ಉತ್ತರ ಪ್ರದೇಶ: 2023ರ ಏಕದಿನ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶ ಕಳೆದುಕೊಂಡ ಭಾರತದ ಮುಂದೆ ಇದೀಗ ಟಿ20 ವಿಶ್ವಕಪ್(T20 World Cup 2024) ಗೆಲ್ಲುವ ಅವಕಾಶವೊಂದು ಬಂದು ನಿಂತಿದೆ. ಇಂದು(ಶನಿವಾರ) ನಡೆಯುವ ಫೈನಲ್(IND vs SA Final) ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅದೃಷ್ಟ ಪರೀಕ್ಷೆಗೆ ಇಳಿಯಲಿದೆ. ಟಿ20 ವಿಶ್ವಕಪ್ ಭಾರತಕ್ಕೆ ಒಲಿಯಲಿ ಎಂಬುದು ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ಹಾರೈಕೆ. ಭಾರತ ತಂಡದ ಯಶಸ್ಸಿಗಾಗಿ ಅಭಿಮಾನಿಗಳು ಮತ್ತು ಕೆಲ ಸಾಧು ಸಂತರು ಉತ್ತರಪ್ರದೇಶದ ಪ್ರಯಾಗ್ ರಾಜ್ನಲ್ಲಿ ವಿಶೇಷ ಪೂಜೆ ನೆರವೇರಿಸಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
2013ರ ಬಳಿಕ ಭಾರತ ಯಾವುದೇ ಐಸಿಸಿ ಟ್ರೋಫಿ ಗೆದ್ದಿಲ್ಲ. ಈ ಬಾರಿಯಾದರೂ ಫೈನಲ್ನಲ್ಲಿ ಗೆದ್ದು ಭಾರತದ ಪ್ರಶಸ್ತಿ ಬರ ನೀಗಲಿ ಎನ್ನುವ ನಿಟ್ಟಿನಲ್ಲಿ ಪ್ರಯಾಗ್ ರಾಜ್ನಲ್ಲಿ ಅಭಿಮಾನಿಗಳು ಟೀಮ್ ಇಂಡಿಯಾ ಆಟಗಾರಾದ ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಸೇರಿ ತಂಡದ ಆಟಗಾರರ ಫೋಟೊವನ್ನು ಇರಿಸಿ ಪೂಜೆ, ಭಜನೆ ಮತ್ತು ಗಂಗಾ ಪೂಜೆ ನೆರವೇರಿಸಿ ಯಶಸ್ಸಿಗೆ ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ IND vs SA Final: ಫೈನಲ್ ಪಂದ್ಯಕ್ಕೂ ಮುನ್ನ ಭಾರತ ತಂಡಕ್ಕೆ ನಡುಕ ಹುಟ್ಟಿಸಿದ ಅಂಪೈರ್!
2014ರಲ್ಲಿ ಭಾರತ ಟಿ20 ಫೈನಲ್ ಪ್ರವೇಶಿಸಿತ್ತು. ಆದರೆ ಲಂಕಾ ವಿರುದ್ಧ ಸೋಲು ಕಂಡು ನಿರಾಸೆ ಅನುಭವಿಸಿತ್ತು. ಇದೀಗ 10 ವರ್ಷಗಳ ಬಳಿಕ ಈ ಕೂಟದಲ್ಲಿ ಭಾರತ ಫೈನಲ್ ಪಂದ್ಯ ಆಡುತ್ತಿದೆ. ಎದುರಾಳಿ ದಕ್ಷಿಣ ಆಫ್ರಿಕಾಕ್ಕೆ ಇದು ಚೊಚ್ಚಲ ಫೈನಲ್ ಪಂದ್ಯವಾಗಿದೆ. ಇತ್ತಂಡಗಳು ಕೂಡ ಟೂರ್ನಿಯ ಅಜೇಯ ತಂಡಗಳಾಗಿ ಫೈನಲ್ ಪ್ರವೇಶಿಸಿರುವ ಕಾರಣ ಈ ಪ್ರಶಸ್ತಿ ಸಮರ ತೀವ್ರ ಕುತೂಹಲ, ರೋಮಾಂಚನ ಸೃಷ್ಟಿಸುವುದರಲ್ಲಿ ಅನುಮಾನವಿಲ್ಲ.
ಪಿಚ್ ರಿಪೋರ್ಟ್
ಬ್ರಿಜ್‌ಟೌನ್‌ನಲ್ಲಿ ಈವರೆಗೆ 50 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಾಗಿದೆ. ಮೊದಲು ಬ್ಯಾಟಿಂಗ್ ನಡೆಸಿದ ತಂಡ 31ರಲ್ಲಿ ಗೆಲುವು ಕಂಡಿದೆ. ಈ ಟೂರ್ನಿಯಲ್ಲಿ ಭಾರತ ಬ್ರಿಜ್‌ಟೌನ್‌ನಲ್ಲಿ ಒಂದು ಪಂದ್ಯ ಆಡಿ ಗೆಲುವು ಕಂಡಿದೆ. ದಕ್ಷಿಣ ಆಫ್ರಿಕಾ ಇಲ್ಲಿ ಇನ್ನೂ ಆಡಿಲ್ಲ. ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡರೆ ಉತ್ತಮ.
ಭಾರತ ತಂಡದ ದೊಡ್ಡ ಸಮಸ್ಯೆ ಎಂದರೆ ಲೀಗ್, ಸೆಮಿಫೈನಲ್ನಲ್ಲಿ ಎಷ್ಟೇ ಉತ್ತಮ ಪ್ರದರ್ಶನ ತೋರಿದರೂ ಕೂಡ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಂಪೂರ್ಣ ನರ್ವಸ್ ಆಗಿ ಆಡುವುದು. ಒಂದು ವಿಕೆಟ್ ಬಿದ್ದರೆ ಸಾಕು ಬಳಿಕ ಕ್ರೀಸ್ಗಿಳಿವ ಬ್ಯಾಟರ್ಗಳು ಭಯದಿಂದಲೇ ಆಡಲು ಮುಂದಾಗಿ ಸತತವಾಗಿ ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುತ್ತಾರೆ. ಕಳೆದ ಏಕದಿನ ವಿಶ್ವಕಪ್ ಫೈನಲ್, ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಇದಕ್ಕೆ ಉತ್ತಮ ನಿದರ್ಶನ. ಹೀಗಾಗಿ ನಾಳೆ ನಡೆಯುವ ಫೈನಲ್ ಪಂದ್ಯದಲ್ಲಿ ಬ್ಯಾಟರ್ಗಳು ಮತ್ತು ಬೌಲರ್ಗಳು ವಿಚಲಿತರಾಗದೆ ಆಡಬೇಕು.