Site icon Vistara News

MS Dhoni: ಕೊಹ್ಲಿ ನಂತರ ಈ ದಾಖಲೆ ಬರೆದ ಎರಡನೇ ಆಟಗಾರ ಎನಿಸಿದ ಧೋನಿ; ಏನದು?

MS Dhoni

MS Dhoni matches Virat Kohli, becomes second to play 250 T20 matches for single team

ಮುಂಬೈ: ಮಹಾರಾಷ್ಟ್ರದ ಮುಂಬೈನಲ್ಲಿರುವ ವಾಂಖೆಡೆ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಪಂದ್ಯವು ಗೆಲುವು (IPL 2024) ಸಾಧಿಸಿದೆ. ಅದರಲ್ಲೂ, ಇನ್ನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಮಹೇಂದ್ರ ಸಿಂಗ್‌ ಧೋನಿ (MS Dhoni) ಅವರು ಬಾರಿಸಿದ ಮೂರು ಸಿಕ್ಸರ್‌ಗಳು ತಂಡದ ಗೆಲುವಿಗೆ ಕಾರಣವಾಗುವ ಜತೆಗೆ ಅಭಿಮಾನಿಗಳ ಮನವನ್ನೂ ತಣಿಸಿವೆ. ಧೋನಿ ಅವರು ಮೂರು ಸಿಕ್ಸರ್‌ ಮೂಲಕ ಗಮನ ಸೆಳೆದಿದ್ದಲ್ಲದೆ, ವಿರಾಟ್‌ ಕೊಹ್ಲಿ (Virat Kohli) ನಂತರ ಐಪಿಎಲ್‌ನಲ್ಲಿ ಒಂದೇ ಫ್ರಾಂಚೈಸ್‌ ಪರವಾಗಿ 250 ಪಂದ್ಯಗಳನ್ನು ಆಡಿದ ಎರಡನೇ ಆಟಗಾರ ಎನಿಸಿದ್ದಾರೆ.

ಆರ್‌ಸಿಬಿ ಪರವಾಗಿ 250 ಪಂದ್ಯಗಳನ್ನು ಆಡುವ ಮೂಲಕ ಐಪಿಎಲ್‌ ಇತಿಹಾಸದಲ್ಲಿಯೇ ಒಂದೇ ಫ್ರಾಂಚೈಸ್‌ ಪರ ಇಷ್ಟು ಪಂದ್ಯಗಳನ್ನು ಆಡಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿದ್ದರು. ಈಗ ಧೋನಿ ಅವರು ಕೂಡ 250 ಪಂದ್ಯಗಳನ್ನು ಆಡುವಾಗ ಮೂಲಕ ಅತಿ ಹೆಚ್ಚು ಪಂದ್ಯವಾಡಿದ ಎರಡನೇ ಆಟಗಾರ ಎನಿಸಿದ್ದಾರೆ. 2008ರಲ್ಲಿ ಸಿಎಸ್‌ಕೆ ಪರವಾಗಿ ಧೋನಿ ಆಡಲು ಆರಂಭಿಸಿದರು. ಎರಡು ವರ್ಷ ರೈಸಿಂಗ್‌ ಪುಣೆ ಸೂಪರ್‌ಜೈಂಟ್ಸ್‌ ಪರವಾಗಿ ಹೊರತುಪಡಿಸಿದರೆ ಧೋನಿ ಅವರು ಸಿಎಸ್‌ಕೆ ಪರವಾಗಿಯೇ ಆಡಿದ್ದಾರೆ.

ಸಿಎಸ್‌ಕೆ ಪರವಾಗಿ 250 ಪಂದ್ಯಗಳನ್ನು ಆಡುವುದಷ್ಟೇ ಕ್ಯಾಪ್ಟನ್‌ ಆಗಿಯೂ 200 ಪಂದ್ಯಗಳಲ್ಲಿ ಧೋನಿ ನಾಯಕರಾಗಿ ಮುನ್ನಡೆಸಿದ್ದಾರೆ. ಧೋನಿ ನಾಯಕತ್ವದಲ್ಲಿ ಸಿಎಸ್‌ಕೆಯು 2010, 2011, 2018, 2021 ಹಾಗೂ 2023ರಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಈಗ ಋತುರಾಜ್‌ ಗಾಯಕ್ವಾಡ್‌ ಅವರು ಸಿಎಸ್‌ಕೆಯನ್ನು ಮುನ್ನಡೆಸುತ್ತಿದ್ದು, ಧೋನಿ ಮಾರ್ಗದರ್ಶನವು ಮುಂದುವರಿದಿದೆ.

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಗೆಲುವು

ಮತೀಶ್​ ಪತಿರಾಣಾ (4 ವಿಕೆಟ್​, 28 ರನ್​​) ಅವರ ಮಾರಕ ಬೌಲಿಂಗ್ ಹಾಗೂ ಋತುರಾಜ್ ಗಾಯಕ್ವಾಡ್​ (69 ರನ್​, 40 ಎಸೆತ, 5 ಫೋರ್, 5 ಸಿಕ್ಸರ್​) , ಶಿವಂ ದುಬೆ (66 ರನ್​, 38 ರನ್​,10 ಫೋರ್​, 2 ಸಿಕ್ಸರ್​ ) ಅವರ ಅರ್ಧ ಶತಕಗಳ ನೆರವಿನಿಂದ ಮಿಂಚಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ 29ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 20 ರನ್​ಗಳ ಅಂತರದಿಂದ ಗೆಲುವು ಸಾಧಿಸಿತು. ಅಂದ ಹಾಗೆ ಚೆನ್ನೈ ಪರ ಕೊನೇ ನಾಲ್ಕು ಎಸೆತಗಳನ್ನು ಎದುರಿಸಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ​ 20 ರನ್​ಗಳನ್ನು ಬಾರಿಸಿದ್ದರು. ಅದರಲ್ಲಿ 3 ಸಿಕ್ಸರ್​ಗಳಿದ್ದವು. ಅದೇ ರನ್​ಗಳ ಅಂತರದಿಂದ ಚೆನ್ನೈ ಗೆದ್ದು ಬೀಗಿದ್ದು ವಿಶೇಷ. ಆದರೆ, ಮುಂಬೈ ಪರ ಏಕಾಂಗಿ ಹೋರಾಟ ನಡೆಸಿ ಅಮೋಘ 105 ರನ್ ಬಾರಿಸಿದ ರೋಹಿತ್ ಶರ್ಮಾ ಅವರ ಶತಕದ ಹೋರಾಟ ವ್ಯರ್ಥಗೊಂಡಿತು.

ಈ ಗೆಲುವು ಚೆನ್ನೈ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ನಾಲ್ಕನೆಯದ್ದು. ಅದೇ ರೀತಿ ಮುಂಬೈ ಇಂಡಿಯನ್ಸ್​ ತಂಡಕ್ಕೆ ನಾಲ್ಕನೇ ಸೋಲು. ಹಾರ್ದಿಕ್ ಪಾಂಡ್ಯ ಬಳಗ ತವರಿನಲ್ಲಿ ನಡೆದ ಈ ಹಿಂದಿನ ಎರಡು ಪಂದ್ಯಗಳನ್ನು ಗೆದಿದ್ದರೆ ಮೂರನೇ ಪಂದ್ಯದಲ್ಲಿ ಸೋಲು ಕಂಡಿತು. ಅಲ್ಲದೆ ಪ್ಲೇ ಆಫ್ ಹಾದಿಯನ್ನು ಕಠಿಣಗೊಳಿಸಿತು. ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡದ ಚೆನ್ನೈ ಸೂಪರ್ ಕಿಂಗ್ಸ್ ಮೇಲಿನ ಗೆಲುವಿನ ಪಾರಮ್ಯದ ಅಂತರ ಕಡಿಮೆಯಾಯಿತು ಒಟ್ಟು 36 ಪಂದ್ಯಗಳಲ್ಲಿ ಮುಂಬೈ 20 ರಲ್ಲಿ ಗೆದ್ದಿದ್ದರೆ, ಚೆನ್ನೈ 17 ಪಂದ್ಯಗಳಲ್ಲಿ ಗೆದ್ದಂತಾಯಿತು.

ಇದನ್ನೂ ಓದಿ: IPL 2024: ಅಬ್ಬರದ ಫೀಲ್ಡಿಂಗ್‌ ವೇಳೆ ಕಳಚಿದ ರೋಹಿತ್‌ ಶರ್ಮಾ ಪ್ಯಾಂಟ್;‌ ವಿಡಿಯೊ ವೈರಲ್!

Exit mobile version