Site icon Vistara News

IPL 2024: ರಾಜಸ್ಥಾನ ವಿರುದ್ಧ ಗೆದ್ದು ಬೀಗಿದ ಚೆನ್ನೈ; ಪ್ಲೇಆಫ್‌ ಆಸೆ ಜೀವಂತ, ಆರ್‌ಸಿಬಿಗೆ ಹೆಚ್ಚಿದ ಒತ್ತಡ

IPL 2024

IPL 2024: Chennai Super Kings Wins By 5 Wickets Against Rajasthan Royals

ಚೆನ್ನೈ: ಪ್ರಸಕ್ತ ಐಪಿಎಲ್‌ ಟೂರ್ನಿಯ (IPL 2024) ಮಹತ್ವದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್‌ (Rajasthan Royals) ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ಅಂತರಿಂದ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಪ್ಲೇಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಸಿಎಸ್‌ಕೆ ಗೆಲುವಿನೊಂದಿಗೆ ಆರ್‌ಸಿಬಿ (RCB) ಮತ್ತಷ್ಟು ಒತ್ತಡಕ್ಕೆ ಸಿಲುಕಿದ್ದು, ಭಾನುವಾರವೇ (ಮೇ 12) ನಡೆಯಲಿರುವ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಗೆಲ್ಲುವ ಜತೆಗೆ ಕೊನೆಯ ಪಂದ್ಯವನ್ನು ಸಿಎಸ್‌ಕೆ ವಿರುದ್ಧ ಗೆಲ್ಲಲೇಬೇಕಿದೆ. ಇದರೊಂದಿಗೆ ಬೇರೆ ತಂಡಗಳ ಸೋಲು-ಗೆಲುವು, ರನ್‌ರೇಟ್‌ ಲೆಕ್ಕಾಚಾರವೂ ನಿರ್ಣಾಯಕವಾಗಲಿದೆ.

ರಾಜಸ್ಥಾನ ಸಾಧಾರಣ ಮೊತ್ತ

ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟವಾಡಿರುವ ರಾಜಸ್ಥಾನ ರಾಯಲ್ಸ್‌ ತಂಡವು ಸಿಎಸ್‌ಕೆ ವಿರುದ್ಧ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡು ಸಾಧಾರಣ ಮೊತ್ತ ಪೇರಿಸಿತು. ನಿಗದಿತ 20 ಓವರ್‌ಗಳಲ್ಲಿ ಆರ್‌ಆರ್‌ 5 ವಿಕೆಟ್‌ ಕಳೆದುಕೊಂಡು ಕೇವಲ 141 ರನ್‌ ಗಳಿಸಲಷ್ಟೇ ಶಕ್ತವಾಯಿತು. ರಿಯಾನ್‌ ಪರಾಗ್‌ 47 ಹಾಗೂ ಧ್ರುವ್‌ ಜುರೆಲ್‌ 28 ಹೊರತುಪಡಿಸಿ ಯಾವೊಬ್ಬ ಆಟಗಾರನೂ ಸ್ಫೋಟಕ ಬ್ಯಾಟಿಂಗ್‌ ನಡೆಸದ ಕಾರಣ ಸಾಧಾರಣ ಮೊತ್ತ ದಾಖಲಾಯಿತು. ಈ ಗುರಿಯನ್ನು ಬೆನ್ನತ್ತಿದ ಸಿಎಸ್‌ಕೆ 16 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು.

ಸಿಎಸ್‌ಕೆ ಪರ ಉತ್ತಮವಾಗಿ ಆಡಲು ರಚಿನ್‌ ರವೀಂದ್ರ ಮತ್ತೆ ವಿಫಲರಾದರು. ರಚಿನ್‌ ರವೀಂದ್ರ 27 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, ಡೆರಿಲ್ ಮಿಚೆಲ್‌ 22, ಮೋಯಿನ್‌ ಅಲಿ 10, ಶಿವಂ ದುಬೆ 18 ರನ್‌ ಗಳಿಸಿದರು. ನಾಯಕನ ಆಟವಾಡಿದ ಋತುರಾಜ್‌ ಗಾಯಕ್ವಾಡ್‌ 42 ರನ್‌ ಬಾರಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಇದರೊಂದಿಗೆ ಆಡಿದ 13 ಪಂದ್ಯಗಳಲ್ಲಿ 7 ಪಂದ್ಯ ಗೆದ್ದು 14 ಅಂಕ ಗಳಿಸಿದ ಸಿಎಸ್‌ಕೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರುವ ಜತೆಗೆ ಪ್ಲೇಆಫ್‌ ಕನಸಿಗೆ ಹತ್ತಿರವಾಯಿತು. ಮೇ 18ರಂದು ಸಿಎಸ್‌ಕೆ ಆರ್‌ಸಿಬಿ ವಿರುದ್ಧ ಆಡಲಿದ್ದು, ಗೆಲುವು ಸಾಧಿಸಿದರೆ ಪ್ಲೇಆಫ್‌ಗೆ ಹೋಗುವ ಸಾಧ್ಯತೆ ಹೆಚ್ಚಿದೆ. ಆರ್‌ಸಿಬಿ ವಿರುದ್ಧ ಸೋಲನುಭವಿಸಿದರೆ ರನ್‌ರೇಟ್‌ ಲೆಕ್ಕಾಚಾರ ಆಧಾರವಾಗಲಿದೆ.

ಸಂಕ್ಷಿಪ್ತ ಸ್ಕೋರ್‌

ರಾಜಸ್ಥಾನ ರಾಯಲ್ಸ್‌ 20 ಓವರ್‌ಗಳಲ್ಲಿ 141/5
(ರಿಯಾನ್‌ ಪರಾಗ್‌ 47, ಧ್ರುವ್‌ ಜುರೆಲ್‌ 28, ಸಮರ್‌ಜೀತ್‌ ಸಿಂಗ್‌ 26ಕ್ಕೆ 3)

ಸಿಎಸ್‌ಕೆ 18.2 ಓವರ್‌ಗಳಲ್ಲಿ 145/5
(ಋತುರಾಜ್‌ ಗಾಯಕ್ವಾಡ್‌ 42, ರಚಿನ್‌ ರವೀಂದ್ರ 27, ಆರ್.ಅಶ್ವಿನ್‌ 35/2)

ಇದನ್ನೂ ಓದಿ: IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

Exit mobile version