ನ್ಯೂಯಾರ್ಕ್: ಅಮೆರಿಕ(IND vs USA) ವಿರುದ್ಧ ಇಂದು(ಬುಧವಾರ) ನಡೆಯುವ ಟಿ20 ವಿಶ್ವಕಪ್ ಲೀಗ್(T20 World Cup 2024) ಪಂದ್ಯದಲ್ಲಿ ಟೀಮ್ ಇಂಡಿಯಾ ತನ್ನ ಆಡುವ ಬಳಗಲ್ಲಿ 2 ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಆಲ್ರೌಂಡರ್ಗಳಾದ ಶಿವಂ ದುಬೆ(Shivam Dube) ಮತ್ತು ರವೀಂದ್ರ ಜಡೇಜಾ(Ravindra Jadeja) ಅವರನ್ನು ಕೈಬಿಡಲಾಗುವುದು ಎಂಬ ಮಾತುಗಳು ಕೇಳಿಬಂದಿವೆ.
ಶಿವಂ ದುಬೆ ಆಲ್ರೌಂಡರ್ ಕೋಟದಲ್ಲಿ ಕಳೆದ 2 ಪಂದ್ಯಗಳಲ್ಲಿ ಆಡಿದ್ದರೂ ಕೂಡ ಬೌಲಿಂಗ್ ನಡೆಸಿರಲಿಲ್ಲ. ಅಲ್ಲದೆ ಪಾಕ್ ವಿರುದ್ಧ ಬ್ಯಾಟಿಂಗ್ ಅವಕಾಶ ಸಿಕ್ಕರೂ ಇದನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದರು. ಕೇವಲ 3 ರನ್ ಗಳಿಸಿದ್ದರು. ಜತೆಗೆ ಕಳಪೆ ಫೀಲ್ಡಿಂಗ್ ಮೂಲಕ ಕ್ಯಾಚ್ ಒಂದನ್ನು ಕೂಡ ಕೈಚೆಲ್ಲಿದ್ದರು. ಜಡೇಜಾ ಕೂಡ ಆಡಿದ 2 ಪಂದ್ಯಗಳಲ್ಲಿಯೂ ವಿಕೆಟ್ ಲೆಸ್ ಎನಿಸಿಕೊಂಡಿದ್ದಾರೆ. ಹೀಗಾಗಿ ಉಭಯ ಆಟಗಾರರನ್ನು ಕೈ ಬಿಟ್ಟು ಇವರ ಸ್ಥಾನದಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಆಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಜೈಸ್ವಾಲ್ ಓಪನಿಂಗ್?
ಕಳೆದೆರಡು ಪಂದ್ಯಗಳಲ್ಲಿ ಆರಂಭಿಕನಾಗಿ ಆಡಿದ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ನಿರೀಕ್ಷಿತ ಬ್ಯಾಟಿಂಗ್ ನಡೆಸುವಲ್ಲಿ ಮಂಕಾಗಿದ್ದರು. ಒಂದಂಕಿಗೆ ಸೀಮಿತರಾಗಿ ಘೋರ ಬ್ಯಾಟಿಂಗ್ ವೈಫಲ್ಯ ಎದುರಿಸಿದ್ದರು. ಈಗಾಗಲೇ ಕೊಹ್ಲಿಯನ್ನು ಆರಂಭಿಕನಾಗಿ ಆಡಿಸಿದ್ದಕ್ಕೆ ಹಲವು ಮಾಜಿ ಆಟಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೊಹ್ಲಿ ದ್ವಿತೀಯ ಕ್ರಮಾಂಕದಲ್ಲಿ ಆಡಿದರೇ ಸೂಕ್ತ ಎಂದಿದ್ದಾರೆ. ಇಂದಿನ ಪಂದ್ಯದಲ್ಲಿ ಜೈಸ್ವಾಲ್ಗೆ ಅವಕಾಶ ನೀಡಿದ್ದೇ ಆದರೆ, ರೋಹಿತ್ ಜತೆ ಜೈಸ್ವಾಲ್ ಇನಿಂಗ್ಸ್ ಆರಂಭಿಸಬಹುದು.
ಇದನ್ನೂ ಓದಿ AUS vs NAM: 17 ವರ್ಷಗಳ ಹಿಂದಿನ ಅನಗತ್ಯ ಟಿ20 ದಾಖಲೆ ಮುರಿದ ಗೆರ್ಹಾರ್ಡ್ ಎರಾಸ್ಮಸ್
ಅಮೆರಿಕ ತಂಡ ಕ್ರಿಕೆಟ್ ಶಿಶು ಆಗಿದ್ದರೂ ಕೂಡ ತಂಡದಲ್ಲಿ ಆಡುವ ಆಟಗಾರರಿಗೆ ಕ್ರಿಕೆಟ್ ಹೊಸದಲ್ಲ. ಎಲ್ಲರು ಅನುಭವಿ ಆಟಗಾರರು. ಈ ತಂಡದ ವಿಶೇಷವೆಂದರೆ ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್, ಕೆನಡಾ ಸೇರಿ ಹಲವು ದೇಶಗಳ ಕ್ರಿಕೆಟಿಗರು ಈ ತಂಡದಲ್ಲಿ ಕಾಣಿಸಿಕೊಂಡಿರುವುದು. ಬಹುಪಾಲು ಭಾರತೀಯ ಆಟಗಾರರೇ ನೆಚ್ಚಿಕೊಂಡಿದ್ದಾರೆ. ಕನ್ನಡಿಗ ನಾಸ್ತುಷ್ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ನಾಯಕ ಮೊನಾಂಕ್ ಪಟೇಲ್ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಹೀಗಾಗಿ ಭಾರತ ಯಾವುದೇ ಕಾರಣಕ್ಕೂ ಎದುರಾಳಿಗಳನ್ನು ಕಡೆಗಣಿಸುವಂತಿಲ್ಲ.
ಸಂಭಾವ್ಯ ತಂಡ
ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್, ಕುಲ್ದೀಪ್ ಯಾದವ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.
ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.