Site icon Vistara News

ICC World Cup 2023: ವಿಶ್ವಕಪ್​ಗೆ ಕೇನ್ ವಿಲಿಯಮ್ಸನ್ ಫಿಟ್​; ನಿಟ್ಟುಸಿರು ಬಿಟ್ಟ ಕಿವೀಸ್​

Kane Williamson Fit To Be New Zealand Squad

ವೆಲ್ಲಿಂಗ್ಟನ್​: 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL)ನಲ್ಲಿ ಫೀಲ್ಡಿಂಗ್​ ನಡೆಸುವ ವೇಳೆ ಮೊಣಕಾಲಿನ ಗಾಯಕ್ಕೆ ಒಳಗಾಗಿದ್ದ ಕೇನ್ ವಿಲಿಯಮ್ಸನ್(Kane Williamson) ನ್ಯೂಜಿಲ್ಯಾಂಡ್​ನ ವಿಶ್ವಕಪ್(ICC World Cup 2023) ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಅವರ ಆಗಮನದಿಂದ ತಂಡದ ಆತ್ಮವಿಶ್ವಾಸ ಇನ್ನಷ್ಟು ಹೆಚ್ಚಾಗಿದೆ. ತಂಡವನ್ನು ಅವರೇ ಮುನ್ನಡೆಸಲಿದ್ದಾರೆ ಎಂದು ಕಿವೀಸ್​ ಕ್ರಿಕೆಟ್​ ಮಂಡಳಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

2 ತಿಂಗಳ ಹಿಂದೆ ಕೇನ್​ ವಿಲಿಯಮ್ಸನ್ ಅವರು ತಮ್ಮ ಗಾಯದ ಬಗ್ಗೆ ಮಾಹಿತಿ ನೀಡಿದ್ದರು. “ನಾನು ಚೇತರಿಕೆಯ ಹಾದಿಯಲ್ಲಿ ಸಾಗುತ್ತಿದ್ದೇನೆ. ವಾರದಿಂದ ವಾರಕ್ಕೆ ಗುಣಮುಖರಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸುತ್ತಿದ್ದೇನೆ. ಈ ಮೊದಲು ಇಷ್ಟು ದೊಡ್ಡ ಮಟ್ಟದ ಗಾಯಕ್ಕೆ ಒಳಗಾಗಿರಲಿಲ್ಲ. ಹಂತಹಂತವಾಗಿ ಚೇತರಿಸಿಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸಿದ್ದೇನೆ. ವಿಶ್ವ ಕಪ್​ ವೇಳೆ ಸುಧಾರಿಸಕೊಳ್ಳುವ ವಿಶ್ವಾಸವಿದೆ” ಎಂದು ಹೇಳಿದ್ದರು. ಇದೀಗ ಸಂಪೂರ್ಣ ಫಿಟ್​ ಆಗಿದ್ದು ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆಯುವುದು ಖಚಿತವಾಗಿದೆ. ಈಗಾಗಲೇ ಅವರು ತಮ್ಮ ಫಿಟ್​ನೆಸ್​ ಬಗ್ಗೆ ಮುಖ್ಯ ತರಬೇತುದಾರ ಗ್ಯಾರಿ ಸ್ಟೇಡ್ ಅವರಿಗೆ ವರದಿಯನ್ನು ನೀಡಿದ್ದಾರೆ.

ಆರಂಭಿಕ ಪಂದ್ಯದಲ್ಲೇ ಗಾಯ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ಚೆನ್ನೈ ಸೂಪರ್​ ಕಿಂಗ್ಸ್​(Chennai Super Kings) ವಿರುದ್ಧದ ಉದ್ಘಾಟನ ಐಪಿಎಲ್​ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​(gujarat titans)​ ಪರ ಫೀಲ್ಡಿಂಗ್ ಮಾಡುವ ವೇಳೆ ಕೇನ್​ ವಿಲಿಯಮ್ಸನ್ ಗಾಯಕ್ಕೆ ಒಳಗಾಗಿದ್ದರು. ಋತುರಾಜ್​ ಗಾಯಕ್ವಾಡ್​ ಬಾರಿಸಿದ ಚೆಂಡನನ್ನು ಬೌಂಡರಿ ಗೆರೆಯ ಬಳಿ ತಡೆಯಲು ವಿಲಿಯಮ್ಸನ್​ ಮೇಲಕ್ಕೆ ಜಿಗಿದಿದ್ದರು. ಚೆಂಡನ್ನು ತಡೆದು ಎದುರಾಳಿ ತಂಡ ಆರು ರನ್​ಗಳು ಸಂಗ್ರಹಿಸದಂತೆ ನೋಡಿಕೊಂಡ ಹೊರತಾಗಿಯೂ ಅವರು ಕಳಕ್ಕೆ ಬೀಳುವಾಗ ಮಂಡಿಯೂರಿದ್ದರು. ಮಂಡಿ ಜೋರಾಗಿ ನೆಲಕ್ಕೆ ಅಪ್ಪಳಿಸಿದ ಅವರು ಗಂಭೀರ ಗಾಯಗೊಂಡಿದ್ದರು. ಬಳಿಕ ಅವರು ತವರಿಗೆ ತೆರಳಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ಇದನ್ನೂ ಓದಿ Kane Williamson | ನ್ಯೂಜಿಲ್ಯಾಂಡ್​ ಟೆಸ್ಟ್​ ತಂಡದ ನಾಯಕತ್ವ ತೊರೆದ ಕೇನ್​ ವಿಲಿಯಮ್ಸನ್​​; ಸೌಥಿ ನೂತನ ನಾಯಕ

ಕಳೆದ ಬಾರಿ ರನ್ನರ್​ ಅಪ್​

2019ರ ಏಕದಿನ ವಿಶ್ವಕಪ್​ನಲ್ಲಿ ವಿಲಿಯಮ್ಸನ್ ನಾಯಕತ್ವದಲ್ಲಿ ತಂಡ ಫೈನಲ್​ ತಲುಪಿತ್ತು. ಇಲ್ಲಿ ಇಂಗ್ಲೆಂಡ್​ ವಿರುದ್ಧ ಬೌಂಡರಿ ಆಧಾರದಲ್ಲಿ ಸೋಲು ಕಂಡು ದ್ವಿತೀಯ ಸ್ಥಾನ ಪಡೆದಿತ್ತು. ಈ ಬಾರಿಯ ಟೂರ್ನಿಯಲ್ಲಿ ಕಪ್​ ಗೆಲ್ಲುವ ಯೋಜನೆಯಲ್ಲಿದ್ದ ಕಿವೀಸ್​ಗೆ ವಿಲಿಯಮ್ಸನ್ ಅಲಭ್ಯತೆಯ ಚಿಂತೆ ಕಾಡುತ್ತಿತ್ತು. ಆದರೆ ಈ ಚಿಂತೆ ಈಗ ದೂರವಾಗಿದೆ. ಈ ಬಾರಿಯೂ ಅವರೇ ತಂಡವನ್ನು ಮುನ್ನಡೆಸಲಿದ್ದಾರೆ.

ಮೊದಲ ಪಂದ್ಯದಲ್ಲಿ ಇಂಗ್ಲೆಂಡ್​ ಎದುರಾಳಿ

ಅಕ್ಟೋಬರ್​ 5ರಿಂದ ನವೆಂಬರ್​ 19ರ ವರೆಗೆ ಭಾರತದ ಆತಿಥ್ಯದಲ್ಲಿ ಏಕದಿನ ವಿಶ್ವಕಪ್​ ಟೂರ್ನಿ ನಡೆಯಲಿದೆ. ನ್ಯೂಜಿಲ್ಯಾಂಡ್​ ತಂಡ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ವಿರುದ್ಧ ಕಣಕ್ಕಿಳಿಯುವ ಮೂಲಕ ತನ್ನ ವಿಶ್ವಕಪ್​ ಅಭಿಯಾನ ಆರಂಭಿಸಲಿದೆ. ಈ ಪಂದ್ಯ ಅಹಮದಾಬಾದ್​ನ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆಯಲಿದೆ.

Exit mobile version