Site icon Vistara News

2028 Olympics Cricket: ಲಾಸ್‌ ಏಂಜಲೀಸ್ ಒಲಿಂಪಿಕ್ಸ್​ನಲ್ಲಿ ಕ್ರಿಕೆಟ್​; ಐಒಸಿ ಒಲವು

cricket olympics

ಲಾಸ್​ ಏಂಜಲೀಸ್​: 2028ರಲ್ಲಿ ಲಾಸ್‌ ಏಂಜಲೀಸ್​ನಲ್ಲಿ(Los Angeles Olympics) ನಡೆಯಲಿರುವ ಒಲಿಂಪಿಕ್ಸ್‌(2028 Olympics Cricket) ಕ್ರೀಡಾ ಕೂಟದಲ್ಲಿ ಕ್ರಿಕೆಟ್​ ಸೇರಿಸಲು ಗೇಮ್ಸ್‌ನ ಸಂಘಟನ ಸಮಿತಿ ಒಲವು ತೋರಿದೆ ಎಂದು ವರದಿಯಾಗಿದೆ. ಇದೇ ವರ್ಷದ ಆರಂಭದಲ್ಲಿ ಅಂ​ತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಲಾಸ್‌ ಏಂಜಲೀಸ್​ ಒಲಿಂಪಿಕ್ಸ್​ನಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಆರು ತಂಡಗಳ ಟಿ20 ಕೂಟದ ಕ್ರಿಕೆಟ್​ ನಡೆಸುವಂತೆ ವೇಳಾಪಟ್ಟಿಯನ್ನು ರಚಿಸಿ ಗೇಮ್ಸ್‌ನ ಸಂಘಟನ(IOC) ಸಮಿತಿಗೆ ಶಿಫಾರಸು ಮಾಡಿತ್ತು. ಇದೀಗ ಒಲಿಂಪಿಕ್ಸ್​ ಸಮಿತಿಯಿಂದ ಕ್ರಿಕೆಟ್​ ಸೇರ್ಪಡೆಗೆ ಗ್ರೀನ್​ ಸಿಗ್ನಲ್​ ಸಿಗುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಕ್ರಿಕೆಟ್‌ ಸೇರ್ಪಡೆಯ ಕುರಿತು ಮುಂದಿನ ಅಕ್ಟೋಬರ್‌ ವೇಳೆಗೆ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ನಿರ್ಧಾರ ತೆಗೆದುಕೊಳ್ಳಲಿದೆ. ಇದಕ್ಕಿಂದ ಮೊದಲು ಸಂಘಟನಾ ಸಮಿತಿಯು ಹೊಸ ಕ್ರೀಡೆಗಳ ಪಟ್ಟಿಯನ್ನು ಅಂತಿ ಮಗೊಳಿಸಲಿದೆ ಎಂದು ತಿಳಿದುಬಂದಿದೆ.

ಕ್ರಿಕೆಟ್‌ ಅಲ್ಲದೇ ಬೇಸ್‌ಬಾಲ್‌/ಸಾಫ್ಟ್ಬಾಲ್‌, ಕರಾಟೆ, ಕಿಕ್‌ಬಾಕ್ಸಿಂಗ್‌, ಸ್ಕ್ವಾಷ್‌ ಸೇರಿದಂತೆ ಕೆಲವು ಆಟಗಳು 2028ರ ಒಲಿಂಪಿಕ್ಸ್‌ಗೆ ಸೇರ್ಪಡೆಯಾಗುವ ಸಾಧ್ಯತೆಯಿದೆ. ಒಂದೊಮ್ಮೆ ಕ್ರಿಕೆಟ್​ ಸೇರ್ಪಡೆಯಾದರೆ ಯಾವ ತಂಡಗಳು ಸ್ಥಾನ ಪಡೆಯಲಿದೆ ಮತ್ತು ಯಾವ ಆಧಾರದಲ್ಲಿ 6 ತಂಡಗಳನ್ನು ಆಯ್ಕೆ ಮಾಡಲಾಗುವುದು ಎನ್ನುವುದು ಸದ್ಯದ ಕುತೂಹಲ.

ಕ್ರಿಕೆಟ್​ ಸೇರ್ಪಡೆಗೆ ಹಲವು ವರ್ಷಗಳಿಂದ ಶ್ರಮ

ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಆಟವನ್ನು ಸೇರಿಸಬೇಕು ಎಂಬ ಚರ್ಚೆ ಹಲವಾರು ವರ್ಷಗಳಿಂದ ನಡೆಯುತ್ತಿದೆ. ಈಗಲೂ ಅದು ಚರ್ಚಿತ ವಿಷಯವೇ. ಇದಕ್ಕೆ ಹಲವಾರು ಕಾರಣಗಳಿವೆ. ನ್ಯಾಯಯುತವಾಗಿ ಪಂದ್ಯ ನಡೆಸುವುದು ಕಷ್ಟ. ಕ್ರಿಕೆಟ್ ಅಭಿಮಾನಿಗಳಿಗೂ ಇದು ತಿಳಿದಿರುವಂತದ್ದೆ. ಹಲವಾರು ಬಾರಿ, ತೀರ್ಪುಗಳು ವಿವಾದ ಸೃಷ್ಟಿಸಿರುವುದೂ ಉಂಟು. ಎಷ್ಟೇ ತಂತ್ರಜ್ಞಾನಗಳನ್ನು ಬಳಸುತ್ತಿದ್ದರೂ, ಕೆಲವೊಂದು ಬಾರಿ ಅಂಪೈರ್‌ ಗಳಿಂದ ತಪ್ಪು ನಿರ್ಧಾರಗಳು ಬಂದಿವೆ. ಹೀಗಾಗಿ, ಸರಿಯಾದ ನಿರ್ಧಾರ ಕೈಗೊಳ್ಳಲು ಆಗದಿರುವುದು ಒಂದು ಕಾರಣ ಎನ್ನಬಹುದು.

ಇನ್ನೊಂದೆಡೆ ಸಮಯದ ಅಭಾವ ಕೂಡ ಮಹತ್ವ ಪಡೆದುಕೊಂಡಿದೆ. ಕ್ರಿಕೆಟ್​ ಹೋರಾಂಗಣ ಆಟವಾದ ಕಾರಣ ಒಂದು ಪಂದ್ಯ ನಡೆಯಬೇಕಿದ್ದರೆ ಕನಿಷ್ಠ 2-3 ಘಂಟೆಗಳನ್ನು ಮೀಸಲಿಡಬೇಕು. ಏನೇ ಅಂದರೂ ಟಿ10 ಆಟ ಆಡಿಸಿದರೂ 120 ನಿಮಿಷಗಳು ಬೇಕಾಗಿದೆ. ಇದು ಕೂಡ ಹಿನ್ನಡೆಗೆ ಕಾರಣವಾಗಿರಬಹುದು.

ಇದನ್ನೂ ಓದಿ Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​ ಪಡೆದ ವಿಕಾಸ್‌, ಪರಮ್‌ಜೀತ್‌

ಒಂದು ಬಾರಿ ನಡೆದಿತ್ತು ಕ್ರಿಕೆಟ್​

ಒಲಿಂಪಿಕ್ಸ್‌ನಲ್ಲಿ ಇಷ್ಟರವರೆಗೆ ಒಮ್ಮೆ ಮಾತ್ರ ಕ್ರಿಕೆಟ್‌ ಸ್ಪರ್ಧೆ ನಡೆದಿದೆ. 1896ರ ಉದ್ಘಾಟನ ಏಥೆನ್ಸ್‌ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆಯನ್ನು ಸೇರ್ಪಡೆಗೊಳಿಸಲು ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ ಭಾಗವಹಿಸುವ ತಂಡಗಳ ಕೊರತೆಯಿಂದ ರದ್ದು ಮಾಡಲಾಗಿತ್ತು. ಆದರೆ ನಾಲ್ಕು ವರ್ಷಗಳ ಬಳಿಕ 1900ರ ಪ್ಯಾರಿಸ್‌ ಒಲಿಪಿಕ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆ ಮೊದಲ ಬಾರಿ ಜರಗಿದೆ. ಗ್ರೇಟ್‌ ಬ್ರಿಟನ್‌ ಮತ್ತು ಆತಿಥೇಯ ಫ್ರಾನ್ಸ್‌ ಮಾತ್ರ ಸ್ಪರ್ಧಿಸಿದ್ದು, ಬ್ರಿಟನ್‌ ಚಿನ್ನ ಜಯಿಸಿತ್ತು.ಸೈಂಟ್‌ ಲೂಯಿಸ್‌ನಲ್ಲಿ 1904ರಲ್ಲಿ ನಡೆದ ಒಲಿಂಪಿಕ್ಸನಲ್ಲಿ ಕ್ರಿಕೆಟ್‌ ಸ್ಪರ್ಧೆಗೆ ಸಿದ್ಧಥೆ ನಡೆಸಲಾಗಿದ್ದರೂ ಅಂತಿಮವಾಗಿ ರದ್ದುಗೊಂಡಿತ್ತು. ಆ ಬಳಿಕ ಯಾವುದೇ ಒಲಿಂಪಿಕ್ಸ್‌ನಲ್ಲೂ ಕ್ರಿಕೆಟ್‌ ಸ್ಪರ್ಧೆ ನಡೆದಿಲ್ಲ.

ಈ ಬಾರಿಯ ಏಷ್ಯನ್​ ಗೇಮ್ಸ್​ನಲ್ಲಿ ಕ್ರಿಕೆಟ್​

ಇದೇ ತಿಂಗಳು ಚೀನದ ಹ್ಯಾಂಗ್‌ಝೂನಲ್ಲಿ 19ನೇ ಏಷ್ಯನ್‌ ಗೇಮ್ಸ್‌ ನಡೆಯಲಿದೆ. ಕ್ರಿಕೆಟ್‌ ಸ್ಪರ್ಧೆ ಇಂತಹ ಕೂಟಗಳಲ್ಲಿ ಪದಕ ಸ್ಪರ್ಧೆಯಾಗಿ ನಡೆದಿರುವುದು ಕೇವಲ ಎರಡು ಸಲ ಮಾತ್ರ. ಈ ಬಾರಿಯ ಗೇಮ್ಸ್‌ನಲ್ಲಿ ಭಾರತದ ಕ್ರಿಕೆಟ್‌ ತಂಡ ಮೊದಲ ಬಾರಿ ಆಡುತ್ತಿದೆ. ಟೂರ್ನಿ ಸೆಪ್ಟೆಂಬರ್​ 23ರಿಂದ ಅಕ್ಟೋಬರ್​ 8ರ ವರೆಗೆ ನಡೆಯಲಿದೆ. ಈಗಾಗಕಲೇ ಭಾರತ ತಂಡ ಕೂಡ ಪ್ರಕಟಗೊಂಡಿದೆ. ಭಾರತ ಪುರುಷರ ತಂಡವನ್ನು ಋತುರಾಜ್​ ಗಾಯಕ್ವಾಡ್​ ಮುನ್ನಡೆಸಲಿದ್ದಾರೆ. ಏಷ್ಯನ್‌ ಗೇಮ್ಸ್‌ನಲ್ಲಿ ಇಷ್ಟರವರೆಗೆ ಕೇವಲ ಎರಡು ಬಾರಿ ಕ್ರಿಕೆಟ್‌ ಸ್ಪರ್ಧೆ ನಡೆದಿದೆ. 2010 (ಗ್ವಾಂಗ್‌ಝೂ) ಮತ್ತು 2014 (ಇಂಚಿಯಾನ್‌)ರ ಗೇಮ್ಸ್‌ನಲ್ಲಿ ಕ್ರಿಕೆಟ್‌ ಸ್ಪರ್ಧೆ ನಡೆದಿದ್ದು ಇಲ್ಲಿ ಕ್ರಮವಾಗಿ ಬಾಂಗ್ಲಾದೇಶ ಮತ್ತು ಶ್ರೀಲಂಕಾ ಚಿನ್ನದ ಪದಕ ಗೆದ್ದಿತ್ತು. ಮಹಿಳೆಯರ ವಿಭಾಗದಲ್ಲಿ ಪಾಕಿಸ್ತಾನ ಎರಡೂ ಆವೃತ್ತಿಯಲ್ಲಿ ಚಿನ್ನ ಗೆದ್ದು ಮೆರೆದಾಡಿತ್ತು.

Exit mobile version