ಮುಂಬಯಿ: ಟೀಮ್ ಇಂಡಿಯಾದ ಮಾಜಿ ಆಟಗಾರ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಕಳೆದ ವರ್ಷವೇ ಐಪಿಎಲ್ಗೆ ವಿದಾಯ ಹೇಳಲು ನಿರ್ಧರಿಸಿದ್ದರು. ಆದರೆ ಅಭಿಮಾನಿಗಳ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ಒಂದು ವರ್ಷದ ಮಟ್ಟಿಗೆ ಮುಂದೆ ಹಾಕಿದ್ದರು. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿ ಎಂದೇ ಹೇಳಲಾಗಿತ್ತು. ಆದ್ಯಾಗೂ ಧೋನಿ ತಮ್ಮ ನಿವೃತ್ತಿ ಬಗ್ಗೆ ಯಾವುದೇ ಅಂತಿಮ ನಿರ್ಧಾರ ಪ್ರಕಟಿಸಿಲ್ಲ. ಇದೀಗ ಮುಂದಿನ ಐಪಿಎಲ್ಗಾಗಿ ನಡೆಯುವ ಮೆಗಾ ಹರಾಜಿಗೆ ಬಿಸಿಸಿಐ(BCCI) ಈ ನಿಯಯ ಜಾರಿಗೆ ತಂದರೆ ಧೋನಿ ಅವರು 18ನೇ ಆವೃತ್ತಿ ಐಪಿಎಲ್(IPL 2025) ಆಡುವುದು ಅನುಮಾನ ಎನ್ನಲಾಗಿದೆ.
ಹೌದು, ಡಿಸೆಂಬರ್ನಲ್ಲಿ ನಡೆಯಲಿದೆ ಎನ್ನಲಾಗಿರುವ ಆಟಗಾರರ ಮೆಗಾ ಹರಾಜಿನ ಭಾಗವಾಗಿ ನಾಳೆ(ಜುಲೈ 31, ಬುಧವಾರ) ಮುಂಬೈಯಲ್ಲಿ ಬಿಸಿಸಿಐ ಮತ್ತು ಐಪಿಎಲ್ ಮಂಡಳಿ ಎಲ್ಲ 10 ಫ್ರಾಂಚೈಸಿಗಳ ಜತೆ ಸಭೆ ನಡೆಸಲಿದೆ. ಈ ಸಭೆಯಲ್ಲಿ ಒಂದು ಫ್ರಾಂಚೈಸಿ ಎಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು ಹೀಗೆ ಹಲವು ರೂಪುರೇಷೆಗಳ ಬಗ್ಗೆ ಚರ್ಚೆ ನಡೆಯಲಿದೆ.
ಕ್ರಿಕ್‌ಬಜ್ ವರದಿಯ ಪ್ರಕಾರ, ಬಿಸಿಸಿಐ ಐಪಿಎಲ್ ಫ್ರಾಂಚೈಸಿಗಳಿಗೆ ಗರಿಷ್ಠ 4 ಆಟಗಾರರನ್ನು ಉಳಿಸಿಕೊಳ್ಳುವ ಅವಕಾಶ ಮಾತ್ರ ನೀಡಲಿದೆ ಎನ್ನಲಾಗಿದೆ. ಹೀಗಾದಲ್ಲಿ ಧೋನಿಗೆ ಚೆನ್ನೈ(CSK) ತಂಡದಲ್ಲಿ ಅವಕಾಶ ಸಿಗುವುದು ಅನುಮಾನ ಎನ್ನಲಾಗಿದೆ. ಸಿಎಸ್‌ಕೆ ನಾಯಕ ಋತುರಾಜ್ ಗಾಯಕ್ವಾಡ್, ರವೀಂದ್ರ ಜಡೇಜಾ, ಶ್ರೀಲಂಕಾದ ವೇಗಿ ಮತಿಶಾ ಪತಿರಾಣ ಮತ್ತು ಶಿವಂ ದುಬೆ ಅವರನ್ನು ಉಳಿಸಿಕೊಳ್ಳುವ ಯೋಚನೆಯಲ್ಲಿದೆ ಎನ್ನಲಾಗಿದೆ. ಒಂದೊಮ್ಮೆ 4ಕ್ಕಿಂತ ಅಧಿಕ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವ ಅವಕಾಶ ನೀಡಿದರೆ ಧೋನಿ ಚೆನ್ನೈ ತಂಡದ ಪರ ಇನ್ನೊಂದು ಐಪಿಎಲ್ ಆಡಲಿದ್ದಾರೆ ಎಂದು ಫ್ರಾಂಚೈಸಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಕ್ರಿಕ್‌ಬಜ್ ವರದಿ ಮಾಡಿದೆ.
ಇದನ್ನೂ ಓದಿ IPL 2025: ಆರ್ಸಿಬಿ ಇನ್ಸ್ಟಾಗ್ರಾಮ್ ಖಾತೆ ಅನ್ಫಾಲೋ ಮಾಡಿದ ಮ್ಯಾಕ್ಸ್ವೆಲ್; ಕಾರಣವೇನು?
ಇಂಪ್ಯಾಕ್ಟ್ ನಿಯಮ ಕೈಬಿಡುವ ಸಾಧ್ಯತೆ!
ರೋಹಿತ್ ಶರ್ಮ, ವಿರಾಟ್ ಕೊಹ್ಲಿ ಸೇರಿ ಹಲವು ಅನುಭವಿ ಆಟಗಾರರಿಂದ ಇಂಪ್ಯಾಕ್ಟ್ ನಿಯಮದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಬಿಸಿಸಿಐ ಕೂಡ ಮುಂದಿನ ಬಾರಿ ಈ ನಿಯಮದ ಬಗ್ಗೆ ಚಿಂತಿಸಲಾಗುವುದು ಎಂದು ಹೇಳಿತ್ತು. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಇಂಪ್ಯಾಕ್ಟ್ ನಿಯಮ ಕೈ ಬಿಟ್ಟರೂ ಅಚ್ಚರಿಯಿಲ್ಲ. ಧೋನಿ ಅವರು ಇಂಪ್ಯಾಕ್ಟ್ ನಿಯಮ ಇಲ್ಲವಾದರೆ ಮುಂದಿನ ಆವೃತ್ತಿ ಆಡುವುದು ಅನುಮಾನ ಎಂದು ಫ್ರಾಂಚೈಸಿ ಅಧಿಕಾರಿಯೊಬ್ಬರು ಹೇಳಿದ್ದರು. ಒಂದೊಮ್ಮೆ ಈ ನಿಯಮ ಕೈಬಿಟ್ಟರೆ ಆಗ ಧೋನಿ ಆಡುತ್ತಾರಾ ಎನ್ನುವ ಪ್ರಶ್ನೆಯೊಂದು ಮೂಡುವುದು ಸಹಜ.
ಐಪಿಎಲ್ ಮೆಗಾ ಹರಾಜನ್ನು ಇನ್ನು ಮುಂದೆ ಐದು ವರ್ಷಗಳಿಗೊಮ್ಮೆ ನಡೆಸುವಂತೆಯೂ ಕೆಲವು ಫ್ರಾಂಚೈಸಿಗಳು ಮನವಿ ಮಾಡಿದೆ ಎನ್ನಲಾಗಿದೆ. ಈ ಹಿಂದೆ ಪ್ರತಿ ಮೂರು ವರ್ಷಗಳಿಗೊಮ್ಮೆ ಮೆಗಾ ಹರಾಜು ಆಯೋಜಿಸಲಾಗುತ್ತಿತ್ತು. ಒಂದೊಮ್ಮೆ ಈ ಬೇಡಿಕೆಗೆ ಬಿಸಿಸಿಐ ಸಮ್ಮತಿಸಿದರೆ. ಮುಂದಿನ ಮೆಗಾ ಹರಾಜು 2029ರಲ್ಲಿ ನಡೆಯಲಿದೆ. ಇದರ ನಡುವೆ ಮಿನಿ ಹರಾಜು ಮಾತ್ರ ನಡೆಯಲಿದೆ.