Site icon Vistara News

IND Vs ENG: 2ನೇ ಟೆಸ್ಟ್‌ನಲ್ಲಿ ಭಾರತಕ್ಕೆ ಭರ್ಜರಿ ಗೆಲುವು; ಮುಯ್ಯಿಗೆ ಮುಯ್ಯಿ, ಸರಣಿ ಸಮ

Indian Cricket Team

IND Vs ENG 2nd Test: India Wins The Match By 106 Runs

ವಿಶಾಖಪಟ್ಟಣಂ: ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಎರಡನೇ ಟೆಸ್ಟ್‌ (IND Vs ENG) ಪಂದ್ಯದಲ್ಲಿ ರೋಹಿತ್‌ ಶರ್ಮಾ (Rohit Sharma) ಬಳಗವು 106 ರನ್‌ಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ಮೊದಲ ಟೆಸ್ಟ್‌ ಪಂದ್ಯದ ಸೋಲಿಗೆ ಭಾರತ ತಂಡವು ಸೇಡು ತೀರಿಸಿಕೊಂಡಂತಾಗಿದೆ. ಅಷ್ಟೇ ಅಲ್ಲ, ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1ರ (Test Series) ಸಮಬಲ ಸಾಧಿಸಿದಂತಾಗಿದೆ. ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗದಲ್ಲಿ ಸಮರ್ಥ ಪ್ರದರ್ಶನ ತೋರಿದ ಭಾರತ ತಂಡವು ಎರಡನೇ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಮೊದಲ ಇನ್ನಿಂಗ್ಸ್‌ನ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ತಂಡ ನೀಡಿದ 399 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತಂಡವು 292 ರನ್‌ಗಳಿಗೆ ಸರ್ವಪತನ ಕಂಡಿತು. ಇಂಗ್ಲೆಂಡ್‌ ಪರ ಜಾಕ್‌ ಕ್ರಾವ್ಲೆ (73) ಹೊರತುಪಡಿಸಿ ಯಾವೊಬ್ಬ ಆಟಗಾರನೂ ಉತ್ತಮ ಪ್ರದರ್ಶನ ತೋರದ ಕಾರಣ ಇಂಗ್ಲೆಂಡ್‌ 292 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲೊಪ್ಪಿಕೊಂಡಿತು. ಭಾರತದ ಪರ ಜಸ್‌ಪ್ರೀತ್‌ ಬೂಮ್ರಾ ಹಾಗೂ ಕುಲದೀಪ್‌ ಯಾದವ್‌ ತಲಾ 3 ವಿಕೆಟ್‌ ಪಡೆದು ಮಿಂಚಿದರು.

ವಿಶಾಖಪಟ್ಟಣಂನಲ್ಲಿರುವ ಡಾ.ವೈ.ಎಸ್.ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡವು ಮೊದಲ ದಿನದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಟಾಸ್ಟ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ರೋಹಿತ್‌ ಶರ್ಮಾ ನಿರ್ಧಾರವನ್ನು ಬ್ಯಾಟ್ಸ್‌ಮನ್‌ಗಳು ಸಮರ್ಥಿಸಿಕೊಂಡರು. ಯಶಸ್ವಿ ಜೈಸ್ವಾಲ್‌ ಭರ್ಜರಿ ದ್ವಿಶತಕದ ನೆರವಿನಿಂದ ಭಾರತ ತಂಡವು 396 ರನ್‌ ಗಳಿಸಿತು.

ಜಸ್‌ಪ್ರೀತ್‌ ಬುಮ್ರಾ ಹಾಗೂ ಕುಲದೀಪ್‌ ಯಾದವ್‌ ದಾಳಿಗೆ ಸಿಲುಕಿದ ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 253 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮೊದಲ ಇನ್ನಿಂಗ್ಸ್‌ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ ಆರಂಭಿಸಿದ ಭಾರತ ತಂಡವು ಶುಭಮನ್‌ ಗಿಲ್‌ ಶತಕದ ನೆರವಿನಿಂದ 255 ರನ್‌ ಗಳಿಸಿ ಆಲೌಟ್‌ ಆಯಿತು. ಇದರೊಂದಿಗೆ ಇಂಗ್ಲೆಂಡ್‌ಗೆ 399 ರನ್‌ಗಳ ಬೃಹತ್‌ ಗುರಿ ನೀಡಿತು. ಆದರೆ, ಗುರಿ ಬೆನ್ನತ್ತುವಲ್ಲಿ ವಿಫಲವಾದ ಇಂಗ್ಲೆಂಡ್‌ 292 ರನ್‌ಗಳಿಗೆ ಆಲೌಟ್‌ ಆಗಿ, ಪರಾಜಯಗೊಂಡಿತು. ಮೂರನೇ ಟೆಸ್ಟ್‌ ಪಂದ್ಯವು ಫೆಬ್ರವರಿ 15ರಿಂದ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್:‌

ಭಾರತ ಪ್ರಥಮ ಇನ್ನಿಂಗ್ಸ್:‌ 396
ಇಂಗ್ಲೆಂಡ್‌ ಪ್ರಥಮ ಇನ್ನಿಂಗ್ಸ್:‌ 253
ಭಾರತ ದ್ವಿತೀಯ ಇನ್ನಿಂಗ್ಸ್:‌ 255
ಇಂಗ್ಲೆಂಡ್‌ ದ್ವಿತೀಯ ಇನ್ನಿಂಗ್ಸ್‌: 292

ಇದನ್ನೂ ಓದಿ: IND vs ENG: ಉಳಿದ ಮೂರು ಟೆಸ್ಟ್ ಪಂದ್ಯಗಳಿಗೂ ಕೊಹ್ಲಿ, ಜಡೇಜಾ, ಶಮಿ ಅಲಭ್ಯ!

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version