Site icon Vistara News

Chris Gayle : ಎಣ್ಣೆ ಹೊಡಿತಾ ಕೆಕೆಆರ್ ತಂಡಕ್ಕೆ ಶುಭಾಶಯ ತಿಳಿಸಿದ ಕ್ರಿಸ್​ ಗೇಲ್; ಇಲ್ಲಿದೆ ವಿಡಿಯೊ

Chris Gayle

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾನುವಾರ (ಮೇ 26) ನಡೆದ ಐಪಿಎಲ್ 2024ನೇ (IPL 2024) ಆವೃತ್ತಿಯ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿದ ಶ್ರೇಯಸ್​ ಅಯ್ಯರ್ (Shreyas Iyer)​ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ಮೂರನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಡೀ ಕೆಕೆಆರ್​ ತಂಡ ಹಾಗೂ ಆ ಫ್ರಾಂಚೈಸಿಯ ಅಭಿಮಾನಿಗಳು ಸಂಭ್ರಮಿಸುತ್ತಿರುವ ನಡುವೆಯೇ ಐಪಿಎಲ್​ನ ಮಾಜಿ ಸ್ಟಾರ್ ಆಟಗಾರ ಕ್ರಿಸ್ ಗೇಲ್ (Chris Gayle ) ಪಾರ್ಟಿ ಮಾಡುತ್ತಾ ಎಣ್ಣೆ ಹೊಡೆಯುತ್ತಾ ಸಂಭ್ರಮಿಸಿದ್ದಾರೆ. ಅವರು ವಿಡಿಯೊವೊಂದನ್ನು ಮಾಡಿದ ಅದರಲ್ಲಿ ಕೆಕೆಆರ್ ಬಳಗಕ್ಕೆ ಶುಭಾಶಯ ತಿಳಿಸಿದ್ದಾರೆ. ಈ ವೇಳೆ ಅವರು ಕೆರಿಬಿಯನ್ ಆಟಗಾರರಾದ ಆ್ಯಂಡ್ರೆ ರಸೆಲ್ ಮತ್ತು ಸುನಿಲ್ ನರೈನ್ ಅವರನ್ನು ಅಭಿನಂದಿಸಿದ್ದಾರೆ.

ಗೇಲ್ 2009 ಮತ್ತು 2010ರ ಐಪಿಎಲ್ ಆವೃತ್ತಿಗಳಲ್ಲಿ ಕೆಕೆಆರ್ ಪರ ಆಡಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ ವೀಡಿಯೊದಲ್ಲಿ, ಮಾಜಿ ನೈಟ್ ರೈಡರ್ ತನ್ನ ಮಾಜಿ ಫ್ರಾಂಚೈಸಿ ಮತ್ತು ವೆಸ್ಟ್ ಇಂಡೀಸ್ ತಂಡದ ಆಟಗಾರರನ್ನು ಅಭಿನಂದಿಸಿದ್ದರು. ಜನಪ್ರಿಯ ಹಾಡಾದ ‘ಡ್ಯಾನ್ಜಾ ಕುಡುರೊ’ ಹಾಡಿ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಅವರ ಕೈಯಲ್ಲಿ ಮದಿರೆಯ ಲೋಟವೂ ಇತ್ತು. ಸುತ್ತ ಮುತ್ತ ಪಾರ್ಟಿಮಾಡುತ್ತಿದ್ದವರ ಜತೆ ಸೇರಿಕೊಂಡು ಅವರು ಹಾಡು ಹಾಡುತ್ತಾ ಐಪಿಎಲ್ ಚಾಂಪಿಯನ್​ ಎಂದು ಶುಭಾಶಯ ಕೋರಿದ್ದಾರೆ.

ಇದನ್ನೂ ಓದಿ: IPL 2024 : ಕೆಕೆಆರ್​ ಗೆದ್ದ ಭಳಿಕ ವಿವಾದಿತ ಫ್ಲೈಯಿಂಗ್ ಕಿಸ್​ ಕೊಟ್ಟ ಶಾರುಖ್ ಖಾನ್​; ಇದಕ್ಕೂ ಒಂದು ಕಾರಣವಿದೆ

ಐಪಿಎಲ್ 2024 ರ ಫೈನಲ್ ಪಂದ್ಯವು ಏಕಪಕ್ಷೀಯವಾಗಿ ನಡೆಯಿತು. ಟಾಸ್ ಗೆದ್ದ ಪ್ಯಾಟ್ ಕಮಿನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ ಕೆಕೆಆರ್ ಆರಂಭದಿಂದಲೂ ಬೌಲಿಂಗ್​ನಲ್ಲಿ ಮೇಲುಗೈ ಸಾಧಿಸಿತು. ಮಿಚೆಲ್ ಸ್ಟಾರ್ಕ್ ಮತ್ತು ವೈಭವ್ ಅರೋರಾ ಮೊದಲ ಎರಡು ಓವರ್​ಗಳಲ್ಲಿ ಅಪಾಯಕಾರಿ ಆರಂಭಿಕ ಜೋಡಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರನ್ನು ಔಟ್ ಮಾಡುವ ಮೂಲಕ ಹೊಸ ಚೆಂಡಿನೊಂದಿಗೆ ಮಿಂಚಿದರು. ಎಸ್ಆರ್​​ಎಚ್​ 11 ಓವರ್ಗಳಲ್ಲಿ ಕೇವಲ 62 ರನ್​ಗಳಿಗೆ ಅರ್ಧದಷ್ಟು ವಿಕೆಟ್ ಕಳೆದುಕೊಂಡಿದ್ದರಿಂದ ಬಲ ಕುಸಿಯಿತು.

ರಸೆಲ್ ಮೂರು ವಿಕೆಟ್ ಪಡೆದರೆ, ಸ್ಪಿನ್ ಬೌಲಿಂಗ್ ಜೋಡಿ ನರೈನ್ ಮತ್ತು ವರುಣ್ ಚಕ್ರವರ್ತಿ ಕೂಡ ಬ್ಯಾಟರ್​ಗಳನ್ನು ನಿಯಂತ್ರಿಸಿದರು. ಹರ್ಷಿತ್ ರಾಣಾ ಕೂಡ ಎರಡು ವಿಕೆಟ್ ಪಡೆದು ಮಿಂಚಿದರು. ಆರೆಂಜ್ ಆರ್ಮಿ 18.3 ಓವರ್​ಗಳಿಗೆ 113 ರನ್​ ಬಾರಿಸಿ ಆಲ್​ಔಟ್​​ ಆಯಿತು.

ಕಮಿನ್ಸ್ ಮೊದಲ ಓವರ್​ನಲ್ಲಿ ಅಪಾಯಕಾರಿ ನರೈನ್ ವಿಕೆಟ್ ಪಡೆದರು. ರಹಮಾನುಲ್ಲಾ ಗುರ್ಬಾಜ್ ಮತ್ತು ವೆಂಕಟೇಶ್ ಅಯ್ಯರ್ 45 ಎಸೆತಗಳಲ್ಲಿ 91 ರನ್​ಗಳ ಜೊತೆಯಾಟವನ್ನು ದಾಖಲಿಸಿ ಕೆಕೆಆರ್ ಅನ್ನು ಗೆಲುವಿನ ಅಂಚಿಗೆ ಕೊಂಡೊಯ್ದರು. ಅಫ್ಘಾನಿಸ್ತಾನ ಕ್ರಿಕೆಟಿಗ 32 ಎಸೆತಗಳಲ್ಲಿ 39 ರನ್ ಗಳಿಸಿ ನಿರ್ಗಮಿಸಿದರು. ನಂತರ ನಾಯಕ ಶ್ರೇಯಸ್ ಅಯ್ಯರ್ ಆಡಿದರು ವೆಂಕಟೇಶ್ ಕೇವಲ 26 ಎಸೆತಗಳಲ್ಲಿ 52* ರನ್ ಗಳಿಸಿ ಗೆಲುವಿಗೆ ಕೊಡುಗೆ ಕೊಟ್ಟರು. ಕೆಕೆಆರ್ 8 ವಿಕೆಟ್ ಮತ್ತು 57 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು.

Exit mobile version