ಐಪಿಲ್ 2022ರ ಆವೃತ್ತಿಯ 8ನೇ ಪಂದ್ಯದಲ್ಲಿ ಕೆಕೆಆರ್ ರೋಚಕ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಕೆಕೆಆರ್ ತಂಡದ ಬೌಲರ್ಸ್ ಬಿರುಸಿನ ಬೌಲಿಂಗ್ ದಾಳಿಗೆ ಪಂಜಾಬ್ ಬ್ಯಾಟ್ಸ್‌ಮನ್‌ಗಳು ಆರಂಭದಿಂದಲೇ ರನ್ ಗಳಿಸಲು ಪೇಚಾಡಿದರು. ಕೆಕೆಆರ್ ತಂಡದ ವೇಗಿ ಬೌಲರ್ ಉಮೇಶ್ ಯಾದವ್ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸಿದ್ದು ತಂಡಕ್ಕೆ ಹೊಸ ಜೋಶ್ ತಂದಿತು.
ಪಂಜಾಬ್ ಪರ ಬ್ಯಾಟಿಂಗ್ ಮಾಡಿದ ಭನುಕ ರಾಜಪಕ್ಸೆ 31 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ 16 ರನ್‌ಗೆ ಔಟಾದರು. ಲಿವಿಂಗ್‌ಸ್ಟನ್ 19 ರನ್ ಗಳಿಸಿದರೆ, ರಬಾಡಾ 25 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಉಮೇಶ್ ಯಾದವ್ ಭರ್ಜರಿ 4 ವಿಕೆಟ್ ಕಬಳಿಸಿ ಮಿಂಚಿದರೆ, ಟಿಮ್ ಸೌಥಿ 2 ವಿಕೆಟ್ ಪಡೆದರು. ಪಂಜಾಬ್ ತಂಡವನ್ನು 137 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಕೆಕೆಆರ್ ಯಶಸ್ವಿಯಾಯಿತು.
ನಂತರ ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ಆರಂಭದಿದಲೇ ತನ್ನ ವಿಕೆಟ್‌ಗಳನ್ನು ಕಳೆದುಕೊಂಡಿತು. ರಹಾನೆ 14 ಗಳಿಸಿ ಔಟಾದರೆ, ವೆಂಕಟೇಶ್ ಐಯ್ಯರ್ ಕೇವಲ 3 ರನ್ ಗಳಿಸಿ ಪೆವಿಲಿಯನ್ ಸೇರಿದರು. ಕೆಕೆಆರ್ ಕ್ಯಾಪ್ಟನ್ ಶ್ರೇಯಸ್ ಐಯ್ಯರ್ 26 ರನ್ ಗಳಿಸಿ ತಂಡಕ್ಕೆ ಗೆಲುವಿನ ಭರವಸೆ ಮೂಡಿಸಿದರು. ಶ್ರೇಯಸ್ ಔಟಾದ ನಂತರ ಅಖಾಡಕ್ಕಿಳಿದ ಆಂಡ್ರೆ ರಸೆಲ್ ಸ್ಫೋಟಕ ಬ್ಯಾಟಿಂಗ್ ಎಲ್ಲರ ಗಮನಸೆಳೆಯಿತು.
ಅಜೇಯ 70 ರನ್ ಗಳಿಸಿದ ಆಂಡ್ರೆ ರಸೆಲ್ ಮಿಂಚಿನ ಆಟದಿಂದ ಕೆಕೆಆರ್ ಭರ್ಜರಿ ಗೆಲುವು ಸಾಧಿಸಿತು. ರಸೆಲ್‌ಗೆ ಸಾಥ್ ನೀಡಿದ ಸ್ಯಾಮ್ ಬಿಲ್ಲಿಂಗ್ಸ್ ಅಜೇಯ 24 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಪಂಜಾಬ್ ವಿರುದ್ಧ ರೋಚಕ ಬೌಲಿಂಗ್ ದಾಳಿ ನಡೆಸಿ 4 ವಿಕೆಟ್ ಕಬಳಿಸಿದ ಉಮೇಶ್ ಯಾದವ್‌ಗೆ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ದಕ್ಕಿತು. ಅಲ್ಲದೆ, ಪ್ರಸ್ತುತ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಕಾರಣಕ್ಕೆ ಪರ್ಪಲ್ ಕ್ಯಾಪ್ ಕೂಡ ಉಮೇಶ್ ಯಾದವ್ ಪಾಲಾಯಿತು.