Site icon Vistara News

IPL 2024 Points Table: ಮುಂಬೈ ವಿರುದ್ಧ ಹೈದರಾಬಾದ್‌ ಗೆದ್ದ ಬಳಿಕ ಅಂಕಪಟ್ಟಿ ಹೇಗಿದೆ?

SRH

IPL Points Table 2024 After MI And SRH Match

ಹೈದರಾಬಾದ್:‌ ರನ್‌ಗಳ ಸುರಿಮಳೆಯೇ ಸುರಿದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ತಂಡದ ವಿರುದ್ಧ ಸನ್‌ ರೈಸರ್ಸ್‌ ಹೈದರಾಬಾದ್‌ (Sunrisers Hyderabad) ತಂಡವು 31 ರನ್‌ಗಳ ರೋಚಕ ಗೆಲುವು ಸಾಧಿಸುವ ಮೂಲಕ 2024ರ ಐಪಿಎಲ್‌ ಟೂರ್ನಿಯ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಸತತ ಎರಡನೇ ಸೋಲು ಕಂಡ ಮುಂಬೈ ಇಂಡಿಯನ್ಸ್‌ ತಂಡವು 9ನೇ ಸ್ಥಾನಕ್ಕೆ ಕುಸಿದಿದೆ. ಮುಂಬೈ ಹಾಗೂ ಹೈದರಾಬಾದ್‌ ಪಂದ್ಯದ ಬಳಿಕ ಅಂಕಪಟ್ಟಿ (IPL 2024 Points Table) ಹೇಗಿದೆ? ಯಾರು ಯಾವ ಸ್ಥಾನದಲ್ಲಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ.

ತಂಡಪಂದ್ಯಗೆಲುವುಸೋಲುಅಂಕ
​ ಚೆನ್ನೈ ಸೂಪರ್​ ಕಿಂಗ್ಸ್​2204 (+1.979)
ರಾಜಸ್ಥಾನ್​ ರಾಯಲ್ಸ್1102 (+1.000)
ಸನ್​ರೈಸರ್ಸ್​ ಹೈದರಾಬಾದ್​2112 (+0.675)
ಕೋಲ್ಕೊತಾ ನೈಟ್‌ ರೈಡರ್ಸ್1102(+200)
ಪಂಜಾಬ್‌ ಕಿಂಗ್ಸ್2112‌ (+0.025)
ಆರ್‌ಸಿಬಿ2112 (-0.180)
ಗುಜರಾತ್‌ ಟೈಟಾನ್ಸ್2112 (-1.425)
ಡೆಲ್ಲಿ ಕ್ಯಾಪಿಟಲ್ಸ್1010 (-0.925)
ಮುಂಬೈ ಇಂಡಿಯನ್ಸ್2020 (-1000)
ಲಕ್ನೋ ಸೂಪರ್​ ಜೈಂಟ್ಸ್​1010 (-1.000)

ಹೈದರಾಬಾದ್‌ನ ರಾಜೀವ್​ ಗಾಂಧಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಆತಿಥೇಯ ಸನ್​ರೈಸರ್ಸ್ ಹೈದರಾಬಾದ್​ ವಿಸ್ಫೋಟಕ ಬ್ಯಾಟಿಂಗ್​ ಮೂಲಕ ನಿಗದಿತ 20 ಓವರ್​ಗಳಲ್ಲಿ ಕೇವಲ 3 ವಿಕೆಟ್​ಗೆ 277 ರನ್​ ಬಾರಿಸಿತು. ಈ ದೊಡ್ಡ ಮೊತ್ತವನ್ನು ಅಷ್ಟೇ ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಮುಂಬೈ ಅಂತಿಮವಾಗಿ 5 ವಿಕೆಟ್​ಗೆ 246 ರನ್​ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ 523 ರನ್​ ದಾಖಲಾಯಿತು. ಇದು ಐಪಿಎಲ್​ನಲ್ಲಿ 2 ತಂಡಗಳು ಸೇರಿ ಬಾರಿಸಿದ ಗರಿಷ್ಠ ಮೊತ್ತದ ದಾಖಲೆ. ಈ ಹಿಂದೆ 2010ರಲ್ಲಿ ಚೆನ್ನೈ ಮತ್ತು ಕೆಕೆಆರ್​ ನಡುವಣ ಪಂದ್ಯದಲ್ಲಿ 469 ರನ್​ ಹರಿದು ಬಂದಿತ್ತು.

ದೊಡ್ಡ ಮೊತ್ತವನ್ನು ಬೆನ್ನಟ್ಟಿದ ಮುಂಬೈಗೆ ಆರಂಭಿಕರಾದ ಇಶಾನ್​ ಕಿಶನ್​ ಮತ್ತು ಮುಂಬೈ ಪರ 200ನೇ ಪಂದ್ಯದಲ್ಲಿ ಆಡಲಿಳಿದ ಮಾಜಿ ನಾಯಕ ರೋಹಿತ್​ ಶರ್ಮ ಆಕ್ರಮಣಕಾರಿ ಬ್ಯಾಟಿಂಗ್​ ಮೂಲಕ ಉತ್ತಮ ಅಡಿಪಾಯ ನಿರ್ಮಿಸಿದರು. ಇವರಿಬ್ಬರ ಬ್ಯಾಟಿಂಗ್​ ಆರ್ಭಟದಿಂದ ತಂಡ ಕೇವಲ ಮೂರು ಓವರ್​ಗೆ ವಿಕೆಟ್​ ನಷ್ಟವಿಲ್ಲದೆ 50 ರನ್​ ಕಲೆಹಾಕಿತು.

ಆದರೆ, ಉಭಯ ಆಟಗಾರರ ಈ ಬ್ಯಾಟಿಂಗ್​ ಜೋಶ್​ ಹೆಚ್ಚು ಹೊತ್ತು ಸಾಗಲಿಲ್ಲ. ಅಬ್ದುಲ್​ ಸಮದ್​ ಅವರಿಂದ ಒಂದು ಜೀವದಾನ ಪಡೆದರೂ ಕೂಡ ರೋಹಿತ್​ ಈ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಎಡವಿದರು. 26 ರನ್​ ಗಳಿಸಿ ನಾಯಕ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಇಶಾನ್​ ಕಿಶನ್​ 13 ಎಸೆತಗಳಿಂದ 34 (4 ಸಿಕ್ಸರ್​, 3 ಬೌಂಡರಿ) ರನ್​ ಬಾರಿಸಿದರು. ಬಳಿಕ ಬಂದ ನಮನ್ ಧೀರ್ ಮತ್ತು ತಿಲಕ್​ ವರ್ಮ ಕೂಡ ಬಿರುಸಿನ ಆಟವಾಡಿ ತಂಡದ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಪಟ್ಟರು. ಮುಂಬೈ 10 ಓವರ್​ಗೆ 140 ರನ್​ ಗಡಿ ದಾಡಿದ ವೇಳೆ ಈ ಬೃಹತ್​ ಮೊತ್ತವನ್ನು ಕೂಡ ಚೇಸಿಂಗ್​ ಮಾಡಿ ಗೆಲ್ಲುವ ಸೂಚನೆ ನೀಡಿತು. ಆದರೆ ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ಬೌಲರ್​ಗಳು ಲಯಬದ್ಧ ಬೌಲಿಂಗ್​ ನಡೆಸಿ ಪಂದ್ಯವನ್ನು ಹಿಡಿತಕ್ಕೆ ತಂದರು.

ಮೊದಲು ಬ್ಯಾಟಿಂಗ್​ಗೆ ಇಳಿದ ಹೈದರಾಬಾದ್​ ಪರ ಅಗರ್ವಾಲ್(11)​ ಹೊರತುಪಡಿಸಿ ಉಳಿದ ಎಲ್ಲ ಬ್ಯಾಟರ್​ಗಳು ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸಿ ಗಮನಸೆಳೆದರು. ಅದರಲ್ಲೂ 2ನೇ ವಿಕೆಟ್​ಗೆ ಜತೆಯಾದ ಅಭಿಷೇಕ್​ ಶರ್ಮಾ ಮತ್ತು ಆರಂಭಕಾರ ಟ್ರಾವಿಸ್​ ಹೆಡ್​ ಪೈಪೋಟಿಗೆ ಬಿದ್ದವರಂತೆ ಬ್ಯಾಟಿಂಗ್​ ನಡೆಸಿ ಮುಂಬೈ ಬೌಲರ್​ಗಳನ್ನು ನಿರ್ದಾಕ್ಷಿಣ್ಯವಾಗಿ ಮನಬಂದಂತೆ ದಂಡಿಸಿದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟಕ್ಕೆ ಮುಂಬೈ ​7 ಓವರ್​ ಆಗುವ ಮುನ್ನವೇ 100ರ ಗಡಿ ದಾಟಿತು.

ತಿಲಕ್​ ವರ್ಮಾ(64) ಮತ್ತು ನಮನ್ ಧೀರ್(30) ರನ್​ ಗಳಿಸಿದರು. ಬಳಿಕ ಬಂದ ನಾಯಕ ಹಾರ್ದಿಕ್​ ಪಾಂಡ್ಯ(24) ಹಾಗೂ ಟಿಮ್​ ಡೇವಿಡ್(42*)​ ರನ್​ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ವಿಫಲರಾದರು. ಹೈದರಾಬಾದ್​ ಪರ ನಾಯಕ ಕಮಿನ್ಸ್​ ಹಾಗೂ ಉನಾದ್ಕತ್​ ತಲಾ 2 ವಿಕೆಟ್​ ಪಡೆದರು.

ಬೌಲರ್​ಗಳನ್ನು ಚಿಂದಿ ಮಾಡಿದ ಹೆಡ್​-ಅಭಿಷೇಕ್

ವಿಶ್ವಕಪ್​ ಹೀರೊ ಟ್ರಾವಿಸ್​ ಹೆಡ್​ ಕೇವಲ 18 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಇವರ ಜತೆಗಾರ ಅಭಿಷೇಕ್​ ಶರ್ಮ 16 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಜೋಡಿ ದ್ವಿತೀಯ ವಿಕೆಟ್​ಗೆ 68 ರನ್​ ಒಟ್ಟುಗೂಡಿಸಿತು. ಹೆಡ್​ 24 ಎಸೆತಗಳಿಂದ 9 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 62 ರನ್​ ಬಾರಿಸಿದರು. ಅಭಿಷೇಕ್​ ಶರ್ಮಾ 23 ಎಸೆತ ಎದುರಿಸಿ 7 ಸೊಗಸಾದ ಸಿಕ್ಸರ್​ ಮತ್ತು 3 ಬೌಂಡರಿ ಸಿಡಿಸಿ 63 ರನ್​ ಕಲೆಹಾಕಿದರು. ಈ ಮೊತ್ತ ಬಾರಿಸಲು ಅವರು ಎದುರಿಸಿದ್ದು ಕೇವಲ 23 ಎಸೆತ. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದ ಮುಂದೆ ಮುಂಬೈ ತಂಡದ ಬೌಲಿಂಗ್​ ಸಂಪೂರ್ಣ ಹಳಿ ತಪ್ಪಿತು. ಹೆಡ್​ ಮತ್ತು ಅಭಿಷೇಕ್​ ಹೈದರಾಬಾದ್​ ಪರ ಅತಿ ಕಡಿಮೆ ಎಸೆತದಲ್ಲಿ ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದರು.

ಇದನ್ನೂ ಓದಿ: MI vs SRH: ಹೈದರಾಬಾದ್​ಗೆ ಗೆಲುವಿನ ‘ಸನ್​ರೈಸ್​’; ಮುಂಬೈಗೆ ಸತತ 2ನೇ ಸೋಲು

ಸಿಡಿದ ಕ್ಲಾಸೆನ್

ಕಳೆದ ಕೆಕೆಆರ್​ ವಿರುದ್ಧ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರಿದ್ದ ಹೆನ್ರಿಚ್​ ಕ್ಲಾಸೆನ್​ ಈ ಪಂದ್ಯದಲ್ಲಿಯೂ ಸಿಡಿದು ನಿಂತರು. ಕ್ರೀಸ್​ಗಿಳಿದ ಮೊದಲ ಎಸೆತದಿಂದಲೇ ಬಿರುಸಿನ ಬ್ಯಾಟಿಂಗ್​ಗೆ ಒತ್ತುಕೊಟ್ಟ ಅವರು ಮೈದಾನದ ಮೂಲೆ ಮೂಲೆಗೂ ಸಿಕ್ಸರ್​ ಮತ್ತು ಬೌಂಡರಿ ಬಾರಿಸಿ ತವರಿನ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಇವರಿಗೆ ಏಡನ್​ ಮಾರ್ಕ್ರಮ್​ ಕೂಡ ಉತ್ತಮ ಸಾಥ್​ ನೀಡಿದರು. ತಾನೇನು ಕಮ್ಮಿ ಇಲ್ಲ ಎನ್ನುವಂತೆ ಕ್ಲಾಸೆನ್ ಕೂಡ 22 ಎಸೆತಗಳಲ್ಲಿ ಅರ್ಧಶತಕ ಪೂರ್ತಿಗೊಳಿಸಿದರು. ಮುಂಬೈ ಪರ ಜಸ್​​ಪ್ರೀತ್​ ಬುಮ್ರಾ ಅವರನ್ನು ಬಿಟ್ಟು ಉಳಿದೆಲ್ಲ ಬೌಲರ್​ಗಳು ದುಬಾರಿಯಾದರು. ನಾಯಕ ಪಾಂಡ್ಯ ಒಂದು ವಿಕೆಟ್​ ಕಿತ್ತರೂ ಕೂಡ 46 ರನ್​ ಬಿಟ್ಟುಕೊಟ್ಟರು.‌

ಚೊಚ್ಚಲ ಐಪಿಎಲ್​ ಪಂದ್ಯವನ್ನಾಡಿದ ದಕ್ಷಿಣ ಆಫ್ರಿಕಾದ 17 ವರ್ಷದ ಕ್ವೆನಾ ಮಫಕಾ ಅವರಂತೂ ಸರಿಯಾಗಿ ರನ್​ ಹೊಡೆಸಿಕೊಂಡರು. 4 ಓವರ್​ ಎಸೆದು 66 ರನ್​ ಬಿಟ್ಟುಕೊಟ್ಟರು. ಸ್ಪಿನ್ನರ್​ ಪಿಯೂಷ್ ಚಾವ್ಲಾ ಕೇವಲ 2 ಓವರ್​ಗೆ 34 ರನ್​ ಚಚ್ಚಿಸಿಕೊಂಡರು. ಕ್ಲಾಸೆನ್​ 34 ಎಸೆತದಿಂದ ಅಜೇಯ 80 ರನ್​ ಬಾರಿಸಿದರು. ಸಿಡಿದ್ದು 7 ಸಿಕ್ಸರ್​ ಮತ್ತು 4 ಬೌಂಡರಿ. ಮಾರ್ಕ್ರಮ್ ಕೂಡ 42 ರನ್​ ಬಾರಿಸಿ ಅಜೇಯರಾಗಿ ಉಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version