ಮುಂಬಯಿ: ಪ್ಯಾರಿಸ್ ಒಲಿಂಪಿಕ್ಸ್ ಶೂಟಿಂಗ್ನಲ್ಲಿ ಅವಳಿ ಪದಕ ಗೆದ್ದ ಮನು ಭಾಕರ್(Manu Bhaker) ಅವರು ಭಾರತ ಟಿ20 ಕ್ರಿಕೆಟ್ ತಂಡದ ನಾಯಕ ಸೂರ್ಯಕುಮಾರ್ ಯಾದವ್(Suryakumar Yadav) ಅವರನ್ನು ಮುಂಬೈಯಲ್ಲಿ ಭೇಟಿಯಾಗಿದ್ದಾರೆ. ಉಭಯ ಕ್ರೀಡಾಪಟುಗಳು ವಿಭಿನ್ನ ಶೈಲಿಯಲ್ಲಿ ಫೋಟೊಗೆ ಪೋಸ್ ಕೊಟ್ಟಿರುವುದು ನೆಟ್ಟಿಗರ ಗಮನಸೆಳೆದಿದೆ. ‘ಕ್ರಿಕೆಟ್ ಮೀಟ್ಸ್ ಶೂಟಿಂಗ್!'(Cricket Meets Shooting) ಎಂದು ನೆಟ್ಟಿಗರು ಈ ಫೋಟೊಗೆ ಕಮೆಂಟ್ ಮಾಡಿದ್ದಾರೆ.
ಒಲಿಂಪಿಕ್ಸ್ ಪದಕ ಗೆದ್ದ ಬಳಿಕ ಮೂರು ತಿಂಗಳ ವಿಶ್ರಾಂತಿ ಬಯಸಿರುವ ಮನು ಭಾಕರ್ ತಮ್ಮ ನೆಚ್ಚಿನ ಕಾರ್ಯ ಚಟುವಟಿಯಲ್ಲಿ ತೊಡಗಿಕೊಂಡಿದ್ದಾರೆ. ಮುಂಬೈಗೆ ಆಗಮಿಸಿದ್ದ ವೇಳೆ ಕ್ರಿಕೆಟಿಗ ಸೂರ್ಯಕುಮಾರ್ ಭೇಟಿಯಾಗಿದ್ದಾರೆ. ಈ ವೇಳೆ ಸೂರ್ಯಕುಮಾರ್ ಗನ್ ಹಿಡಿದಂತೆ, ಮನು ಭಾಕರ್ ಬ್ಯಾಟ್ ಬೀಸಿದಂತೆ ನಗುಮುಗದಿಂದಲೇ ಫೋಟೊ ತೆಗೆಸಿಕೊಂಡಿದ್ದಾರೆ.
ಮನು ಭಾಕರ್ ಅವರು ಈ ಫೋಟೊವನ್ನು ತಮ್ಮ ಟ್ವಿಟರ್ ಎಕ್ಸ್ನಲ್ಲಿ ಹಂಚಿಕೊಂಡಿದ್ದು, “ಟೀಮ್ ಇಂಡಿಯಾದ ಮಿಸ್ಟರ್ 360 ಅವರೊಂದಿಗೆ ಹೊಸ ಕ್ರೀಡೆಯ ಕಲಿಕೆಯ ತಂತ್ರಗಳು!” ಎಂದು ಬರೆದುಕೊಂಡಿದ್ದಾರೆ. ಒಲಿಂಪಿಕ್ಸ್ ಪದಕ ಗೆದ್ದಾಗ ಮನು ಭಾಕರ್ಗೆ ಸೂರ್ಯಕುಮಾರ್ ಟ್ವಿಟರ್ ಎಕ್ಸ್ನಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದರು.
ಇದನ್ನೂ ಓದಿ Manu Bhaker: ನಟ ವಿಜಯ್ ಗೊತ್ತು, ಸಿಎಂ ಸ್ಟಾಲಿನ್ ಗೊತ್ತಿಲ್ಲ ಎಂದು ನಕ್ಕ ಮನು ಭಾಕರ್; ವಿಡಿಯೊ ವೈರಲ್
ರೋಹಿತ್ ಶರ್ಮ ಅವರು ಟಿ20 ಕ್ರಿಕೆಟ್ಗೆ ನಿವೃತ್ತಿ ಹೇಳಿದ ಕಾರಣ ಭಾರತ ತಂಡದ ಟಿ20 ನಾಯಕತ್ವ ಸೂರ್ಯಕುಮಾರ್ ಹೆಗಲೇರಿದೆ. ಅವರ ಪೂರ್ಣ ಪ್ರಮಾಣದ ನಾಯಕತ್ವದಲ್ಲಿ ಆಡಿದ್ದ ಕಳೆದ ಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ 3-0 ಅಂತರದಿಂದ ಗೆದ್ದು ಬೀಗಿತ್ತು. ಸದ್ಯ ದೇಶೀಯ ಕ್ರಿಕೆಟ್ ಆಡಲಿರುವ ಸೂರ್ಯಕುಮಾರ್ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿಯೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಸೂರ್ಯಕುಮಾರ್ ಯಾದವ್ ಜಮ್ಮು ಮತ್ತು ಕಾಶ್ಮೀರ ವಿರುದ್ಧ ಆಗಸ್ಟ್ 27ರಂದು ನಡೆಯುವ “ಬುಚ್ಚಿಬಾಬು ಟ್ರೋಫಿ’ ಆಹ್ವಾನಿತ(Buchi Babu Tournament) ಪಂದ್ಯಾವಳಿಯಲ್ಲಿ ಆಡಲಿದ್ದಾರೆ. ಇದಾದ ಬಳಿಕ ದುಲೀಪ್ ಟ್ರೋಫಿ ಆಡಲಿದ್ದಾರೆ.
22 ವರ್ಷದ ಮನು ಭಾಕರ್ ಪ್ಯಾರಿಸ್ನಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಮಹಿಳಾ ಶೂಟರ್ ಎಂಬ ಹೆಗ್ಗಳಿಕೆಗೆಪಾತ್ರರಾಗಿದ್ದರು. ಜತೆಗೆ 12 ವರ್ಷಗಳ ಬಳಿಕ ಒಲಿಂಪಿಕ್ ಶೂಟಿಂಗ್ನಲ್ಲಿ ದೇಶಕ್ಕೆ ಪದಕ ಗೆದ್ದ ಸಾಧನೆ ಮಾಡಿದ್ದರು.
ಪದಕ ಗೆದ್ದ ಬಳಿಕ ಭಾಕರ್(Manu Bhaker) ಅವರ ಜಾಹೀರಾತು ಮೌಲ್ಯದಲ್ಲಿ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ. ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್ ಕೇರ್, ನ್ಯೂಟ್ರೀಷಿಯನ್ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಒಲಿಂಪಿಕ್ಸ್ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್ ಆಕ್ಟಿವ್ವೇರ್ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.