Site icon Vistara News

Deepak Chahar : ಜೊಮಾಟೊದಿಂದ ಮೋಸ, ಸಿಎಸ್​ಕೆ ಆಟಗಾರನ ಆರೋಪ

Deepak Chahar

ನವದೆಹಲಿ: ಭಾರತದ ವೇಗದ ಬೌಲರ್ ದೀಪಕ್ ಚಹರ್ (Deepak Chahar) ಇತ್ತೀಚೆಗೆ ಜನಪ್ರಿಯ ಆಹಾರ ವಿತರಣಾ ಪ್ಲಾಟ್ಫಾರ್ಮ್ ಜೊಮಾಟೊವನ್ನು ವಂಚಕ ಸಂಸ್ಥೆ ಎಂದು ಕರೆದಿರುವುದು ದೊಡ್ಡ ಸುದ್ದಿಯಾಗಿದೆ. ಜೊಮಾಟೊದ ಕಸ್ಟಮರ್​ ಕೇರ್​ಗೆ ಫೋನ್ ಮಾಡಿದರೆ, ಸುಳ್ಳು ಹೇಳುತ್ತಿದ್ದೀರಿ ಎಂದು ಆರೋಪಿಸಿದ್ದರು. ಇದರಿಂದ ಕೋಪಗೊಂಡ ಅವರು ಇಡೀ ವಿಷಯವನ್ನು ಸ್ಕ್ಟೀನ್ ಶಾಟ್ ಜತೆ ಟ್ವೀಟ್ ಮಾಡಿಕೊಂಡಿದ್ದಾರೆ.

ಫೆಬ್ರವರಿ 24, ಶನಿವಾರ ರಾತ್ರಿ ದೀಪಕ್ ಚಹರ್ ಈ ಪೋಸ್ಟ್ ಮಾಡಿದ್ದಾರೆ. “ಜೊಮಾಟೊ ಮೋಸ ಹಗರಣ ‘ ಮಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಜೊಮಾಟೊ ಡೆಲಿವರಿ ಅಪ್ಲಿಕೇಶನ್​​ನಲ್ಲಿ ಬುಕ್ ಮಾಡಿದ್ದ ಆಹಾರ ಮನೆಗೆ ತಲುಪಿಲ್ಲ. ಆದರೆ, ತಲುಪಿಸಲಾಗಿದೆ ಎಂದು ಬಂದಿದೆ. ಕಸ್ಟಮರ್​​ ಕೇರ್​​ಗೆ ಫೋನ್​ ಮಾಡಿದರೆ ನನ್ನನ್ನೇ ಸುಳ್ಳುಗಾರ ಎಂದು ಆರೋಪಿಸಿದರು ಎಂದು ದೀಪಕ್ ಬರೆದುಕೊಂಡಿದ್ದಾರೆ.

ಟ್ವೀಟ್ ಪೋಸ್ಟ್​​ ಮಾಡುವ ವೇಳೆ ದೀಪಕ್​ ಚಾಹರ್​​ ತಮ್ಮ ಅಭಿಮಾನಿಗಳಿಗೆ ಇದೇ ರೀತಿಯಲ್ಲಿ ವಂಚನೆ ಆಗಿದ್ದರೆ ಬರೆದುಕೊಳ್ಳಿ ಎಂದು ಮನವಿ ಮಾಡಿದ್ದರು. ಇದರಿಂದಾಗಿ ಅವರ ಪೋಸ್ಟ್​​ಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆಗಳು ಬರಲು ಆರಂಭಿಸಿದವು. ಒಬ್ಬೊಬ್ಬರಾಗಿಯೇ ಫುಡ್​ ಡೆಲಿವರಿ ಆ್ಯಪ್​ನಿಂದ ಆದ ಸಮಸ್ಯೆ ಬಗ್ಗೆ ಬರೆದುಕೊಂಡರು.

ಭಾರತದಲ್ಲಿ ಹೊಸ ವಂಚನೆ ಶುರವಾಗಿದೆ. @zomatoರಿಂದ ಆಹಾರವನ್ನು ಆರ್ಡರ್ ಮಾಡಲಾಯಿತು. ಆದರೆ ಆಹಾರ ತಲುಪಿಸಿಲ್ಲ. ಕೇಳಿದರೆ ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಹೇಳಿದರು. ಬಹಳಷ್ಟು ಜನರು ಇದೇ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ನನಗೆ ಖಾತ್ರಿಯಿದೆ. @zomato ಟ್ಯಾಗ್ ಮಾಡಿ ಮತ್ತು ನಿಮ್ಮ ಕಥೆಯನ್ನು ಹೇಳಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : R Ashwin : ನಥಾನ್​ ಲಿಯಾನ್​ ದಾಖಲೆ ಸರಿಗಟ್ಟಿದ ರವಿಚಂದ್ರನ್ ಅಶ್ವಿನ್

ಜೊಮ್ಯಾಟೊದಿಂದ ಕ್ಷಮೆ


ಜೊಮಾಟೊ ಕಂಪನಿಯು ದೀಪಕ್ ಚಹರ್ ಅವರ ಪೋಸ್ಟ್​​ನ ತಕ್ಷಣ ಪ್ರತಿಕ್ರಿಯಿಸಿತ್ತು. ಹಾಯ್ ದೀಪಕ್, ನಿಮ್ಮ ಅನುಭವದ ಬಗ್ಗೆ ನಾವು ತೀವ್ರ ಕಾಳಜಿ ವಹಿಸುತ್ತೇವೆ. ಯಾವುದೇ ಅನಾನುಕೂಲತೆಗಾಗಿ ಕ್ಷಮೆಯಾಚಿಸುತ್ತೇವೆ. ನಾವು ಅಂತಹ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ತ್ವರಿತ ಪರಿಹಾರವನ್ನು ನೀಡುತ್ತೇವೆ ಎಂದು ಟ್ವೀಟ್ ಮಾಡಿತ್ತು. ಅದಕ್ಕೆ ಉತ್ತರಿಸಿದ ಚಹರ್, ಕಂಪನಿಯು ಒದಗಿಸುವ ಮರುಪಾವತಿಯ ಮೊತ್ತದಲ್ಲಿ ಹಸಿವನ್ನು ನೀಗಿಸಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ.

ಬಹಳಷ್ಟು ಜನರು ಈ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ಬರೆಯಬೇಕಾಯಿತು. ಆರ್ಡರ್​​ ಹಣವನ್ನು ಹಿಂದಿರುಗಿಸಲು ಸರಿಯಾದ ಕ್ರಮ ತೆಗೆದುಕೊಂಡಿಲ್ಲ ಎಂಬುದನ್ನು ಎತ್ತಿ ತೋರಿಸಲು ಬಯಸುತ್ತೇನೆ. ಹಸಿವನ್ನು ಹಣದಿಂದ ಸರಿದೂಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದಾಗಿ ದೀಪಕ್ ಚಹರ್ ಕೆಲವು ತಿಂಗಳುಗಳ ಕಾಲ ಕ್ರಿಕೆಟ್​ನಿಂದ ದೂರ ಉಳಿದಿದ್ದಾರೆ. ಸ್ಟಾರ್ ವೇಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್​​ನ 17 ಋತುವಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.

Exit mobile version