ಬೆಂಗಳೂರು: 2021 ಹಾಗೂ 2022ರ ಐಪಿಎಲ್ ಪಂದ್ಯಾವಳಿಗಳಲ್ಲಿ ಉತ್ತಮ ಆಟ ಪ್ರದರ್ಶಿಸಿ ಎಲ್ಲ ಗಮನ ಸೆಳೆದಿದ್ದ ಆರ್‌ಸಿಬಿ ಆಟಗಾರ ದಿನೇಶ್ ಕಾರ್ತಿಕ್ ಈ ಬಾರಿಯ (IPL 2023) ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಅದರಲ್ಲೂ, ಭಾನುವಾರ ರಾತ್ರಿ ಗುಜರಾತ್ ಟೈಟನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸುವ ಮೂಲಕ ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಸೊನ್ನೆಗೆ ಔಟಾದ ಅಪಖ್ಯಾತಿ ಗಳಿಸಿದರು.
ಹೌದು, ಐಪಿಎಲ್ ಇತಿಹಾಸದಲ್ಲಿ ಇದುವರೆಗೆ ಅತಿ ಹೆಚ್ಚು ಬಾರಿ ಎಂದರೆ, 16 ಬಾರಿ ಡಕ್ ಔಟ್ ಆದ ಖ್ಯಾತಿ ರೋಹಿತ್ ಶರ್ಮಾ ಅವರ ಹೆಸರಲ್ಲಿತ್ತು. ಆದರೆ, 17 ಬಾರಿ ಸೊನ್ನೆಗೆ ಔಟಾಗುವ ಮೂಲಕ ದಿನೇಶ್ ಕಾರ್ತಿಕ್ ಅವರು ಅನವಶ್ಯಕ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಈಗ ದಿನೇಶ್ ಕಾರ್ತಿಕ್ 17 ಬಾರಿ, ರೋಹಿತ್ ಶರ್ಮಾ 16, ಮನ್‌ದೀಪ್ ಸಿಂಗ್ ಹಾಗೂ ಸುನಿಲ್ ನರೈನ್ ತಲಾ 15 ಬಾರಿ ಡಕ್‌ಔಟ್ ಆದ ದಾಖಲೆ ಹೊಂದಿದ್ದಾರೆ.
ಇದನ್ನೂ ಓದಿ: IPL 2023: ಮುಂಬೈ ಗೆದ್ದರೂ ಪ್ಲೇ ಆಫ್ ಭವಿಷ್ಯ ಗುಜರಾತ್ ಕೈಯಲ್ಲಿ
ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿಯೇ ದಿನೇಶ್ ಕಾರ್ತಿಕ್ ಮೂರು ಬಾರಿ ಡಕ್‌ಔಟ್ ಆಗಿದ್ದಾರೆ. ಪ್ರಸಕ್ತ ಟೂರ್ನಿಯಲ್ಲಿ 12 ಪಂದ್ಯ ಆಡಿರುವ ದಿನೇಶ್ ಕಾರ್ತಿಕ್ ಕೇವಲ 140 ರನ್ ಬಾರಿಸಿದ್ದಾರೆ. ಗುಜರಾತ್ ವಿರುದ್ಧದ ಪಂದ್ಯದಲ್ಲಿ ಯಶ್ ದಯಾಳ್ ಎಸೆತದಲ್ಲಿ ದಿನೇಶ್ ಕಾರ್ತಿಕ್, ವೃದ್ಧಿಮಾನ್ ಸಾಹ ಅವರಿಗೆ ಕ್ಯಾಚಿತ್ತು ಹೊರನಡೆದರು.
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಳೆಯಿಂದ ವಿಳಂಬವಾಗಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 197 ರನ್ ಬಾರಿಸಿದೆ. ವಿರಾಟ್ ಕೊಹ್ಲಿ ಭರ್ಜರಿ ಶತಕದ ನೆರವಿನೊಂದಿಗೆ ಆರ್‌ಸಿಬಿ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.