ಬೆಂಗಳೂರು: ಆರ್‌ಸಿಬಿ (RCB) ಅಭಿಮಾನಿಗಳು ಗೆಲುವಿನ ನಿಟ್ಟುಸಿರು ಬಿಟ್ಟಿದ್ದಾರೆ. ಶನಿವಾರ ನಡೆದ ಐಪಿಎಲ್ 2024 (IPL 2024)ರ ಹೈವೋಲ್ಟೇಜ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವನ್ನು ಮಣಿಸಿ ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸಿದೆ. ಅಭಿಮಾನಿಗಳು ಈ ಪಂದ್ಯವನ್ನು ಅಕ್ಷರಶಃ ಫೈನಲ್ ಎಂದೇ ಪರಿಗಣಿಸಿದ್ದರು. ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕೊನೆಗೂ ಹಾಲಿ ಚಾಂಪಿಯನ್ ಚೆನ್ನೈಯನ್ನು 27 ರನ್‌ಗಳ ಅಂತರದಿಂದ ಸೋಲಿಸುವುದರೊಂದಿಗೆ ಆರ್‌ಸಿಬಿ ಅಭಿಮಾನಿಗಳ ಜೈಕಾರ ಮುಗಿಲು ಮುಟ್ಟಿತು. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಭ್ರಮಾಚರಣೆ ಕಂಡು ಬಂತು.
ಪಂದ್ಯ ಮುಕ್ತಾಯವಾದಾಗ ತಡರಾತ್ರಿಯಾಗಿದ್ದರೂ ಅಭಿಮಾನಿಗಳ ಸಡಗರಕ್ಕೆ ಕೊರತೆ ಇರಲಿಲ್ಲ. ಪುಟ್ಟ ಮಕ್ಕಳು ಸೇರಿದಂತೆ ಆರ್‌ಸಿಬಿ ಫ್ಯಾನ್ಸ್ ರಸ್ತೆಯಲ್ಲೇ ಕುಣಿದು ಕುಪ್ಪಳಿಸಿದರು. ಮಕ್ಕಳಂತೂ ಈ ಸಲ ಕಪ್ ನಮ್ದೆ ಎನ್ನುವ ಘೋಷಣೆ ಕೂಗುತ್ತಿರುವುದು ಕಂಡು ಬಂತು. ಚಿನ್ನಸ್ವಾಮಿ ಕ್ರೀಡಾಂಗಣದ ಎದುರಿನ ರಸ್ತೆ ಬ್ಲಾಕ್ ಮಾಡಿ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದರು. ಇದು ನಿಜವಾದ ಹೊಸ ಅಧ್ಯಾಯ ಎನ್ನುವ ಮಾತು ಎಲ್ಲೆಡೆ ಕೇಳಿ ಬಂದಿದೆ.
ಸೋಷಿಯಲ್ ಮೀಡಿಯಾದಲ್ಲಿ ಆರ್‌ಸಿಬಿಯದ್ದೇ ಹವಾ
ಇನ್ನು ಸೋಷಿಯಲ್ ಮೀಡಿಯಾದಲ್ಲಂತೂ ಆರ್‌ಸಿಬಿ ಹವಾ ಕಂಡು ಬಂದಿದೆ. ಸತತ ಸೋಲಿನ ಬಳಿಕ ಗ್ರೇಟ್ ಕಂಬ್ಯಾಕ್ ಎಂದೆಲ್ಲ ಫ್ಯಾನ್ಸ್ ಹೊಗಳುತ್ತಿದ್ದಾರೆ. ಮೊದಲ 8 ಪಂದ್ಯಗಳ ಪೈಕಿ 1ರಲ್ಲಿ ಮಾತ್ರ ಗೆಲುವು ಒಲಿದಿತ್ತು. ಆದರೆ ಬಳಿಕದ 6 ಪಂದ್ಯಗಳ ಪೈಕಿ 6ರಲ್ಲಿಯೂ ಗೆಲುವು ಸಾಧಿಸಿದ್ದೇವೆ. ಇದು ನಿಜವಾದ ಹೊಸ ಅಧ್ಯಾಯ ಎಂದು ಅಭಿಮಾನಿಗಳು ಹೇಳಿಕೊಂಡಿದ್ದಾರೆ. ನಿಜವಾಗಿಯೂ ಒಂದು ಥ್ರಿಲ್ಲರ್ ಸಿನಿಮಾ ನೋಡಿದ ಅನುಭವವಾಯಿತು ಎಂದು ಪಂದ್ಯ ಮುಗಿದ ಬಳಿಕ ರೋಮಾಂಚಿತರಾದ ಆರ್‌ಸಿಬಿಯ ಕಟ್ಟಾ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ. 6 ಸತತ ಗೆಲುವಿನ ಮೂಲಕ ಪ್ಲೇ ಆಫ್ ಪ್ರವೇಶಿಸುವುದು ಸುಲಭದ ಮಾತಲ್ಲ. ಅತ್ಯುತ್ತಮ ಪ್ರದರ್ಶನ ಎಂದು ಹಲವರು ಅಭಿಪ್ರಾಯ ಪಟ್ಟಿದ್ದಾರೆ.
ಮತ್ತೆ ಸದ್ದು ಮಾಡುತ್ತಿದೆ ಈ ಸಲ ಕಪ್ ನಮ್ದೆ
ಬ್ಯಾಕ್ ಟು ಬ್ಯಾಕ್ ಗೆಲುವಿನ ಮೂಲಕ ರಾಯಲ್ ಆಗಿಯೇ ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜತೆಗೆ ಈ ಸಲ ಜಪ್ ನಮ್ದೆ ಘೋಷ ವಾಕ್ಯ ಮತ್ತೆ ಮೊಳಗತೊಡಗಿದೆ. ಈ ಹಿಂದೆ ಆರ್‌ಸಿಬಿ ಮಹಿಳಾ ತಂಡ ಕಪ್ ಜಯಿಸಿತ್ತು. ಇದೀಗ ಪುರುಷರ ತಂಡದ ಸರದಿ ಎಂಬ ಲೆಕ್ಕಾಚಾರವೂ ಶುರುವಾಗಿದೆ.
ಇದನ್ನೂ ಓದಿ: RCB vs CSK: ಇದು ಆರ್‌ಸಿಬಿಯ ಹೊಸ ಅಧ್ಯಾಯ; ಹಾಲಿ ಚಾಂಪಿಯನ್ ಚೆನ್ನೈ ಮಣಿಸಿ ಪ್ಲೇ ಆಫ್ಗೆ ಲಗ್ಗೆ
ಹೊರ ಬಿದ್ದ ಚೆನ್ನೈ
ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್‌ಸಿಬಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸ್ ಮೊದಲ ವಿಕೆಟ್ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್ ಎನಿಸಿಕೊಂಡಿತು. ಒಂದೊಮ್ಮೆ ಚೆನ್ನೈ 201 ರನ್ ಬಾರಿಸುತ್ತಿದ್ದರೂ ಆರ್‌ಸಿಬಿ ಪ್ಲೇ ಆಫ್ನಿಂದ ಹೊರ ಬೀಳುತ್ತಿತ್ತು.