ಗಯಾನಾ: ಲೀಗ್ ಮತ್ತು ಸೂಪರ್-8 ಹಂತದಲ್ಲಿ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯವಾಗಿ ಟಿ20 ವಿಶ್ವಕಪ್(T20 World Cup 2024) ನಾಕೌಟ್ ಪ್ರವೇಶಿಸಿರುವ ಭಾರತ(IND vs ENG) ತಂಡದ ಮುಂದೀಗ ಸೇಡಿನ ಪಂದ್ಯವೊಂದು ಕಾದು ಕುಳಿತಿದೆ. ನಾಳೆ(ಗುರುವಾರ) ರಾತ್ರಿ ನಡೆಯಲಿರುವ ಸೆಮಿಫೈನಲ್(T20 World Cup 2024) ಮುಖಾಮುಖಿಯಲ್ಲಿ ರೋಹಿತ್ ಶರ್ಮ ಪಡೆ ಬಲಿಷ್ಠ ಇಂಗ್ಲೆಂಡ್ ಸವಾಲನ್ನು ಎದುರಿಸಲಿದೆ.
ಹಾಲಿ ಚಾಂಪಿಯನ್ ಇಂಗ್ಲೆಂಡ್ 2022ರಲ್ಲಿ ಅಡಿಲೇಡ್ನಲ್ಲಿ ನಡೆದ ಟಿ20 ವಿಶ್ವಕಪ್ ಸೆಮೀಸ್ನಲ್ಲಿ ಭಾರತಕ್ಕೆ 10 ವಿಕೆಟ್ಗಳ ಹೀನಾಯ ಸೋಲುಣಿಸಿ ಫೈನಲ್ ಪ್ರವೇಶಿಸಿತ್ತು. ಇದೀಗ ಅಂದಿನ ಸೋಲಿಗೆ ಸೇಡು ತೀರಿಸಿಕೊಳ್ಳುವ ಅಪೂರ್ವ ಅವಕಾಶವೊಂದು ಭಾರತಕ್ಕೆ ಎದುರಾಗಿದೆ. ಇದರಲ್ಲಿ ರೋಹಿತ್ ಬಳಗ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುದೊಂದು ಕುತೂಹಲ. ದಿನದ ಮೊದಲ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಅಫಘಾನಿಸ್ತಾನ ತಂಡ ಸೆಣಸಾಟ ನಡೆಸಲಿದೆ.
ಅಡಿಲೇಡ್ನಲ್ಲಿ ನಡೆದಿದ್ದ ಕಳೆದ ಟಿ20 ವಿಶ್ವಕಪ್ ಸೆಮೀ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 6 ವಿಕೆಟ್ಗೆ 168 ರನ್ಗಳ ಸಾಧಾರಣ ಮೊತ್ತ ಪೇರಿಸಿ ಸವಾಲೊಡ್ಡಿತು. ಈ ಮೊತ್ತವನ್ನು ಇಂಗ್ಲೆಂಡ್ 16 ಓವರ್ಗಳಲ್ಲೇ ವಿಕೆಟ್ ನಷ್ಟವಿಲ್ಲದೆ 170 ರನ್ ಗಳಿಸಿ ಗೆದ್ದಿತ್ತು. ಜಾಸ್ ಬಟ್ಲರ್(80*) ಮತ್ತು ಅಲೆಕ್ಸ್ ಹೇಲ್ಸ್(86*) ಅಜೇಯ ಬ್ಯಾಟಿಂಗ್ ಆರ್ಭಟದ ಮುಂದೆ ಭಾರತೀಯ ಬೌಲರ್ಗಳು ಸಂಪೂರ್ಣ ಮಂಕಾದರು. ಭಾರತ ಪರ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ಅರ್ಧಶತಕ ಬಾರಿಸಿದ್ದರು. ಆದರೆ ಈ ಬಾರಿ ಕೊಹ್ಲಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. 2 ಶೂನ್ಯ ಕೂಡ ಸುತ್ತಿದ್ದಾರೆ. ಎರಡಂಕಿ ಮೊತ್ತ ಪೇರಿಸಿದ್ದು ಒಮ್ಮೆ ಮಾತ್ರ.
ಇದನ್ನೂ ಓದಿ IND vs ENG: ಭಾರತ-ಇಂಗ್ಲೆಂಡ್ ಸೆಮಿ ಕಾದಾಟಕ್ಕೆ ಮೀಸಲು ದಿನ ಇಲ್ಲ; ಪಂದ್ಯ ರದ್ದಾದರೆ ಯಾರಾಗಲಿದ್ದಾರೆ ವಿಜೇತರು?
ಮಳೆ ಬಂದರೆ ಭಾರತಕ್ಕೆ ಲಾಭ
ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆಯಲಿರುವ ಇತ್ತಂಡಗಳ ನಡುವಣ ಈ ಪಂದ್ಯಕ್ಕೆ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಪಂದ್ಯದ ಸಮಯದಲ್ಲಿ ಮಳೆ ಸುರಿಯುವ ಸಾಧ್ಯತೆ ಶೇ. 88ರಷ್ಟಿದೆ ಎಂದು ಎಚ್ಚರಿಕೆ ನೀಡಿದೆ. ಪಂದ್ಯ ರದ್ದಾದರೂ ಅಚ್ಚರಿ ಇಲ್ಲ ಎಂದು ಹೇಳಿದೆ. ಈ ಪಂದ್ಯಕ್ಕೆ ಮೀಸಲು ದಿನವಿಲ್ಲ. ಆದರೆ, ಪಂದ್ಯ ಮುಗಿಸಲು 250 ನಿಮಿಷಗಳ ಹೆಚ್ಚುವರಿ ಸಮಯವನ್ನು ಐಸಿಸಿ ನೀಡಿದೆ. ಒಂದು ವೇಳೆ ಪಂದ್ಯ ರದ್ದುಗೊಂಡರೆ ಭಾರತ ತಂಡ ಫೈನಲ್ಗೇರಲಿದೆ. ಏಕೆಂದರೆ ಸೂಪರ್-8 ಅಂಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಸಂಪಾದಿಸಿದೆ. ಇಂಗ್ಲೆಂಡ್ ಸೂಪರ್-8 ಅಂಕಪಟ್ಟಿಯಲ್ಲಿ 2ನೇ ಸ್ಥಾನ ಗಳಿಸಿತ್ತು. ಹೀಗಾಗಿ ಈ ಲಾಭ ಭಾರತಕ್ಕೆ ಲಭಿಸಲಿದೆ.
ಜೂನ್ 29ಕ್ಕೆ ಬ್ರಿಜ್ಟೌನ್ನಲ್ಲಿ ಫೈನಲ್ ಪಂದ್ಯ ನಡೆಯಲಿದೆ. ನಿಗದಿತ ದಿನದಂದು ಪಂದ್ಯ ಪೂರ್ಣಗೊಳ್ಳಲಿದ್ದರೆ. ಪಂದ್ಯ ಎಲ್ಲಿಗೆ ನಿಂತಿರುತ್ತದೆಯೇ ಅಲ್ಲಿಂದಲೇ ಮೀಸಲು ದಿನ ಅಂದರೆ ಜೂನ್ 30 (ಭಾನುವಾರ) ನಡೆಯಲಿದೆ. ಫೈನಲ್ನಲ್ಲೂ ಫಲಿತಾಂಶ ನಿರ್ಧಾರಕ್ಕೆ ಉಭಯ ತಂಡಗಳು ಕನಿಷ್ಠ 10 ಓವರ್ ಆಡಬೇಕು. ಮೀಸಲು ದಿನವೂ ಮಳೆ ಅಡ್ಡಿಪಡಿಸಿದರೆ, ಫೈನಲ್ಗೇರಿದ ಎರಡೂ ತಂಡಗಳನ್ನು ಜಂಟಿ ಚಾಂಪಿಯನ್ ಎಂದು ಐಸಿಸಿ ಘೋಷಿಸಲಿದೆ.