Site icon Vistara News

Harbhajan Singh : ಅಂಗವಿಕಲರಿಗೆ ಅವಮಾನ ಮಾಡಿ ಕ್ಷಮೆ ಕೋರಿದ ಹರ್ಭಜನ್​ ಸಿಂಗ್​!

Harbhajan Singh

ನವದೆಹಲಿ: ಲೆಜೆಂಡ್ಸ್ ವಿಶ್ವ ಕಪ್​ ಗೆದ್ದ ಖುಷಿಯಲ್ಲಿ ಅಂಗವಿಕಲರ ರೀತಿ ಡಾನ್ಸ್​ ಮಾಡಿದ್ದಕ್ಕೆ ಟೀಕೆಗಳನ್ನು ಎದುರಿಸಿದ್ದ ಭಾರತ ತಂಡದ ಮಾಜಿ ಸ್ಪಿನ್ನರ್​​ ಹರ್ಭಜನ್​ ಸಿಂಗ್ (Harbhajan Singh) ಕ್ಷಮೆ ಕೋರಿದ್ದಾರೆ. ಅವರು ಮಾಡಿರುವ ‘ತೌಬಾ-ತೌಬಾ’ ರೀಲ್ ಟೀಕೆಗಳನ್ನು ಎದುರಿಸಿದ ನಂತರ ಅವರು ಕ್ಷಮೆ ಕೋರಬೇಕಾಯಿತು. ಪ್ಯಾರಾ ಬ್ಯಾಡ್ಮಿಂಟನ್ ತಾರೆ ಮಾನಸಿ ಜೋಶಿ ಅವರು ಹರ್ಭಜನ್ ಸಿಂಗ್ ಮತ್ತು ಸುರೇಶ್ ರೈನಾ ಅವರ ಕ್ರಮವನ್ನು ಟೀಕಿಸಿದ್ದರು. ವಿಶ್ವ ಚಾಂಪಿಯನ್​ಶಿಪ್​ ಆಫ್ ಲೆಜೆಂಡ್ಸ್​ನಲ್ಲಿ ಜಯಗಳಿಸಿದ ನಂತರ ಭಾರತ ಚಾಂಪಿಯನ್ಸ್ ನಾಯಕ ಸಾಮಾಜಿಕ ಮಾಧ್ಯಮದಲ್ಲಿ ಉಲ್ಲಾಸದ ವೀಡಿಯೊ ಹಂಚಿಕೊಂಡಿದ್ದರು. ಅದರಲ್ಲಿ ಯುವರಾಜ್ ಸಿಂಗ್, ರೈನಾ, ಹರ್ಭಜನ್ ಸಿಂಗ್ ಮತ್ತು ಗುರ್ಕೀರತ್ ಸಿಂಗ್ ಕುಂಟುತ್ತಾ ಡಾನ್ಸ್ ಮಾಡಿದ್ದರು. ಇದು ಟೀಕೆಗೆ ಒಳಗಾಯಿತು.

15 ದಿನಗಳ ಲೆಜೆಂಡ್ಸ್ ಕ್ರಿಕೆಟ್​ ಬಳಿಕ ದೇಹದ ಪ್ರತಿಯೊಂದು ಭಾಗವೂ ನೋಯುತ್ತಿದೆ ಎಂಬ ಅರ್ಥದ ಹಾಡಿಗೆ ಡಾನ್ಸ್ ಮಾಡಿದ್ದರು. ಅದನ್ನು ವಿಕ್ಕಿ ಕೌಶಲ್ ಮತ್ತು ಗಾಯಕ ಕರಣ್ ಔಜ್ಲಾ ಗೆ ಟ್ಯಾಗ್ ಮಾಡಿದ್ದರು. ಸತತ ಕ್ರಿಕೆಟ್ ವೇಳಾಪಟ್ಟಿಯು ನಮ್ಮ ದೇಹದ ಮೇಲೆ ಪರಿಣಾಮ ಬೀರಿದೆ. ನಮ್ಮ ದೇಹದ ಭಾಗಗಳು ನೋಯುತ್ತಿವೆ ಎಂದು ಭಾರತದ ಮಾಜಿ ಆಟಗಾರ ವಿವರಿಸಿದ್ದರು. ಆದಾಗ್ಯೂ, ಮಾನಸಿ ಜೋಶಿ ಅವರು ಆಟಗಾರರನ್ನು ಟೀಕಿಸಿದ್ದರು. ಅಲ್ಲದೆ, ದೈಹಿಕವಾಗಿ ವಿಶೇಷಚೇತನರನ್ನು ಅಣಕಿಸದಂತೆ ಕೋರಿಕೊಂಡಿದ್ದರು. ಹರ್ಭಜನ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಸ್ಪಷ್ಟೀಕರಣವನ್ನು ನೀಡಿದರು ಮತ್ತು ಆಟಗಾರರು ಯಾರ ಭಾವನೆಗಳನ್ನು ನೋಯಿಸಲು ಬಯಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಇಂಗ್ಲೆಂಡ್​ನಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಚಾಂಪಿಯನ್​ಶಿಪ್​ ಗೆದ್ದ ನಂತರ ನಾವು ಮಾಡಿದ ವಿಡಿಯೊ ಬಗ್ಗೆ ದೂರು ನೀಡುತ್ತಿರುವ ನಮ್ಮ ಜನರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ನಾವು ಯಾರ ಭಾವನೆಗಳನ್ನೂ ನೋಯಿಸಲು ಬಯಸಲಿಲ್ಲ. ನಾವು ಪ್ರತಿಯೊಬ್ಬ ವ್ಯಕ್ತಿ ಮತ್ತು ಸಮುದಾಯವನ್ನು ಗೌರವಿಸುತ್ತೇವೆ. ಈ ವೀಡಿಯೊ 15 ದಿನಗಳ ಕಾಲ ಕ್ರಿಕೆಟ್ ಆಡಿದ ನಂತರ ನಮ್ಮ ದೇಹಕ್ಕೆ ಆಗಿರುವ ನೋವನ್ನು ಹೇಳಲು ಬಯಸಿದೆ. ನಾವು ಯಾರನ್ನೂ ಅವಮಾನಿಸಲು ಅಥವಾ ನೋಯಿಸಲು ಪ್ರಯತ್ನಿಸುತ್ತಿಲ್ಲ. ನಾವು ಏನಾದರೂ ತಪ್ಪು ಮಾಡಿದ್ದೇವೆ ಎಂದು ಜನರು ಭಾವಿಸಿದರೆ. ನನ್ನ ಕಡೆಯಿಂದ ನಾನು ಹೇಳಬಹುದಾದುದೆಂದರೆ ಎಲ್ಲರಿಗೂ ಕ್ಷಮಿಸಿ. ಇದನ್ನು ಇಲ್ಲಿಗೆ ನಿಲ್ಲಿಸಿ ಮುಂದೆ ಸಾಗೋಣ ಎಂದು ಹರ್ಭಜನ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ ಸ್ಪರ್ಧಾ ಪಟ್ಟಿಯಲ್ಲಿರುವ ಕ್ರೀಡೆಗಳು ಯಾವುವು? ಇವುಗಳಲ್ಲಿ ಅತ್ಯಂತ ಪ್ರಾಚೀನ ಕ್ರೀಡೆಗಳು ಯಾವುದೆಲ್ಲ?

ಮಾನಸಿಗೆ ಬೇಸರ

ಅಂಗವಿಕಲ ವ್ಯಕ್ತಿಗಳ ನಡಿಗೆಯ ರೀತಿಯನ್ನು ಅಪಹಾಸ್ಯ ಮಾಡಿದ್ದಕ್ಕಾಗಿ ಮಾನಸಿ ಆಟಗಾರರನ್ನು ತೀವ್ರವಾಗಿ ಟೀಕಿಸಿದ್ದರು. “ನಿಮ್ಮಂಥ ಕ್ರೀಡಾಪಟುಗಳಿಂದ ಹೆಚ್ಚಿನ ಜವಾಬ್ದಾರಿಯ ನಡೆಯನ್ನು ಬಯಸುತ್ತೇನೆ. ದಯವಿಟ್ಟು ಅಂಗವಿಕಲರ ನಡಿಗೆಯನ್ನು ಅಪಹಾಸ್ಯ ಮಾಡಬೇಡಿ. ಇದು ತಮಾಷೆಯಲ್ಲ.” ಎಂದು ಮಾನಸಿ ಇನ್ಸ್ಟಾಗ್ರಾಮ್ ಪೋಸ್ಟ್​ಗೆ ಕಾಮೆಂಟ್ ಮಾಡಿದ್ದರು.

“ನಿಮ್ಮ ನಡವಳಿಕೆಯಿಂದ ಎಷ್ಟು ಹಾನಿಯಾಗಬಹುದು ಎಂದು ನಿಮಗೆ ತಿಳಿದಿಲ್ಲ. ಸುತ್ತಮುತ್ತಲಿನ ಜನರಿಂದ ನೀವು ಪಡೆಯುತ್ತಿರುವ ಮೆಚ್ಚುಗೆ ನೋಡಲು ಬೇಸರವಾಗಿದೆ. ನಿಮ್ಮ ಈ ರೀಲ್ ವಿಶೇಷಚೇತನರ ನಡಿಗೆಯ ರೀತಿಯನ್ನು ಗೇಲಿ ಮಾಡಿದೆ. ಈ ರೀಲ್ ಅನ್ನು ಬಳಸುವ ಮೂಲಕ ವಿಶೇಷಚೇತನ ಚಿಕ್ಕ ಮಕ್ಕಳಿಗೆ ಬೇಸರವಾಗಲಿದೆ. ನಿಮ್ಮಲ್ಲಿ ಯಾರಾದರೂ ಕ್ರೀಡಾಪಟುಗಳು ವಿಶೇಷಚೇತನ ಸಮುದಾಯ ಸೇವೆಯನ್ನು ಮಾಡಿದ್ದರೆ ನೀವು ರೀಲ್ ಮಾಡುತ್ತಿರಲಿಲ್ಲ. ಈ ಕ್ರೀಡಾಪಟುಗಳ ಪಿಆರ್ ಏಜೆನ್ಸಿಗಳು ಈ ರೀಲ್ ಅನ್ನು ಸೋಶಿಯಲ್ ಮೀಡಿಯಾಗೆ ಅಪ್​ಲೋಡ್​ ಮಾಡಿದವು ಎಂಬುದೇ ಅಚ್ಚರಿ, ಎಂದು ಮಾನಸಿ ಬರೆದಿದ್ದರು.

ಹರ್ಭಜನ್ ಸಿಂಗ್ ಮತ್ತು ಸುರೇಶ್​ ರೈನಾ ಈ ರೀಲ್ ಅನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಕಾಮೆಂಟ್ ವಿಭಾಗದ ಎಲ್ಲಾ ಜನರ ಬಗ್ಗೆ ನಾನು ನಿಜವಾಗಿಯೂ ನಿರಾಶೆಗೊಂಡಿದ್ದೇನೆ ಎಂದು ಮಾನಸಿ ಹೇಳಿದ್ದಾರೆ. ಇದಕ್ಕೂ ದೊಡ್ಡ ಪ್ರಮಾಣದಲ್ಲಿ ಲೈಕ್​ ಹಾಗೂ ಕಾಮೆಂಟ್​ಗಳು ಬಂದಿವೆ.

Exit mobile version