Site icon Vistara News

IPL 2024: ದಯವಿಟ್ಟು ಆರ್​ಸಿಬಿ ತಂಡವನ್ನು ಮಾರಿಬಿಡಿ; ಅಳಲು ತೋಡಿಕೊಂಡ ಟೆನಿಸ್​ ದಿಗ್ಗಜ

IPL 2024

ಬೆಂಗಳೂರು: ಕನ್ನಡಿಗರ ನೆಚ್ಚಿನ ತಂಡ ಎನಿಸಿಕೊಂಡಿರುವ ರಾಯಲ್ ಚಾಲೆಂಜರ್ಸ್​ ಬೆಂಗಳೂರು(RCB) ತಂಡದ ಶೋಚನೀಯ ಪ್ರದರ್ಶನ ಕಂಡು ಭಾರತದ ಟೆನಿಸ್​ ದಿಗ್ಗಜ ಮಹೇಶ್‌ ಭೂಪತಿ(Mahesh Bhupathi) ಬೇಸರ ವ್ಯಕ್ತಪಡಿಸಿದ್ದು, ದಯವಿಟ್ಟು ತಂಡವನ್ನು(IPL 2024) ಹೊಸ ಮಾಲಿಕರಿಗೆ ಮಾರಿ ಬಿಡಿ ಎಂದು ಹೇಳಿದ್ದಾರೆ.

“ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರರ ಸಲುವಾಗಿ ಬಿಸಿಸಿಐ ಇತರ ತಂಡಗಳು ಮಾಡಿದ ರೀತಿಯಲ್ಲಿ ಕ್ರೀಡಾ ಫ್ರಾಂಚೈಸಿಯನ್ನು ನಿರ್ಮಿಸಲು ಕಾಳಜಿವಹಿಸುವ ಹೊಸ ಮಾಲೀಕರಿಗೆ ಆರ್​ಸಿಬಿ ತಂಡವನ್ನು ಮಾರಾಟ ಮಾಡುವ ಅಗತ್ಯವಿದೆ ಎಂದು ನಾನು ಭಾವಿಸುತ್ತೇನೆ” ಎಂದು ಮಹೇಶ್‌ ಭೂಪತಿ ಟ್ವಿಟರ್​ ಎಕ್ಸ್​ನಲ್ಲಿ ಪೋಸ್ಟ್​ ಮಾಡಿ ಅಳಲು ತೋಡಿಕೊಂಡಿದ್ದಾರೆ.

ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಆರ್​ಸಿಬಿ(Royal Challengers Bengaluru) ತಂಡ ಕಪ್​ ಗೆಲ್ಲದಿದ್ದರೂ ಕೂಡ ಇಷ್ಟೊಂದು ಕಳಪೆ ಮಟ್ಟದ ಆಟವಾಡಿರಲಿಲ್ಲ. ಈ ಬಾರಿ ಆಡಿದ 7 ಪಂದ್ಯಗಳ ಪೈಕಿ ಕೇವಲ ಒಂದು ಪಂದ್ಯ ಮಾತ್ರ ಗೆಲುವು ಕಂಡಿದೆ. ದುರಾದೃಷ್ಟವಶಾತ್‌ ಈ ಬಾರಿ ತವರಿನಲ್ಲೇ ಅತ್ಯಧಿಕ ಪಂದ್ಯ ಸೋತ ಅವಮಾನಕ್ಕೆ ಸಿಲುಕಿದೆ.


ಟೂರ್ನಿ ಆರಂಭಕ್ಕೂ ಮುನ್ನ ವಿರಾಟ್​ ಕೊಹ್ಲಿ ಇದು ಆರ್​ಸಿಬಿಯ ಹೊಸ ಅಧ್ಯಾಯ ಎಂದು ಹೇಳುವು ಮೂಲಕ ಆರ್‌ಸಿಬಿ ಹವಾ ಸೃಷ್ಟಿಸಿತ್ತು. ಇದೀಗ ಸತತ ಸೋಲಿನಿಂದ ಸಾಮಾಜಿಕ ಜಾಲತಾಣದಲ್ಲಿ ಮುಗಿದು ಹೋದ ಅಧ್ಯಾಯ ಅಂತ ಅಭಿಮಾನಿಗಳು ವ್ಯಂಗ್ಯವಾಗಿ ಹೇಳತೊಡಗಿದ್ದಾರೆ. ಆರ್​ಸಿಬಿ ಮೇಲೆ ಸ್ವತಃ ಅಭಿಮಾನಿಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ.

ಇದನ್ನೂ ಓದಿ IPL 2024: ವಿಶ್ರಾಂತಿ ಬಯಸಿದ ಗ್ಲೆನ್ ಮ್ಯಾಕ್ಸ್​ವೆಲ್​; ಮುಂದಿನ ಪಂದ್ಯಗಳಿಗೆ ಅಲಭ್ಯ

ತಂಡದದಲ್ಲಿ ಸ್ಟಾರ್​ ಆಟಗಾರರಿದ್ದರೂ ಕೂಡ ಯಾರು ನಿರೀಕ್ಷಿತ ಪ್ರದರ್ಶನ ತೋರುತ್ತಿಲ್ಲ. ವಿರಾಟ್​ ಕೊಹ್ಲಿ, ದಿನೇಶ್​ ಕಾರ್ತಿಕ್​ ಮಾತ್ರ ತಂಡದ ನಂಬಿಕಸ್ಥ ಆಟಗಾರರಾಗಿದ್ದಾರೆ. ಆರ್​ಸಿಬಿ ಬ್ಯಾಟಿಂಗ್‌ನಲ್ಲಿ ಯಶಸ್ವಿಯಾದರೆ ಬೌಲಿಂಗ್‌ನಲ್ಲಿ ಎಡವುತ್ತಿದೆ. ಬೌಲಿಂಗ್‌ನಲ್ಲಿ ಯಶಸ್ವಿಯಾದರೆ, ಬ್ಯಾಟಿಂಗ್‌ನಲ್ಲಿ ಪಲ್ಟಿ ಹೊಡೆಯುತ್ತಿದೆ. ಬೌಲಿಂಗ್‌ ಪಡೆಯಂತೂ ಸಂಪೂರ್ಣ ಮೊನಚು ಕಳೆದುಕೊಂಡಿದೆ. ಇದು, ಸಹಜವಾಗಿ ಆರ್‌ಸಿಬಿಯನ್ನು ಸೋಲಿನ ಸುಳಿಗೆ ತಳ್ಳಿದೆ. ಒಟ್ಟಿನಲ್ಲಿ ಸಂಘಟನಾತ್ಮಕ ಹೋರಾಟವೇ ಬರುತ್ತಿಲ್ಲ. 

ಆರ್‌ಸಿಬಿ ಪ್ಲೇ ಆಫ್ ಹಾದಿ ಸಂಪೂರ್ಣ ಮುಚ್ಚಿಲ್ಲ. ಆದರೆ, ಸತತವಾಗಿ ಗೆಲ್ಲಬೇಕಾದ ಒತ್ತಡ ತಂಡದ ಮೇಲಿದೆ. ಈಗಾಗಲೇ 7 ಪಂದ್ಯ ಆಡಿದ್ದು, 1 ಪಂದ್ಯ ಗೆದ್ದು, 6 ಪಂದ್ಯದಲ್ಲಿ ಸೋಲು ಕಂಡಿದೆ. 2 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಆದರೆ, ಲೀಗ್‌ ಹಂತದಲ್ಲಿ ಇನ್ನೂ 7 ಪಂದ್ಯಗಳ ಬಾಕಿ ಇದೆ. ಹೀಗಾಗಿ ಉಳಿದ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ ಮಾತ್ರ ಪ್ಲೇ ಆಫ್ ಅವಕಾಶ ಇದೆ. ಜತೆಗೆ ಉಳಿದ ತಂಡಗಳ ಪ್ರದರ್ಶನವೂ ಆರ್‌ಸಿಬಿ ಪ್ಲೇಆಫ್ ಹಾದಿಯ ಮೇಲೆ ಪರಿಣಾಮ ಬೀರಲಿದೆ

Exit mobile version