ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಐಪಿಎಲ್ 2024ರ 68ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ 27 ರನ್‌ಗಳಿಂದ ಜಯಗಳಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) 4ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ಈಗಾಗಲೇ ಕೋಲ್ಕತ್ತಾ ನೈಟ್ ರೈಡರ್ಸ್ (KKR), ರಾಜಸ್ಥಾನ್ ರಾಯಲ್ಸ್ (RR) ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ಪ್ಲೇ ಆಫ್‌ನಲ್ಲಿ ಸ್ಥಾನ ಪಡೆದಿವೆ. ಹಾಗಾದರೆ ಪ್ಲೇ ಆಫ್ ಯಾವಾಗ ಎಲ್ಲಿ ನಡೆಯಲಿದೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಪ್ಲೇ ಆಫ್ ವೇಳಾಪಟ್ಟಿ
ದಿನಾಂಕ | ಪ್ಲೇ ಆಫ್ | ತಂಡ | ಸಮಯ (ರಾತ್ರಿ) | ಸ್ಥಳ |
ಮೇ 21 | ಕ್ವಾಲಿಫೈರ್ 1 | ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ / ಸನ್ರೈಸರ್ಸ್ ಹೈದರಾಬಾದ್ | 7.30 | ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ |
ಮೇ 22 | ಎಲಿಮಿನೇಟರ್ | ರಾಜಸ್ಥಾನ್ ರಾಯಲ್ಸ್ / ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು | 7.30 | ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್ |
ಮೇ 24 | ಕ್ವಾಲಿಫೈರ್ 2 | ಎಲಿಮಿನೇಟರ್‌ನ ವಿಜೇತರು ಮತ್ತು ಕ್ವಾಲಿಫೈರ್ 1ರ ಸೋತ ತಂಡ | 7.30 | ಎಂ.ಎ.ಚಿದಂಬರಂ ಸ್ಟೇಡಿಯಂ, ಚೆನ್ನೈ |
ಮೇ 26 | ಫೈನಲ್ | ಕ್ವಾಲಿಫೈರ್ 1ರ ವಿಜೇತರು ಮತ್ತು ಕ್ವಾಲಿಫೈರ್ 2ರ ವಿಜೇತರು | 7.30 | ಎಂ.ಎ.ಚಿದಂಬರಂ ಸ್ಟೇಡಿಯಂ, ಚೆನ್ನೈ |
ಕ್ವಾಲಿಫೈರ್ ಪಂದ್ಯಗಳು
ಕ್ವಾಲಿಫೈರ್ 1ರಲ್ಲಿ ಅಗ್ರ ಎರಡು ತಂಡಗಳ ನಡುವೆ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮೇ 21ರ ರಾತ್ರಿ 7.30ಕ್ಕೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಲಿದೆ. ಮೇ 22ರ ರಾತ್ರಿ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುವ ಎಲಿಮಿನೇಟರ್ ಪಂದ್ಯದಲ್ಲಿ ಮೂರನೇ ಮತ್ತು ನಾಲ್ಕನೇ ತಂಡದ ನಡುವೆ ಜಿದ್ದಾಜಿದ್ದು ನಡೆಯಲಿದೆ. ಇದರಲ್ಲಿ ಗೆದ್ದವರು ಮೇ 24ರಂದು ಚೆನ್ನೈ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಕ್ವಾಲಿಫೈರ್ 2ರ ಪಂದ್ಯದಲ್ಲಿ ಕ್ವಾಲಿಫೈರ್ 1ರ ಸೋತ ತಂಡದೊಂದಿಗೆ ಸೆಣಸಾಡಲಿದ್ದಾರೆ. ಈ ಪಂದ್ಯ ರಾತ್ರಿ 7.30ಕ್ಕೆ ನಡೆಯಲಿದೆ. ಇದರಲ್ಲಿ ಗೆದ್ದವರು ಫೈನಲ್‌ನಲ್ಲಿ ಕ್ವಾಲಿಫೈರ್ 1ರ ವಿಜೇತರೊಂದಿಗೆ ಕಪ್‌ಗಾಗಿ ಹೋರಾಡಲಿದ್ದಾರೆ. ಫೈನಲ್ ಪಂದ್ಯ ಚೆನ್ನೈಯ ಎಂ.ಎ.ಚಿದಂಬರಂ ಸ್ಟೇಡಿಯಂನಲ್ಲಿ ಮೇ 26ರ ರಾತ್ರಿ 7.30ಕ್ಕೆ ಆಯೋಜಿಸಲಾಗಿದೆ.
ಲೀಗ್ ಹಂತದಲ್ಲಿ ಇನ್ನೂ ಕೆಲವು ಪಂದ್ಯ ಬಾಕಿ ಇರುವುದರಿಂದ ಅಂಕಪಟ್ಟಿ ಬದಲಾಗುವ ಸಾಧ್ಯತೆ ಇದೆ. ಅಗ್ರ ಮೂರು ಸ್ಥಾನಗಳಲ್ಲಿ ಇರುವ ಕೆಕೆಆರ್, ಆರ್‌ಆರ್ ಮತ್ತು ಎಸ್‌ಆರ್‌ಎಚ್ ತಂಡಗಳಿಗೆ ಇನ್ನು ತಲಾ 1 ಪಂದ್ಯಗಳಿವೆ. ಎಸ್‌ಆರ್‌ಎಚ್-ಪಂಜಾಬ್, ರಾಜಸ್ಥಾನ-ಕೋಲ್ಕತ್ತಾ ಪರಸ್ಪರ ಸೆಣಸಾಡಲಿರುವುದರಿಂದ ಪ್ಲೇ ಆಫ್‌ಗೆ ಅರ್ಹತೆ ಪಡೆದ ತಂಡಗಳ ಸ್ಥಾನಗಳಲ್ಲಿ ಏರುಪೇರಾಗಲಿದೆ. ಅದಾಗ್ಯೂ ಸೋತರೂ ಕೋಲ್ಕತ್ತಾ ಅಗ್ರ ಸ್ಥಾನದಲ್ಲೇ ಮುಂದುವರಿಯಲಿದ್ದು, ಆರ್‌ಸಿಬಿಗೆ ನಾಲ್ಕನೇ ಸ್ಥಾನ ಫಿಕ್ಸ್. ಎರಡು ಮತ್ತು ಮೂರನೇ ಸ್ಥಾನಗಳ ಸ್ಪಷ್ಟ ಚಿತ್ರಣ ಪಂದ್ಯದ ಬಳಿಕವಷ್ಟೇ ದೊರೆಯಲಿದೆ.
ಇದನ್ನೂ ಓದಿ: IPL 2024 : ಗೆಲುವೊಂದೇ ಗುರಿ; ಅಂಪೈರ್ಗಳ ಜತೆ ಮತ್ತೆ ವಾಗ್ವಾದ ನಡೆಸಿದ ಕೊಹ್ಲಿ
ಸಿಎಸ್‌ಕೆ ಸೋಲಿಸಿ ಪ್ಲೇ ಆಫ್‌ಗೆ ಏರಿದ ಬೆಂಗಳೂರು
ಬೆಂಗಳೂರಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ನಡೆದ ಮಳೆ ಪೀಡಿತ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್‌ಸಿಬಿ ವಿರಾಟ್ ಕೊಹ್ಲಿ ಮತ್ತು ಫಾಫ್ ಡುಪ್ಲೆಸ್ ಮೊದಲ ವಿಕೆಟ್ಗೆ ನಿರ್ಮಿಸಿದ ಭದ್ರ ಅಡಿಪಾಯದ ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 218 ರನ್ ಬಾರಿಸಿತು. ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಚೆನ್ನೈ ಹಲವು ಏರಿಳಿತ ಕಂಡು ಕೊನೆಗೆ ತನ್ನ ಪಾಲಿನ ಆಟದಲ್ಲಿ 7 ವಿಕೆಟ್ಗೆ 191 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲಿಗೆ ಶರಣಾಯಿತು. ಜತೆಗೆ ಟೂರ್ನಿಯಿಂದಲೂ ಹೊರಬಿದ್ದು ಮಾಜಿ ಚಾಂಪಿಯನ್ ಎನಿಸಿಕೊಂಡಿತು. ಒಂದೊಮ್ಮೆ ಚೆನ್ನೈ 201 ರನ್ ಬಾರಿಸುತ್ತಿದ್ದರೂ ಆರ್‌ಸಿಬಿ ಪ್ಲೇ ಆಫ್ನಿಂದ ಹೊರ ಬೀಳುತ್ತಿತ್ತು.