Site icon Vistara News

IND vs SL ODI : ನಾಟಕೀಯ ತಿರುವು; ಲಂಕಾ ವಿರುದ್ಧದ ಮೊದಲ ಏಕ ದಿನ ಪಂದ್ಯ ಟೈ

IND vs SL ODI

ಕೊಲೊಂಬೊ: ಆತಿಥೇಯ ಶ್ರೀಲಂಕಾ ವಿರುದ್ಧದ ಮೊದಲ ಏಕ ದಿನ (IND vs SL ODI ) ಪಂದ್ಯ ಟೈನಲ್ಲಿ ಮುಕ್ತಾಯಗೊಂಡಿದೆ. ಕೊನೇ ಹಂತದಲ್ಲಿ ನಡೆದ ನಾಟಕೀಯ ತಿರುವು ಮೂಲಕ ಲಂಕಾ ತಂಡವವು ಭಾರತಕ್ಕೆ ಗೆಲುವು ನಿರಾಕರಿಸಿತು. ಅಂದ ಹಾಗೆ ಇದು ಲಂಕಾ ಪ್ರವಾಸದಲ್ಲಿ ಸತತವಾಗಿ ಎರಡನೇ ಪಂದ್ಯ ಟೈ ಆಗುತ್ತಿರುವುದು. ಟಿ20 ಸರಣಿಯ ಮೂರನೇ ಪಂದ್ಯ ಟೈ ಆಗಿತ್ತು. ಬಳಿಕ ಸೂಪರ್ ಓವರ್​ನಲ್ಲಿ ಭಾರತ ಗೆಲುವು ಕಂಡಿತ್ತು. ಅದು ಮುಗಿದು ಏಕ ದಿನ ಸರಣಿಯ ಮೊದಲ ಪಂದ್ಯದಲ್ಲಿ ಮತ್ತದೇ ಫಲಿತಾಂಶ ಮೂಡಿ ಬಂದಿರುವುದು ಕಾಕತಾಳೀಯವಾಗಿದೆ. ಶಿವಂ ದುಬೆ ಫೋರ್ ಬಾರಿಸಿದಾಗ ಭಾರತದ ಗೆಲುವು ಬಹುತೇಕ ನಿಶ್ಚಿತವಾಗಿತ್ತು. ಆದರೆ, ನಂತರದ ಎರಡು ಎಸೆತಗಳಲ್ಲಿ ಎರಡು ವಿಕೆಟ್​ ಕಳೆದುಕೊಂಡಾಗ ಭಾರತದ ಡ್ರೆಸಿಂಗ್​ ರೂಮ್ ಆಘಾತಕ್ಕೆ ಒಳಗಾಯಿತು.

ಇಲ್ಲಿನ ಪ್ರೇಮದಾಸ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡ ಮೊದಲು ಬ್ಯಾಟ್ ಮಾಡಿದ ಲಂಕಾ ನಿಗದಿತ 50 ಓವರ್​ಗಳಲ್ಲಿ 8 ವಿಕೆಟ್​ಗೆ 230 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 47.5 ಓವರ್​ಗಳಲ್ಲಿ 230 ರನ್​ಗಳಿಗೆ ಆಲ್​ಔಟ್ ಆಯಿತು. ಭಾರತ ತಂಡದ ಪರ ರೋಹಿತ್ ಶರ್ಮಾ (58 ರನ್​) ಬಾರಿಸಿದ ಅರ್ಧ ಶತಕ ವ್ಯರ್ಥಗೊಂಡಿತು. ಇದೇ ವೇಳೆ ಲಂಕಾ ಪರ ದುನಿತ್ ವೆಲ್ಲಾಲಗಿ ಬ್ಯಾಟಿಂಗ್​ನಲ್ಲಿ ಅಜೇಯ 67 ರನ್ ಹಾಗೂ ಬೌಲಿಂಗ್​ನಲ್ಲಿ ಕೊನೇ 2 ವಿಕೆಟ್ ಉರುಳಿಸುವ ಮೂಲಕ ಆ ತಂಡ ಮರ್ಯಾದೆ ಕಾಪಾಡಿದರು.

ಬ್ಯಾಟಿಂಗ್ ಆರಂಭಿಸಿದ ಶ್ರೀಲಂಕಾ 101ರನ್​ಗಳಿ 5 ವಿಕೆಟ್ ಕಳೆದುಕೊಂಡಿತ್ತು. ಅಲ್ಲಿಂದ ಚೇತರಿಸಿಕೊಂಡು 230 ರನ್​ಗಳ ಹೋರಾಟದ ಮೊತ್ತವನ್ನು ದಾಖಲಿಸಿತು. ದುನಿತ್ ವೆಲ್ಲಾಲಗೆ ಅವರ ಚೊಚ್ಚಲ ಅರ್ಧಶತಕ ಆ ತಂಡಕ್ಕೆ ನೆರವಾಯಿತು. ಇದಕ್ಕೆ ಉತ್ತರವಾಗಿ ರೋಹಿತ್ 33 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ್ದರು. ಭಾರತವು ಮೊದಲ ಪವರ್ ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 71 ರನ್ ಗಳಿಸಿತ್ತು. ಆದರೆ ನಂತರದಲ್ಲಿ ಶ್ರೀಲಂಕಾದ ಸ್ಪಿನ್ನರ್ ಗಳು ಭಾರತದ ವೇಗಕ್ಕೆ ಬ್ರೇಕ್ ಹಾಕಿದರು. ನಾಲ್ಕನೇ ಕ್ರಮಾಂಕಕ್ಕೆ ಬಡ್ತಿ ಪಡೆದ ವಾಷಿಂಗ್ಟನ್ ಸುಂದರ್ ಬೌಂಡರಿ ಬಾರಿಸಿದ ನಂತರ ಔಟಾದರು. ಅನುಭವಿ ಜೋಡಿ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಹೆಚ್ಚು ಹೊತ್ತು ಆಡಲಿಲ್ಲ. ಶ್ರೀಲಂಕಾ ಅವರನ್ನು ಬ್ಯಾಕ್ ಟು ಬ್ಯಾಕ್ ಪೆವಿಲಿಯನ್​ಗೆ ಕಳುಹಿಸಿತು.

ಇದನ್ನೂ ಓದಿ: Paris Olympics 2024 : ಪ್ಯಾರಿಸ್​ ಒಲಿಂಪಿಕ್ಸ್​ನ 8ನೇ ದಿನವಾದ ಶನಿವಾರ ಭಾರತದ ಸ್ಪರ್ಧೆಗಳ ವಿವರ ಇಲ್ಲಿದೆ

5 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದ್ದ ಭಾರತ ತಂಡ ಉತ್ತಮ ಸ್ಥಿತಿಯಲ್ಲಿ ಇದ್ದಂತೆ ಕಂಡಿತು. ಕೆಎಲ್ ರಾಹುಲ್ (31) ಮತ್ತು ಅಕ್ಷರ್ (33) ಸ್ವಲ್ಪ ಹೊತ್ತು ತಂಡಕ್ಕೆ ಆಧಾರವಾದರು. ಆದರೆ, ಹಸರಂಗ ರಾಹುಲ್ ಔಟ್ ಮಾಡಿದರೆ, ಅಕ್ಷರ್​ ಪಟೇಲ್​ಗೆ ಅಸಲಂಕಾ ಪೆವಿಲಿಯನ್ ದಾರಿ ತೋರಿದರು. ಬಳಿಕ ಕುಲ್ದೀಪ್ ಯಾದವ್​ ಹಸರಂಗ ಎಸೆತಕ್ಕೆ ಔಟಾದಾಗ ಗೆಲುವು ಲಂಕಾ ಕಡೆಗೆ ತಿರುಗಿತ್ತು. ಆದರೆ, ಅದಕ್ಕಿಂತ ಮೊದಲು ಬ್ಯಾಟ್ ಮಾಡಲು ಬಂದ ಶಿವಂ ದುಬೆ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸುವುದರೊಂದಿಗೆ ಭಾರತದ ಪಾಳೆಯದಲ್ಲಿ ನಗು ಮೂಡಿಸಿದರು. ಆದರೆ ಗೆಲ್ಲಲು ಒಂದು ರನ್ ಬೇಕಾಗಿದ್ದಾಗ ಅವರು ಔಟಾದರು. ನಂತರದ ಎಸೆತದಲ್ಲಿ ಅರ್ಶ್​ದೀಪ್ ಸಿಂಗ್ ಔಟಾಗಿ ನಿರ್ಗಮಿಸಿದರು.

ಈ ಫಲಿತಾಂಶದೊಂದಿಗೆ ಲಂಕಾ ತಂಡ ನಿರಾಳವಾಗಲಿದೆ. ಟಿ 20 ಪಂದ್ಯಗಳಲ್ಲಿ ನಾಟಕೀಯ ಕುಸಿತದಿಂದ ತಂಡ ಟೀಕೆಗಳನ್ನು ಎದುರಿಸಿತ್ತು. ಆದರೆ, ಈಗ ಭಾರತವನ್ನೇ ನಾಟಕೀಯವಾಗಿ ಕುಸಿಯುಂತೆ ಮಾಡಿದೆ. ಅದರಲ್ಲೂ ಸ್ಪಿನ್ನರ್​ಗಳು ಆ ತಂಡಕ್ಕೆ ಆಧಾರವಾದರು. ಭಾನುವಾರ ಇತ್ತಂಡಗಳ ನಡುವೆ ಎರಡನೇ ಪಂದ್ಯ ನಡೆಯಲಿದೆ.

Exit mobile version