Site icon Vistara News

World Cup 2023 : ಇದು ಆಘಾತಕಾರಿ ಸುದ್ದಿ; ಭಾರತದಲ್ಲಿ ನಡೆಯುವ ವಿಶ್ವ ಕಪ್​ಗೆ ವೆಸ್ಟ್​ ಇಂಡೀಸ್ ತಂಡ ಇಲ್ಲ!

west indies Cricket team

ನವ ದೆಹಲಿ: ವಿಶ್ವ ಕ್ರಿಕೆಟ್​ ಕ್ಷೇತ್ರಕ್ಕೆ ಇದು ಊಹಿಸಲೂ ಸಾಧ್ಯವಿಲ್ಲದ ವಾರ್ತೆ. ಒಂದು ಕಾಲದಲ್ಲಿ ಕ್ರಿಕೆಟ್​ ಕ್ಷೇತ್ರದಲ್ಲಿ ಮೆರೆದಾಡಿದ್ದ ಕೆರಿಬಿಯನ್​ ದೈತ್ಯರ​ ಬಳಗ ಮುಂದಿನ ಏಕ ದಿನ ವಿಶ್ವ ಕಪ್​ಗೆ (World Cup 2023) ಅರ್ಹತೆ ಪಡೆಯಲು ವಿಫಲಗೊಂಡಿದೆ. ಭಾರತದ ಆತಿಥ್ಯದಲ್ಲಿ ನಡೆಯಲಿರುವ ಏಕ ದಿನ ವಿಶ್ವ ಕಪ್​ಗೆ ರ್ಯಾಂಕ್ ಆಧಾರದಲ್ಲಿ ಅರ್ಹತೆ ಪಡೆಯಲು ವಿಫಲಗೊಂಡಿದ್ದ ವಿಂಡೀಸ್​ ಬಳಗ ಇದೀಗ ಅರ್ಹತಾ ಸುತ್ತಿನ ಟೂರ್ನಿಯಲ್ಲೂ ಹೀನಾಯ ಪ್ರದರ್ಶನ ನೀಡುವುದರೊಂದಿಗೆ ಅವಮಾನಕ್ಕೆ ಈಡಾಗಿದೆ. ಒಂದು ಕಾಲದಲ್ಲಿ ಅಸಾಮಾನ್ಯ ಆಟಗಾರರನ್ನು ಹೊಂದುವ ಮೂಲಕ ಸರಿಸಾಟಿಯೇ ಇಲ್ಲದ ತಂಡ ಎನಿಸಿಕೊಂಡಿದ್ದ ವೆಸ್ಟ್​ ಇಂಡೀಸ್​, ವಿಶ್ವ ಕಪ್​ನಲ್ಲಿ ಆಡುವ ಅರ್ಹತೆ ಕಳೆದುಕೊಂಡಿರುವುದು ಕ್ರಿಕೆಟ್​ ಪ್ರೇಮಿಗಳ ಪಾಲಿಗೆ ಅಚ್ಚರಿಯ ಸಂಗತಿಯೇ ಹೌದು.

ಶನಿವಾರ ಇಲ್ಲಿ ನಡೆದ ಅರ್ಹತಾ ಸುತ್ತಿನ ಸೂಪರ್ ಸಿಕ್ಸ್ ಪಂದ್ಯದಲ್ಲಿ ದುರ್ಬಲ ಸ್ಕಾಟ್ಲೆಂಡ್ ವಿರುದ್ಧ ಏಳು ವಿಕೆಟ್ ಗಳಿಂದ ಸೋಲನುಭವಿಸಿದ ವೆಸ್ಟ್​ ಇಂಡೀಸ್ ತಂಡ ಮುಖಭಂಗಕ್ಕೆ ಒಳಗಾಯಿತು. 1975 ಮತ್ತು 1979ರ ಆವೃತ್ತಿಗಳ ವಿಶ್ವ ಕಪ್​ನಲ್ಲಿ ಚಾಂಪಿಯನ್​ ಪಟ್ಟ ಅಲಂಕರಿಸಿರುವ ವೆಸ್ಟ್ ಇಂಡೀಸ್ 48 ವರ್ಷಗಳ ಏಕ ದಿನ ವಿಶ್ವ ಕಪ್​ ಇತಿಹಾಸದಲ್ಲಿ ಇದೇ ಮೊದಲ ಬಾರಿ ಅಗ್ರ 10 ತಂಡಗಳಲ್ಲಿ ಸ್ಥಾನ ಗಳಿಸಿಲ್ಲ. ವಿಂಡೀಸ್ ತಂಡ ಟಿ20 ವಿಶ್ವ ಕಪ್​ನಲ್ಲಿ ಎರಡು ಪ್ರಶಸ್ತಿ ಬಾಚಿಕೊಂಡಿದೆ ಎಂಬುದೂ ಇಲ್ಲಿ ಸ್ಮರಣೀಯ.

ಶನಿವಾರ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡದ ಬ್ಯಾಟರ್​ಗಳು ಮತ್ತೆ ತಮ್ಮ ದೌರ್ಬಲ್ಯ ಪ್ರದರ್ಶಿಸಿದರು. ಮೊದಲು ಬ್ಯಾಟ್​ ಮಾಡಿದ ವೆಸ್ಟ್ ಇಂಡೀಸ್ 43.5 ಓವರ್​ಗಳಲ್ಲಿ 181 ರನ್​ಗಳಿಗೆ ಆಲೌಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಸ್ಕಾಟ್ಲೆಂಡ್​ ತಂಡ ಇನ್ನೂ 6.3 ಓವರ್​ಗಳು ಬಾಕಿ ಇರುವಂತೆಯೇ ಏಳು ವಿಕೆಟ್​ಗಳ ಭರ್ಜರಿ ವಿಜಯ ಸಾಧಿಸಿತು ಮ್ಯಾಟ್ ಕ್ರಾಸ್ (107 ಎಸೆತಗಳಲ್ಲಿ ಅಜೇಯ 74 ರನ್) ಮತ್ತು ಬ್ರೆಂಡನ್ ಮೆಕ್ ಮುಲ್ಲನ್ (106 ಎಸೆತಗಳಲ್ಲಿ 69 ರನ್) ಎರಡನೇ ವಿಕೆಟ್ ಗೆ 125 ರನ್ ಸೇರಿಸಿ ಗೆಲುವಿನ ರೂವಾರಿಗಳೆನಿಸಿಕೊಂಡರು.

ಇದನ್ನೂ ಓದಿ : ICC World Cup 2023: ವಿಶ್ವ ಕಪ್​ ಆರಂಭಕ್ಕೂ ಮುನ್ನವೇ ಭಾರತಕ್ಕೆ ಆಘಾತ

‘ಎ’ ಗುಂಪಿನಲ್ಲಿದ್ದ ವೆಸ್ಟ್​ ಇಂಡೀಸ್ ತಂಡ ನೆದರ್ಲ್ಯಾಂಡ್ಸ್ ವಿರುದ್ಧ ಸೂಪರ್ ಓವರ್​​ನಲ್ಲಿ ಸೋತ ಬಳಿಕ ಜಿಂಬಾಬ್ವೆ ತಂಡಕ್ಕೂ ಮಣಿದಿತ್ತು. ಇದೀಗ ಸ್ಕಾಟ್ಲೆಂಡ್​ ತಂಡದ ವಿರುದ್ಧವೂ ಸೋತಿದೆ. ಈ ಮೂಲಕ ಕಳಪೆ ರನ್​ರೇಟ್​ ಪಡೆದುಕೊಂಡು ಫೈನಲ್​ಗೇರಲು ವಿಫಲಗೊಂಡಿತು. ಅರ್ಹತಾ ಸುತ್ತಿನಲ್ಲಿ ಫೈನಲ್​ಗೆರಿದ ಎರಡೂ ತಂಡಗಳು 9 ಮತ್ತು 10ನೇ ತಂಡವಾಗಿ ವಿಶ್ವ ಕಪ್​ಗೆ ಪ್ರವೇಶ ಪಡೆಯಲಿದೆ.

ಆರಂಭಿಕ ಸೋಲಿನ ಕಾರಣ ವೆಸ್ಟ್ ಇಂಡೀಸ್ ತಂಡದ ವಿಶ್ವ ಕಪ್​ ಭವಿಷ್ಯ ಇತರ ಪಂದ್ಯಗಳ ಫಲಿತಾಂಶದ ಮೇಲೆ ಅವಲಂಬಿತವಾಗಿತ್ತು. ಮೊದಲು ಯುಎಸ್ಎ (35 ರನ್) ಮತ್ತು ನೇಪಾಳವನ್ನು (101 ರನ್​ಗಳಿಂದ ) ಸೋಲಿಸಿದ್ದ ವೆಸ್ಟ್ ಇಂಡೀಸ್ ನಾಲ್ಕು ಅಂಕಗಳನ್ನು ಹೊಂದಿತ್ತು. ಆದರೆ ‘ಎ’ ಗುಂಪಿನಿಂದ ಸೂಪರ್ ಸಿಕ್ಸ್​ಗೆ ಅರ್ಹತೆ ಪಡೆದ ಕೆರಿಬಿಯನ್​ ಬಳಗ, ಜಿಂಬಾಬ್ವೆ ಮತ್ತು ನೆದರ್ಲ್ಯಾಂಡ್ಸ್ ವಿರುದ್ಧ ಸೋತ ನಂತರ ಅಂಕಗಳನ್ನು ಸಂಪಾದಿಸುವಲ್ಲಿ ಸೋತು ನಿರ್ಗಮಿಸಿತು.

Exit mobile version