Site icon Vistara News

IPL 2024 : ಗೆಲುವಿನ ಹಳಿಗೆ ಮರಳಿದ ಚೆನ್ನೈ, ಕೆಕೆಆರ್​ಗೆ ಮೊದಲ ಸೋಲು

IPL 2024

ಚೆನ್ನೈ: ಋತುರಾಜ್ ಗಾಯಕ್ವಾಡ್​ (67 ರನ್​) ಸಮಯೋಚಿತ ಅರ್ಧ ಶತಕ ಹಾಗೂ ಬೌಲರ್​ಗಳ ಸಂಘಟಿತ ಪ್ರಯತ್ನದ ಮೂಲಕ ಯಶಸ್ಸು ಸಾಧಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2024ನೇ (IPL 2024) ಆವೃತ್ತಿಯಲ್ಲಿ ಸತತ ಎರಡು ಸೋಲುಗಳ ಬಳಿಕ ಗೆಲುವಿನ ಹಳಿಗೆ ಮರಳಿದೆ. ಸೋಮವಾರ ನಡೆದ ಕೋಲ್ಕೊತಾ ನೈಟ್​ ರೈಡರ್ಸ್​ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಇದು ಸ್ಥಳೀಯ ಪ್ರೇಕ್ಷಕರಿಗೆ ಖುಷಿ ಕೊಟ್ಟಿದ್ದು ಆರನೇ ಪ್ರಶಸ್ತಿಯಲ್ಲಿ ದಾಹದಲ್ಲಿರುವ ಚೆನ್ನೈಗೆ ಮರುಚೈತನ್ಯ ಸಿಕ್ಕಿದೆ. ಏತನ್ಮಧ್ಯೆ ಸತತವಾಗಿ ಮೂರು ಗೆಲುವಿನ ಮೂಲಕ ವಿಶ್ವಾಸದಲ್ಲಿದ್ದ ಕೆಕೆಆರ್​ಗೆ ಮೊದಲ ಪರಾಜಯದ ಅನುಭವವಾಗಿದೆ.

ಇಲ್ಲಿನ ಎಮ್ ಎ ಚಿದಂಬರಂ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್​ಗೆ 137 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಚೆನ್ನೈ ಬಳಗ ಇನ್ನೂ 14 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ ನಷ್ಟಕ್ಕೆ 141 ರನ್ ಬಾರಿಸಿ ಗೆಲುವು ಸಾಧಿಸಿತು.

ಸಾಧಾರಣ ಮೊತ್ತವನ್ನು ಬೆನ್ನಟ್ಟಲು ಹೊರಟ ಚೆನ್ನೈ ತಂಡದ ಪರ ರಚಿನ್ ರವೀಂದ್ರ ಮತ್ತೊಂದು ಬಾರಿ ವೈಫಲ್ಯ ಎದುರಿಸಿದರು. ಅವರು 15 ರನ್ ಬಾರಿಸಿ ಔಟಾದರು. ಈ ವೇಳೆ ತಂಡದ ಮೊತ್ತ 27 ಆಗಿತ್ತು. ಬಳಿಕ ಜತೆಯಾದ ಡ್ಯಾರಿಲ್​ ಮಿಚೆಲ್​ (25) ಋತುರಾಜ್​ಗೆ ಉತ್ತಮ ಸಾಥ್​ ಕೊಟ್ಟರು. ಈ ಜೋಡಿ ತಂಡದ ಮೊತ್ತವನ್ನು 97ರ ತನಕ ಕೊಂಡೊಯ್ದರು. ಹೀಗಾಗಿ ಚೆನ್ನೈಗೆ ಗೆಲುವಿನ ವಿಶ್ವಾಸ ಮೂಡಿತು. ಆದರೆ, ನರೈನ್ ಎಸೆತಕ್ಕೆ ಬೌಲ್ಡ್​ ಅದ ಮಿಚೆಲ್​ ನಿರಾಸೆಯಿಂದ ಹೊರನಡೆದರು. ಆ ಬಳಿಕ ಕ್ರೀಸ್​ಗೆ ಬಂದ ಚೆನ್ನೈ ತಂಡದ ಆಪದ್ಭಾಂದವ ಶಿವಂ ದುಬೆ ಮುನ್ನಡೆ ಕಲ್ಪಿಸಿ ಕೊಟ್ಟರು. ಋತುರಾಜ್​ ಕೊನೇ ತನಕ ಉಳಿದು ತಂಡಕ್ಕೆ ಗೆಲುವು ತಂದುಕೊಟ್ಟರು.

ಬ್ಯಾಟಿಂಗ್ ವೈಫಲ್ಯ

ಇದುವರೆಗಿನ ಮೂರು ಪಂದ್ಯಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಚೆನ್ನೈನ ತಿರುವು ಪಡೆಯುವ ಪಿಚ್​ನಲ್ಲಿ ಮಂಕಾಗಿ ಕಂಡಿತು. ಮೊದಲು ಬ್ಯಾಟ್ ಮಾಡಲು ಅವಕಾಶ ಪಡೆದರೂ ಉತ್ತಮ ಆರಂಭ ಪಡೆಯಲು ಸಾಧ್ಯವಾಗಲಿಲ್ಲ. ಫಿಲ್ ಸಾಲ್ಟ್​ ಶೂನ್ಯಕ್ಕೆ ಔಟಾಗುವ ಮೂಲಕ ಬ್ಯಾಟಿಂಗ್​​ ಪತನ ಶುರುವಾಯಿತು. ಬಳಿಕ ಸುನಿಲ್ ನರೈನ್​ 27 ರನ್ ಹಾಗೂ ಅಂಗ್​ಕ್ರಿಶ್​ ರಘುವಂಶಿ 24 ರನ್ ಬಾರಿಸಿದರೂ ದೊಡ್ಡ ಮೊತ್ತದೆಡೆಗೆ ಸಾಗಲು ಸಾಧ್ಯವಾಗಲಿಲ್ಲ. ನಾಯಕ ಶ್ರೇಯಸ್ ಅಯ್ಯರ್​ ನಿಧಾನಗತಿಯಲ್ಲಿ ಆಡಿ 34 ರನ್ ಗಳಿಸಿದರು. ಉಳಿದ ಎಲ್ಲ ಬ್ಯಾಟರ್​ಗಳು ವೈಫಲ್ಯ ಕಂಡರು. ರಮಣ್​ದೀಪ್​ ಸಿಂಗ್​ 13 ರನ್ ಬಾರಿಸಿದರೆ ರಸೆಲ್ ಕೊಡುಗೆ 10 ರನ್​.

ಇದನ್ನೂ ಓದಿ: Virat kohli : ಕೊಹ್ಲಿಯ ಆಟದ ಕುರಿತ ಅಪ್​ಡೇಟ್​ ನೀಡಿದ ಆರ್​ಸಿಬಿ ಕೋಚ್​ ಫ್ಲವರ್​

ಚೆನ್ನೈ ಬೌಲಿಂಗ್​ನಲ್ಲಿ ತುಷಾರ್ ದೇಶಪಾಡೆ 33 ರನ್ ನೀಡಿ 3 ವಿಕೆಟ್ ಪಡೆದರೆ ಮುಸ್ತಾಫಿಜುರ್ ರಹ್ಮಾನ್ 2 ವಿಕೆಟ್​ ಹಾಗೂ ರವೀಂದ್ರ ಜಡೇಜಾ 18 ರನ್​ ನೀಡಿ 3 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Exit mobile version