ನವದೆಹಲಿ: ವಿಶ್ವಕಪ್ ಟೂರ್ನಿಯಲ್ಲಿ ಎಲ್ಲರ ಚಿತ್ತವಿರುವುದು ಅಕ್ಟೋಬರ್ 14ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಪಂದ್ಯದ ಮೇಲೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಉಭಯ ದೇಶಗಳ ಕ್ರಿಕೆಟ್ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಈ ಪಂದ್ಯದಲ್ಲಿ ಭಾರತ ಕೇಸರಿ ಬಣ್ಣದ ಜೆರ್ಸಿಯಲ್ಲಿ ಆಡಲಿದೆ ಎಂದು ವರದಿಯಾಗಿದೆ.
ಪಾಕಿಸ್ತಾನ ತಂಡ ಭಾರತಕ್ಕೆ ಬಂದಾಗಲೂ ಪಾಕ್ ಆಟಗಾರರಿಗೆ ಕೇಸರಿ ಶಾಲು ಹಾಕಿ ಸ್ವಾಗತ ಕೋರಲಾಗಿತ್ತು. ಇದೀಗ ಮುಂದಿನ ಶನಿವಾರ ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುವ ಪಾಕ್ ವಿರುದ್ಧದ ಪಂದ್ಯಕ್ಕೆ ಭಾರತೀಯ ಆಟಗಾರರು ಕೇಸರಿ ಬಣ್ಣದ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದ್ದಾರೆ ಎನ್ನಲಾಗಿದೆ. ಇದು ರಾಜಕೀಯ ಚರ್ಚೆಗೆ ಕಾರಣವಾಗಿದೆ.
ವ್ಯವಸ್ಥಿತ ಪ್ರಚಾರ ತಂತ್ರ
ಭಾರತೀಯ ತಂಡದ ಆಟಗಾರರು ಎಂದಿನ ನೀಲಿ ಸಮವಸ್ತ್ರದ ಬದಲಿಗೆ ಸಂಪೂರ್ಣ ಕೇಸರಿ ಅಥವಾ ಎದ್ದುಕಾಣುವ ಕೇಸರಿ ಬಣ್ಣದೊಂದಿಗಿನ ಸಮವಸ್ತ್ರಗಳನ್ನು ಧರಿಸಬೇಕೇ ಎಂದು ಕೆಲ ಕಾಂಗ್ರೆಸ್ ವಕ್ತಾರರು ಬಿಸಿಸಿಐಗೆ ಪ್ರಶ್ನೆ ಮಾಡಿದ್ದಾರೆ. ಹಿರಿಯ ಕ್ರೀಡಾ ಪತ್ರಕರ್ತೆ ಶಾರದಾ ಅವರು “ಈ ಹೊಸ ಕೇಸರಿ ಜೆರ್ಸಿಗಳನ್ನು ಧರಿಸಿಕೊಂಡು ಆಡಿದರೆ ಪಂದ್ಯದ ಬಳಿಕ ಅವುಗಳನ್ನು ಹರಾಜು ಹಾಕಲಾಗುತ್ತದೆ ಮತ್ತು ಇದರಿಂದ ಸಿಗುವ ಹಣವನ್ನು ಯುನಿಸೆಫ್‌ಗೆ ದೇಣಿಗೆಯಾಗಿ ನೀಡಲಾಗುವುದು. ಇದೊಂದು ವ್ಯವಸ್ಥಿತ ಪ್ರಚಾರ ತಂತ್ರವಾಗಿದೆ” ಎಂದಿದ್ದಾರೆ.
2019ರಲ್ಲಿ ಭಾರಿ ವಿರೋಧ ವ್ಯಕ್ತವಾಗಿತ್ತು
ಲಂಡನ್ನಲ್ಲಿ ನಡೆದ 2019ರ ವಿಶ್ವಕಪ್ನಲ್ಲಿ ಭಾರತ ತಂಡ ಮೊದಲ ಬಾರಿಗೆ ಕೇಸರಿ ಜೆರ್ಸಿ ತೊಟ್ಟು ಆಡಿತ್ತು. ಈ ವೇಳೆಯೂ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಮುಖಂಡರು ವಿರೋಧ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಟೀಮ್ ಇಂಡಿಯಾವನ್ನೂ ಕೇಸರಿಮಯ ಮಾಡುತ್ತಿದೆ ಎಂದು ಆರೋಪಿಸಿದ್ದರು. ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಕೇಸರಿ ಜೆರ್ಸಿ ಹಾಕಿ ಪಂದ್ಯ ಆಡಿತ್ತು.
ಇದನ್ನೂ ಓದಿ ind vs pak : ಭಾರತ- ಪಾಕ್ ಪಂದ್ಯಕ್ಕೆ ಮಳೆಯ ಆತಂಕವಿಲ್ಲ, ಆದರೂ ಒಂದು ಸಣ್ಣ ಸಮಸ್ಯೆ
ಐಸಿಸಿ ನಿಯದಲ್ಲಿ ಏನಿದೆ?
ಆಸಲಿಗೆ ಐಸಿಸಿ ಪ್ರತಿ ತಂಡಕ್ಕೆ ಎರಡನೇ ಜರ್ಸಿಯನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ. ಹೀಗಾಗಿ ಬಿಸಿಸಿಐ ಕೇಸರಿ ಬಣ್ಣವನ್ನು ಆಯ್ಕೆ ಮಾಡಿಕೊಂಡಿದೆ. ಈಗಾಗಲೇ ಭಾರತ ತಂಡ ಪ್ರ್ಯಾಕ್ಟಿಸ್ ಮತ್ತು ಟ್ರಾವೆಲ್ ಜೆರ್ಸಿ ಕೇಸರಿ ಬಣ್ಣದಿಂದಲೇ ಕೂಡಿದೆ. ಹೀಗಿರುವಾಗ ಇದೇ ಜೆರ್ಸಿಯನ್ನು ತೊಟ್ಟು ಪಾಕ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿದರೆ ತಪ್ಪೇನಿಲ್ಲ ಎಂದು ವಿರೋಧ ವ್ಯಕ್ತಪಡಿಸಿದವರಿಗೆ ಕೆಲವರು ತಿರುಗೇಟು ನೀಡಿದ್ದಾರೆ.
ಇನ್ನೊಂದೆಡೆ ವಿಶ್ವಕಪ್ ಟೂರ್ನಿಯ ಉದ್ಘಾಟನ ಸಮಾರಂಭ ಕೂಡ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆಯೇ ನಡೆಸಲು ಬಿಸಿಸಿಐ ಸಿದ್ಧತೆ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಅಕ್ಟೋಬರ್ 4ರಂದು ನಿಗದಿಯಾಗಿದ್ದ ಉದ್ಘಾಟನ ಸಮಾರಂಭವನ್ನು ಬಿಸಿಸಿಐ ದಿಢೀರ್ ರದ್ದುಪಡಿಸಿತ್ತು.
ಪಾಕಿಸ್ತಾನ ತಂಡ 7 ವರ್ಷಗಳ ಬಳಿಕ ಭಾರತಕ್ಕೆ ಕಾಲಿಟ್ಟಿದೆ. ಇದಕ್ಕೂ ಮುನ್ನ 2016ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಕೊನೆಯ ಬಾರಿ ಪಾಕ್ ತಂಡ ಭಾರತಕ್ಕೆ ಬಂದಿತ್ತು. ಮುಂಬಯಿ ದಾಳಿಯ ಬಳಿಕ ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿ ಆಡುವುದನ್ನು ನಿಲ್ಲಿಸಿದೆ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಮುಖಾಮುಖಿಯಾಗುತ್ತಿವೆ.