ಬೆಂಗಳೂರು: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಟಿ೨೦ ಸರಣಿಯ ಕೊನೆಯ ಪಂದ್ಯ ಮಳೆಯ ಕಾರಣದಿಂದ ರದ್ದಾಗಿದೆ. ಹೀಗಾಗಿ ೨-೨ ಸಮಬಲದೊಂದಿಗೆ ಟಿ೨೦ ಸರಣಿ ಅಂತ್ಯಗೊಂಡಂತಾಗಿದೆ.
ಮಳೆಯ ಕಾರಣದಿಂದ ೫೦ ನಿಮಿಷ ತಡವಾಗಿ ಪಂದ್ಯ ಆರಂಭಗೊಂಡಿದ್ದರಿಂದ ೨೦ ಓವರ್‌ಗೆ ಬದಲಾಗಿ ೧೯ ಓವರ್‌ಗಳ ಪಂದ್ಯ ನಿಗದಿಯಾಗಿತ್ತು. ಆದರೆ ಆಟ ಆರಂಭವಾಗಿ ೩.೩ ಓವರ್‌ನಲ್ಲಿ ( ಇಷ್ಟರಲ್ಲೇ ಟೀಮ್ ಇಂಡಿಯಾ ೨ ವಿಕೇಟ್ ಕಳೆದುಕೊಂಡು ೨೮ ರನ್ ಮಾಡಿತ್ತು.) ಮತ್ತೆ ಮಳೆ ಶುರುವಾಯಿತು. ಹೀಗಾಗಿ ಪಂದ್ಯವನ್ನು ಮತ್ತೆ ಸ್ಥಗಿತಗೊಳಿಸಲಾಗಿತ್ತು. ಐದು ಓವರ್‌ಗಳ ಪಂದ್ಯ ಆಡಿಸಲೂ ಮಳೆ ಬಿಡದೇ ಇದ್ದುದ್ದರಿಂದ ಪಂದ್ಯವನ್ನೇ ರದ್ದುಪಡಿಸುವ ತೀರ್ಮಾನ ತೆಗೆದುಕೊಳ್ಳಲಾಯಿತು.
ಇದರಿಂದಾಗಿ ಈ ಪಂದ್ಯ ಗೆದ್ದು ಸರಣಿಯನ್ನು ತನ್ನದಾಗಿಸಿಕೊಳ್ಳುವ ಭಾರತದ ಕನಸು ಮಳೆಯ ಕೆಸರ ಪಾಲಾಯಿತು. ಭಾರತ ತಂಡ ಮೊದಲೆರಡು ಪಂದ್ಯದಲ್ಲಿ ಸೋತರೂ ಮೂರು ಮತ್ತು ನಾಲ್ಕನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಮಬಲ ಮಾಡಿಕೊಂಡಿತ್ತು. ಇಂದಿನ ನಿರ್ಣಾಯಕ ಪಂದ್ಯದಲ್ಲಿ ಗೆಲ್ಲುವ ನೆಚ್ಚಿನ ತಂಡವೆನಿಸಿತ್ತು.
ಕಳೆದ ೩-೪ ದಿನಗಳಿಂದ ಬೆಂಗಳೂರು ಹಾಗೂ ಸುತ್ತಮುತ್ತ ಮಳೆಯಾಗಿದ್ದು, ಭಾನುವಾರ ರಾತ್ರಿಯೂ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮೋಡ ಕವಿದ ವಾತಾವರಣ ಇದ್ದುದ್ದರಿಂದ ವರುಣನ ಕಾಟದ ನಿರೀಕ್ಷೆಯಲ್ಲಿಯೇ ಪಂದ್ಯ ಆರಂಭಿಸಲಾಗಿತ್ತು. ನಿರೀಕ್ಷೆಯಂತೆ ಎಂ ಚಿನ್ನಸ್ವಾಮಿ ಕ್ರೀಡಾಂಗಣವನ್ನು ತೊಳೆದ ಮಳೆರಾಯ, ಭಾರತೀಯರ ಗೆಲುವಿನ ಕನಸನ್ನೂ ನೀರು ಪಾಲು ಮಾಡಿತು.
ಇದನ್ನೂ ಓದಿ | http://Ind vs Sa T20 | ಭಾರತ ಗೆದ್ದ ರೋಚಕ ಪಂದ್ಯದಲ್ಲಿ ಮಿಂಚಿದ ದಿನೇಶ್ ಕಾರ್ತಿಕ್