ಧರ್ಮಶಾಲಾ: ಗುರುವಾರ ರಾತ್ರಿ ಹಿಮಾಚಲ ಪ್ರದೇಶ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ನಡೆದ ಐಪಿಎಲ್ ಪಂದ್ಯದಲ್ಲಿ (IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡ 60 ರನ್ನುಗಳಿಂದ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಸೋಲಿಸಿ ತನ್ನ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಕೊಂಡಿದೆ. ಆ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿ ಮುಂದುವರಿದಿದೆ. ಇತ್ತ ಎಂಟು ಅಂಕಗಳನ್ನು ಕಲೆ ಹಾಕಿರುವ ಪಂಜಾಬ್ ಈ ಸೋಲಿನೊಂದಿಗೆ ಪ್ಲೇ ಆಫ್ ರೇಸ್‌ನಿಂದ ಸಂಪೂರ್ಣವಾಗಿ ಹೊರಗುಳಿದಿದೆ.
ಸದ್ಯ ಕೋಲ್ಕತ್ತಾ ನೂಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಲಾ 16 ಅಂಕಗಳನ್ನು ಕಲೆ ಹಾಕಿ ಮೊದಲೆರಡು ಸ್ಥಾನಗಳಲ್ಲಿವೆ. ಇವೆರಡು ಪ್ಲೇ ಆಫ್ ಪ್ರವೇಶಿಸುವುದು ಬಹುತೇಕ ಖಚಿತ. ಇತ್ತ 14 ಅಂಕ ಕಲೆ ಹಾಕಿರುವ ಹೈದರಾಬಾದ್ಗೆ ಇನ್ನೊಂದು ಪಂದ್ಯ ಗೆದ್ದರೆ ಸಾಕು. ಪ್ಲೇ ಆಫ್ ಪ್ರವೇಶಿಸುವ ನಾಲ್ಕನೇ ತಂಡಕ್ಕಾಗಿ ತೀವ್ರ ಪೈಪೋಟಿ ಕಂಡು ಬರುವ ನಿರೀಕ್ಷೆ ಇದೆ. ಸದ್ಯ ಐದನೇ ಗೆಲುವು ಸಾಧಿಸಿರುವ ಆರ್‌ಸಿಬಿ, ಡೆಲ್ಲಿ, ಚೆನ್ನೈ ಮತ್ತು ಲಕ್ನೋ ನಡುವೆ ತೀವ್ರ ಸ್ಪರ್ಧೆ ನಡೆಯುವ ಸಾಧ್ಯತೆ ನಿಚ್ಚಳವಾಗಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಕೆಕೆಆರ್ | 11 | 8 | 3 | 16 (+1.453) |
ರಾಜಸ್ಥಾನ್ ರಾಯಲ್ಸ್ | 11 | 8 | 3 | 16 (+0.476) |
ಹೈದರಾಬಾದ್ | 12 | 7 | 5 | 14 (+0.406) |
ಚೆನ್ನೈ | 11 | 6 | 5 | 12 (+0.700) |
ಡೆಲ್ಲಿ | 12 | 6 | 6 | 12 (-0.316) |
ಲಕ್ನೋ | 12 | 6 | 6 | 12 (-0.769) |
ಆರ್‌ಸಿಬಿ | 12 | 5 | 7 | 10 (+0.217) |
ಮುಂಬೈ | 12 | 4 | 8 | 8 (-0.212) |
ಪಂಜಾಬ್ | 12 | 4 | 8 | 8 (-0.423) |
ಗುಜರಾತ್ | 11 | 4 | 7 | 8 (-1.320) |
ಆರ್‌ಸಿಬಿಗೆ ಭರ್ಜರಿ ಜಯ
ಆರಂಭದಲ್ಲಿ ಸತತ ಸೋಲಿಗೆ ತುತ್ತಾಗಿದ್ದ ಆರ್‌ಸಿಬಿ ಭರ್ಜರಿ ಕಂಬ್ಯಾಕ್ ಮಾಡಿದೆ. ಸತತ ಗೆಲುವಿನ ಮೂಲಕ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿಸಿದೆ. ಗುರುವಾರದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ಗೆ 241 ರನ್ ಬಾರಿಸಿತು. ವಿರಾಟ್ ಕೊಹ್ಲಿ ಮತ್ತೊಮ್ಮೆ ಬ್ಯಾಟಿಂಗ್‌ನಲ್ಲಿ ಮಿಂಚಿದರು. ಶತಕದ ಅಂಚಿನಲ್ಲಿ ಎಡವಿದ ಅವರು 47 ಬಾಲ್‌ಗೆ 92 ರನ್ ಕಲೆ ಹಾಕಿದರು. ಇದು 6 ಭರ್ಜರಿ ಸಿಕ್ಸರ್ ಮತ್ತು 7 ಫೋರ್ ಅನ್ನು ಒಳಗೊಂಡಿತ್ತು. ಇವರಿಗೆ ಉತ್ತಮ ಸಾಥ್ ನೀಡಿದ ರಜತ್ ಪಾಟಿದಾರ್ ಕೇವಲ 23 ಎಸೆತಗಳಲ್ಲಿ 55 ರನ್ ಚಚ್ಚಿದರು (6 ಸಿಕ್ಸ್, 3 ಫೋರ್).
ಇನ್ನು ಬೌಲಿಂಗ್‌ನಲ್ಲಿಯೂ ಉತ್ತಮ ದಾಳಿ ಸಂಘಟಿಸಿದ ಬೆಂಗಳೂರು ತಂಡ ಪಂಜಾಬ್ ತಂಡವನ್ನು 17 ಓವರ್‌ಗೆ 181 ರನ್‌ಗೆ ಆಲೌಟ್ ಮಾಡಿತು. ಆರ್‌ಸಿಬಿ ಪರ ಮೊಹಮ್ಮಸ್ ಸಿರಾಜ್ 3 ವಿಕೆಟ್, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.
ಇದನ್ನೂ ಓದಿ: IPL 2024 : ಲಕ್ನೊ ತಂಡದ ನಾಯಕನ ಸ್ಥಾನದಿಂದ ರಾಹುಲ್ ಔಟ್?