Site icon Vistara News

IPL 2024 : ಅಮ್ಮನನ್ನು ಆಸ್ಪತ್ರೆಯಲ್ಲಿ ಮಲಗಿಸಿ ಕೆಕೆಆರ್​ ಪರ ಕ್ವಾಲಿಫೈಯರ್ ಆಡಿದ ಆಫ್ಘನ್​ ಕ್ರಿಕೆಟಿಗ

IPL 2024

ಬೆಂಗಳೂರು: ಅಫ್ಘಾನಿಸ್ತಾನದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಹಮಾನುಲ್ಲಾ ಗುರ್ಬಾಜ್ (Rahmanullah Gurbaz) ಅವರು ಐಪಿಎಲ್ 2024 (IPL 2024) ಪ್ಲೇಆಫ್​ ಪಂದ್ಯದಲ್ಲಿ ಆಡಿದ್ದಾರೆ ಆದರೆ ಅವರು ಅನಾರೋಗ್ಯ ಪೀಡಿತ ತಮ್ಮ ತಾಯಿಯನ್ನು ಆಸ್ಪತ್ರೆಯಲ್ಲಿ ಅಡ್ಮಿಟ್​ ಮಾಡಿ ಬಂದು ಆಡಿರುವುದಾಗಿ ಹೇಳಿದ್ದಾರೆ. ಅಹ್ಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಕ್ವಾಲಿಫೈಯರ್ 1 ಪಂದ್ಯದಲ್ಲಿ ಕೆಕೆಆರ್ ಸನ್​ರೈಸರ್ಸ್​ ಹೈದರಾಬಾದ್ ತಂಡವನ್ನು 8 ವಿಕೆಟ್​ಗಳಿಂದ ಸೋಲಿಸಿತ್ತು. ಪ್ರಸ್ತುತ ನಡೆಯುತ್ತಿರುವ ಐಪಿಎಲ್ 2024 ರಲ್ಲಿ ಗುರ್ಬಾಜ್ ಅವರ ಮೊದಲ ಪಂದ್ಯವಾಗಿತ್ತು. ಯಾಕೆಂದರೆ ಓಪನಿಂಗ್ ಸ್ಪಾಟ್​ ಇಂಗ್ಲೆಂಡ್​​ನ ಫಿಲ್ ಸಾಲ್ಟ್ ತುಂಬಿದ್ದ ಕಾರಣ ಅವರಿಗೆ ಇದುವರೆಗೆ ಅವಕಾಶ ಸಿಕ್ಕಿರಲಿಲ್ಲ. ಸಾಲ್ಟ್ ರಾಷ್ಟ್ರೀಯ ಕರ್ತವ್ಯಕ್ಕೆ ಮರಳಿದ್ದು ಗುರ್ಬಾಜ್​ಗೆ ಅವಕಾಶ ಸಿಕ್ಕಿದೆ.

ಆಕ್ರಮಣಕಾರಿ ಬಲಗೈ ಬ್ಯಾಟರ್​​ 14 ಎಸೆತಗಳಲ್ಲಿ, ಎರಡು ಬೌಂಡರಿಗಳು ಮತ್ತು ಅಷ್ಟೇ ಸಿಕ್ಸರ್​ಗಳೊಂದಿಗೆ 23 ರನ್ ಗಳಿಸಿದ್ದಾರೆ. ಆ ಮೂಲಕ ಕೆಕೆಆರ್​ಗೆ 6.2 ಓವರ್​ಗಳು ಬಾಕಿ ಇರುವಾಗ 160 ರನ್​ಗಳ ಗುರಿಯನ್ನು ಬೆನ್ನಟ್ಟಲು ಸಹಾಯ ಮಾಡಿದ್ದರು. ಅಹಮದಾಬಾದ್ನಲ್ಲಿ ನಡೆದ ಕ್ವಾಲಿಫೈಯರ್ 1 ರಲ್ಲಿ ಎಸ್​ಆರ್​ಎಚ್ ತಂಡವನ್ನು ಎಂಟು ವಿಕೆಟ್​​ಗಳಿಂದ ಸೋಲಿಸಿ ಮೇ 26 ರಂದು ಚೆನ್ನೈನಲ್ಲಿ ನಡೆಯಲಿರುವ ಐಪಿಎಲ್ 2024 ಫೈನಲ್​ಗೆ ಕೆಕೆಆರ್​ ಪ್ರವೇಶಿಸಿದೆ.

ತಾಯಿಯನ್ನು ತೊರೆದು ಐಪಿಎಲ್ ಆಡಿದ ಗುರ್ಬಾಜ್

ಕೆಕೆಆರ್ ಮತ್ತು ಎಸ್ಆರ್​ಎಚ್​​ ಕ್ವಾಲಿಫೈಯರ್ 1 ರ ನಂತರ ಮಾತನಾಡಿದ , ಗುರ್ಬಾಜ್. ಪಂದ್ಯಾವಳಿಯ ಮಧ್ಯದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯೊಂದಿಗೆ ಇರಲು ಮನೆಗೆ ಮರಳಿದ್ದೆ ಎಂಬುದಾಗಿ ಹೇಳಿದರು. ಸುಮಾರು ಹತ್ತು ದಿನಗಳ ಹಿಂದೆ, ಫಿಲ್ ಸಾಲ್ಟ್ ರಾಷ್ಟ್ರೀಯ ಕರ್ತವ್ಯಗಳಿಗೆ ತೆರಳಿದ ನಂತರ ಕೆಕೆಆರ್ ತಂಡದ ಮ್ಯಾನೇಜ್ಮೆಂಟ್ ಅವರನ್ನು ಸಂಪರ್ಕಿಸಿತ್ತು. ಐಪಿಎಲ್ 2024 ಪ್ಲೇಆಫ್​ಗೆ ಅವರ ಅಗತ್ಯವಿದೆ ಎಂದು ಹೇಳಿತ್ತು. ಭಾವನಾತ್ಮಕ ಗೊಂದಲ ಮತ್ತು ಕಠಿಣ ನಿರ್ಧಾರದ ಹೊರತಾಗಿಯೂ ಅಫ್ಘಾನಿಸ್ತಾನ ಕ್ರಿಕೆಟಿಗ ನಿರ್ಣಾಯಕ ಐಪಿಎಲ್ 2024 ಪ್ಲೇಆಫ್​ಗಳಲ್ಲಿ ಕೆಕೆಆರ್ ತಂಡವನ್ನು ಬೆಂಬಲಿಸಲು ಭಾರತಕ್ಕೆ ಮರಳಲು ನಿರ್ಧರಿಸಿದರು.

ಗುರ್ಬಾಜ್ ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಬದ್ಧತೆಗಳನ್ನು ಸಮತೋಲನಗೊಳಿಸುವ ಸವಾಲನ್ನು ಒಪ್ಪಿಕೊಂಡಿದ್ದಾರೆ. ಆದರೆ ಅವರು ತಮ್ಮ ತಾಯಿಯ ಆಶೀರ್ವಾದವನ್ನು ಪಡೆದಿದ್ದಾರೆ.

ಇದನ್ನೂ ಓದಿ: IPL 2024 : ಕೊಹ್ಲಿಯನ್ನು ಹೊಗಳಿ ಆರ್​​ಸಿಬಿಗೆ ವಿದಾಯ ಹೇಳಿದ ವಿಜಯ್​ ಮಲ್ಯ

ಗುರ್ಬಾಜ್ ತನ್ನ ತಾಯಿ ಇನ್ನೂ ಆಸ್ಪತ್ರೆಯಲ್ಲಿದ್ದಾರೆ ಮತ್ತು ಪ್ರತಿದಿನ ಅವರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ಬಹಿರಂಗಪಡಿಸಿದರು. 22 ವರ್ಷದ ವಿಕೆಟ್ ಕೀಪರ್ ಇದು ನಿಜವಾಗಿಯೂ ಕಠಿಣ ಪರಿಸ್ಥಿತಿ ಎಂದು ಹೇಳಿದ್ದಾರೆ. ಆದರೆ ಕೆಕೆಆರ್ ಬಗ್ಗೆ ತಮ್ಮ ಬದ್ಧತೆ ಮತ್ತು ಜವಾಬ್ದಾರಿಯನ್ನು ಪುನರುಚ್ಚರಿಸಿದರು.

ನನ್ನ ತಾಯಿ ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ: ಗುರ್ಬಾಜ್

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಹಮಾನುಲ್ಲಾ ಗುರ್ಬಾಜ್, “ನನ್ನ ತಾಯಿ ಇನ್ನೂ ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಾನು ಅಲ್ಲಿಗೆ ಹೋಗಿದ್ದೆ (ಅಫ್ಘಾನಿಸ್ತಾನದಲ್ಲಿರುವ ಮನೆಗೆ). ಫಿಲ್ ಸಾಲ್ಟ್ ನಿರ್ಗಮಿಸಿದ ನಂತರ ನನಗೆ ಕೆಕೆಆರ್​ನಿಂದ ಕರೆ ಬಂತು. ಹೀಗಾಗಿ ಬಂದೆ ಎಂದು ಹೇಳಿದ್ದಾರೆ.

ನನ್ನ ತಾಯಿ ಇನ್ನೂ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ನಾನು ಪ್ರತಿದಿನ ಅವರೊಂದಿಗೆ ಮಾತನಾಡುತ್ತೇನೆ. ಆದರೆ ನನ್ನ ಕೆಕೆಆರ್ ಕೂಡ ನನ್ನ ಕುಟುಂಬ ಎಂದು ನನಗೆ ತಿಳಿದಿದೆ, ಅವರಿಗೆ ಇಲ್ಲಿ ನನ್ನ ಅಗತ್ಯವಿತ್ತು. ಆದ್ದರಿಂದ, ನಾನು ಅಫ್ಘಾನಿಸ್ತಾನದಿಂದ ಹಿಂತಿರುಗಿದೆ. ಇದು ಕಠಿಣ ಆದರೆ ನಾನು ನಿರ್ವಹಿಸಬೇಕಾಗಿದೆ ಎಂದು ಹೇಳಿದ್ದಾರೆ

ಒಬ್ಬ ಕ್ರಿಕೆಟಿಗನಾಗಿ, ಏನು ಮಾಡಬೇಕೆಂದು ನಿಮಗೆ ತಿಳಿದಿದೆ. ಲೀಗ್ ಕ್ರಿಕೆಟ್​ ಲೀಗ್​ನಲ್ಲಿ ನಾಲ್ಕು ವಿದೇಶಿ ಆಟಗಾರರು ಮಾತ್ರ ಪ್ಲೇಯಿಂಗ್​ ಇಲೆವೆನ್​ನಲ್ಲಿ ಆಡಬಹುದು. ನಿಮಗೆ ಅವಕಾಶವಿದ್ದರೆ ನೀವು ಪ್ರಯತ್ನಿಸಬೇಕು ಮತ್ತು ಉತ್ತಮವಾಗಿ ಮಾಡಬೇಕು. ನಿಮಗೆ ಅವಕಾಶವಿಲ್ಲದಿದ್ದರೆ, ನೀವು ಚೆನ್ನಾಗಿ ತಯಾರಿ ನಡೆಸಬೇಕು ಮತ್ತು ಸಿದ್ಧರಾಗಿರಬೇಕು. ನಿಮಗೆ ಅವಕಾಶ ಸಿಕ್ಕಾಗಲೆಲ್ಲಾ, ನೀವು ಸಿದ್ಧರಾಗಿರಬೇಕು ಎಂದು ಗುರ್ಬಾಜ್​ ಹೇಳಿದ್ದಾರೆ.

Exit mobile version