Site icon Vistara News

U19 World Cup: ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಫೈನಲ್‌ಗೆ ಲಗ್ಗೆಯಿಟ್ಟ ಭಾರತ

U19 Indian Cricket team

Under 19 World Cup: India Beats South Africa By 3 Wickets In Sem Final, Enters Final

ಕೇಪ್‌ಟೌನ್‌: 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಯ (U19 World Cup) ಸೆಮಿಫೈನಲ್‌ನಲ್ಲಿ ಭಾರತ ಕ್ರಿಕೆಟ್‌ ತಂಡವು (Indian Cricket Team) ದಕ್ಷಿಣ ಆಫ್ರಿಕಾವನ್ನು 2 ವಿಕೆಟ್‌ಗಳಿಂದ ಮಣಿಸುವ ಮೂಲಕ ಫೈನಲ್‌ ತಲುಪಿದೆ. ಸೆಮಿಫೈನಲ್‌ನಲ್ಲಿ ಭಾರತದ ವಿರುದ್ಧ ಪರಾಜಯ ಅನುಭವಿಸುವ ಮೂಲಕ ದಕ್ಷಿಣ ಆಫ್ರಿಕಾದ 19 ವರ್ಷದೊಳಗಿನವರ ತಂಡವು (South Africa) ಕೂಡ ಚೋಕರ್ಸ್‌ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಬೌಲಿಂಗ್‌ ಹಾಗೂ ಬ್ಯಾಟಿಂಗ್‌ನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತದ ಯುವ ತಂಡವು ಗೆಲುವು ಸಾಧಿಸುವ ಮೂಲಕ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದರೊಂದಿಗೆ ಭಾರತದ 19 ವರ್ಷದೊಳಗಿನವರ ತಂಡವು ಸತತ 5ನೇ ಬಾರಿಗೆ ಫೈನಲ್‌ ತಲುಪಿದಂತಾಗಿದೆ. ಅಷ್ಟೇ ಅಲ್ಲ, 9ನೇ ಬಾರಿ ಪ್ರಶಸ್ತಿ ಸುತ್ತಿಗೆ ಕಾಲಿಟ್ಟಿದೆ.

ದಕ್ಷಿಣ ಆಫ್ರಿಕಾದ ವಿಲೋಮೂರ್‌ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ತಂಡವು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ನಿಗದಿತ 50 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾ ತಂಡವು 244 ರನ್‌ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಭಾರತ ತಂಡವು ಯಶಸ್ವಿಯಾಗಿ ಗುರಿ ಮುಟ್ಟಿತು. ಫೆಬ್ರವರಿ 8ರಂದು ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನ ತಂಡಗಳು ಎರಡನೇ ಸಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿದ್ದು, ಗೆದ್ದ ತಂಡವು ಫೈನಲ್‌ನಲ್ಲಿ ಭಾರತವನ್ನು ಎದುರಿಸಲಿದೆ.

ಉದಯ್-ಸಚಿನ್‌ ಆಸರೆ

245 ರನ್‌ಗಳ ಗುರಿ ಬೆನ್ನತ್ತಿದ ಭಾರತ ತಂಡವು ಒಂದು ಹಂತದಲ್ಲಿ 34 ರನ್‌ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದರೆ, ನಾಯಕ ಉದಯ್‌ ಸಹರಾನ್‌ ಹಾಗೂ ಸಚಿನ್‌ ಧಾಸ್‌ ಅವರು ತಂಡಕ್ಕೆ ಆಸರೆಯಾದರು. 95 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್‌ ನೆರವಿನಿಂದ ಸಚಿನ್‌ ಧಾಸ್‌ 96 ರನ್‌ ಗಳಿಸಿ ಔಟಾದರು. ನಾಯಕನ ಆಟವಾಡಿದ ಉದಯ್‌ ಸಹರಾನ್‌ ಅತ್ಯಮೂಲ್ಯ 81 ರನ್‌ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.

ಇದನ್ನೂ ಓದಿ: Kane Williamson: ಬ್ರಾಡ್ಮನ್, ಕೊಹ್ಲಿಯ ಶತಕದ ದಾಖಲೆ ಹಿಂದಿಕ್ಕಿದ ಕೇನ್ ವಿಲಿಯಮ್ಸನ್

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ ತಂಡವು ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ಕಳೆದುಕೊಂಡು 244 ರನ್‌ ಗಳಿಸಿತು. ಲ್ಹುವಾನ್‌ ಡ್ರೆ ಪ್ರೆಟೋರಿಯಸ್‌ (76 ರನ್)‌ ಹಾಗೂ ರಿಚರ್ಡ್‌ ಸೆಲೆಟ್ಸ್‌ವೇನ್‌ (64) ಅವರ ಸಮಯೋಚಿತ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು 200 ರನ್‌ಗಳ ಗಡಿ ದಾಟಿತು. ಭಾರತದ ಪರ ರಾಜ್‌ ಲಿಂಬಾನಿ 3 ವಿಕೆಟ್‌ ಹಾಗೂ ಮುಶೀರ್‌ ಖಾನ್‌ 2 ವಿಕೆಟ್‌ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌

ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 244/7
(ಲ್ಹುವಾನ್‌ ಡ್ರೆ ಪ್ರೆಟೋರಿಯಸ್‌ 76, ರಾಜ್‌ ಲಿಂಬಾನಿ 60ಕ್ಕೆ 3)

ಭಾರತ 48.5 ಓವರ್‌ಗಳಲ್ಲಿ 248/8
(ಸಚಿನ್‌ ಧಾಸ್‌ 96, ಉದಯ್‌ ಸಹರಾನ್‌ 81, ಕ್ವೆನಾ ಮಫಾಕ 32ಕ್ಕೆ 3)

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version