರ ಹೆಸರನ್ನು ನಾಮಕರಣ ಮಾಡಲಿದೆ.
ಶನಿವಾರ ನಾಮಕರಣ ನಡೆಯಲಿದ್ದು, ಸುನೀಲ್ ಗವಾಸ್ಕರ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮೂಲಕ ಇಂಗ್ಲೆಂಡ್‌ನ ಕ್ರಿಕೆಟ್ ಸ್ಟೇಡಿಯಮ್ ಒಂದಕ್ಕೆ ಮೊಟ್ಟಮೊದಲ ಬಾರಿಗೆ ಭಾರತೀಯ ಕ್ರಿಕೆಟರ್ ಒಬ್ಬರ ಹೆಸರು ನಾಮಕರಣವಾಗಲಿದೆ.
ತಮ್ಮ ಹೆಸರನ್ನು ಇಂಗ್ಲೆಂಡ್ ಸ್ಟೇಡಿಯಮ್ ಒಂದಕ್ಕೆ ಇಡುವ ಬಗ್ಗೆ ೭೩ ವರ್ಷದ ಗವಾಸ್ಕರ್ ಸಂತಸ ವ್ಯಕ್ತಪಡಿಸಿದ್ದಾರೆ. “ಲೀಸೆಸ್ಟರ್‌ಶೈರ್ ಸ್ಟೇಡಿಯಮ್‌ಗೆ ನನ್ನ ಹೆಸರಿಡಲು ಮುಂದಾಗಿರುವುದು ಅತ್ಯಂತ ಸಂತಸದ ಸಂಗತಿ. ಕ್ರಿಕೆಟ್‌ಗೆ ಅದರಲ್ಲೂ ಭಾರತೀಯ ಕ್ರಿಕೆಟ್ ತಂಡಕ್ಕೆ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಪ್ರದೇಶವದು,” ಎಂದು ಗವಾಸ್ಕರ್ ಹೇಳಿದ್ದಾರೆ.
ಯಾರಿಟ್ಟರು ಹೆಸರು?
ಸುನೀಲ್ ಗವಾಸ್ಕರ್ ಅವರ ಹೆಸರನ್ನು ಐದು ಎಕರೆಗಿಂತ ವಿಶಾಲವಾಗಿರುವ ಸ್ಟೇಡಿಯಮ್‌ಗೆ ಇಡಲು ಭಾರತೀಯ ಮೂಲದ ಲೀಸೆಸ್ಟರ್ ಸಂಸದರೇ ಕಾರಣ. ಅವರು ಲಿಸೆಸ್ಟರ್ ಸಂಸದರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು. ಹೀಗಾಗಿ ಅವರು ಭಾರತೀಯ ಕ್ರಿಕೆಟಿಗನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಸ್ಟೇಡಿಯಮ್‌ಗೆ ಗವಾಸ್ಕರ್ ಹೆಸರಿಡಲು ನಿರ್ಧರಿಸಿದ್ದಾರೆ.
ಸುನೀಲ್ ಗವಾಸ್ಕರ್ ಹೆಸರನ್ನು ವಿದೇಶಗಳ ಕ್ರೀಡಾಂಗಣಕ್ಕೆ ಇಡುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುಂಚೆಯೇ ಅಮೆರಿಕದ ಕೆಂಟುಕಿ ಮತ್ತು ತಾಂಜಾನಿಯಾದ ಜಾನ್ಸಿಬಾರ್‌ನಲ್ಲಿ ಕ್ರೀಡಾಂಗಣಗಳಿಗೆ ಲಿಟಲ್ ಮಾಸ್ಟರ್ ಹೆಸರು ನಾಮಕರಣ ಮಾಡಲಾಗಿದೆ.
ಮಾರ್ಚ್ 7, 1987 ರಂದು ಸುನೀಲ್ ಗವಾಸ್ಕರ್ ಟೆಸ್ಟ್ ಕ್ರಿಕೆಟ್‌ನಲ್ಲಿ ೧೦ ಸಾವಿರ ರನ್ ಪೂರೈಸಿ ವಿಶ್ವ ದಾಖಲೆ ಮಾಡಿದ್ದರು. ಆ ಬಳಿಕ ಸಚಿನ್ ತೆಂಡೂಲ್ಕರ್ , ರಿಕಿ ಪಾಂಟಿಂಗ್, ಜಾಕ್ ಕಾಲಿಸ್ ಮತ್ತು ಬ್ರಿಯಾನ್ ಲಾರಾ ಸೇರಿದಂತೆ ಅನೇಕ ಬ್ಯಾಟ್ಸ್‌ಮನ್‌ಗಳು ಈ ಸಾಧನೆ ಮಾಡಿದ್ದಾರೆ.
ಇದನ್ನೂ ಓದಿ | Edgebasotn ಪಿಚ್ ಮೇಲೆ ಮೇಲೇನೆ ಗವಾಸ್ಕರ್‌ಗೆ ಗುಮಾನಿ, ಯಾಕೆ?