ನ್ಯೂಯಾರ್ಕ್: ಕೆನಡಾ(CAN vs USA) ವಿರುದ್ಧ ವಿಸ್ಫೋಟಕ ಬ್ಯಾಟಿಂಗ್ ಮೂಲಕ ಸಿಕ್ಸರ್ಗಳ ಸುರಿಮಳೆ ಸುರಿಸಿದ ಅಮೆರಿಕ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಆರೋನ್ ಜೋನ್ಸ್(Aaron Jones) ಟಿ20 ವಿಶ್ವಕಪ್(T20 World Cup) ಟೂರ್ನಿಯಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಡಲ್ಲಾಸ್ನಲ್ಲಿ ನಡೆದ ಪಂದ್ಯದಲ್ಲಿ 4ನೇ ಕ್ರಮಾಂಕದಲ್ಲಿ ಆಡಲಿಳಿದ ಆರೋನ್ ಜೋನ್ಸ್ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ನಡೆಸಿ ಕೆನಡಾ ಬೌಲರ್ಗಳ ಬೆವರಿಳಿಸಿದರು. ಸಿಕ್ಸರ್ ಮತ್ತು ಬೌಂಡರಿಗಳ ಮೂಲಕ ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಡಿದಟ್ಟಿ ನೆರದಿದ್ದ ಸ್ಥಳೀಯ ಅಭಿಮಾನಿಗಳಿಗೆ ಭರಪೂರ ರಂಜನೆ ಒದಗಿಸಿದರು.
ಒಟ್ಟು 40 ಎಸೆತ ಎದುರಿಸಿದ ಆರೋನ್ ಜೋನ್ಸ್ ಅಜೇಯ 94 ರನ್ ಬಾರಿಸಿದರು. ಇದರಲ್ಲಿ 60 ರನ್ ಕೇವಲ ಸಿಕ್ಸರ್ ಮೂಲಕವೇ ದಾಖಲಾಯಿತು. ಒಟ್ಟು 10 ಸಿಕ್ಸರ್ ಮತ್ತು 4 ಬೌಂಡರಿ ಬಾರಿಸಿದರು. 10 ಸಿಕ್ಸರ್ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ನ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ದಾಖಲೆಯನ್ನು ಸರಿಗಟ್ಟಿದರು. ಕ್ರಿಸ್ ಗೇಲ್ 2007ರಲ್ಲಿ ಉದ್ಘಾಟನ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 10 ಸಿಕ್ಸರ್ ಬಾರಿಸಿದ್ದರು. ಈ ದಾಖಲೆಯನ್ನು 17ವರ್ಷಗಳ ಬಳಿಕ ಜೋನ್ಸ್ ಸರಿಗಟ್ಟಿದ್ದಾರೆ. ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್ ದಾಖಲೆ ಇನ್ನೂ ಕೂಡ ಕ್ರಿಸ್ ಗೇಲ್ ಹೆಸರಿನಲ್ಲಿದೆ. 2016ರಲ್ಲಿ ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಗೇಲ್ 11 ಸಿಕ್ಸರ್ ಬಾರಿಸಿದ್ದರು.
ಇದನ್ನೂ ಓದಿ CAN vs USA: ಕೆನಡಾ ಪರ ಟಿ20 ವಿಶ್ವಕಪ್ ಪಂದ್ಯವಾಡಿದ ದಾವಣಗೆರೆಯ ಶ್ರೇಯಸ್
ಟಿ20 ವಿಶ್ವಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರು
ಆಟಗಾರ | ಸಿಕ್ಸರ್ | ವಿರುದ್ಧ | ವರ್ಷ |
ಕ್ರಿಸ್ ಗೇಲ್ | 11 | ಇಂಗ್ಲೆಂಡ್ | 2016 |
ಕ್ರಿಸ್ ಗೇಲ್ | 10 | ದಕ್ಷಿಣ ಆಫ್ರಿಕಾ | 2007 |
ಆರೋನ್ ಜೋನ್ಸ್ | 10 | ಕೆನಡಾ | 2024 |
ರೀಲಿ ರೊಸೊ | 8 | ಬಾಂಗ್ಲಾದೇಶ | 2022 |
ಭರ್ಜರಿ ಗೆಲುವು ಸಾಧಿಸಿದ ಅಮೆರಿಕ
ಇಲ್ಲಿನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ, ಡಲ್ಲಾಸ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕೆನಡಾ ತಂಡ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ 5 ವಿಕೆಟ್ಗೆ 194 ರನ್ ಬಾರಿಸಿತು. ಜವಾಬಿತ್ತ ಅಮೆರಿಕ ಈ ಬೃಹತ್ ಮೊತ್ತವನ್ನು 17.4 ಓವರ್ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯುಎಸ್ಎ ಗರಿಷ್ಠ ಮೊತ್ತ ಚೇಸ್ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುನ್ನ 168 ರನ್ಗಳನ್ನು ಚೇಸ್ ಮಾಡಿದ್ದು ತಂಡದ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್ನ ಚೊಚ್ಚಲ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.