Site icon Vistara News

Virat Kohli: ಮೈದಾನದಲ್ಲೇ ರುಸ್ಸೊ AK 47ಗೆ ಕಲಾಶ್‌ನಿಕಾವೋ ಗನ್ ತೆಗೆದ ಕೊಹ್ಲಿ; ವಿಡಿಯೊ ನೋಡಿ

Virat Kohli

Virat Kohli gives it back to Rilee Rossouw, mimics with a gun-shot celebration

ಧರ್ಮಶಾಲಾ: ಮೈದಾನದಲ್ಲಿ ವಿರಾಟ್‌ ಕೊಹ್ಲಿ (Virat Kohli) ಇರುವುದೇ ಹಾಗೆ. ಅದು ಗೌತಮ್‌ ಗಂಭೀರ್‌ ಇರಲಿ, ಸ್ಟ್ರೈಕ್‌ ರೇಟ್‌ ಕುರಿತು ಕಾಮೆಂಟರಿ ನೀಡಿದ ಸುನೀಲ್‌ ಗವಾಸ್ಕರ್ ಇರಲಿ, ಹೆಲ್ಮೆಟ್‌ ಬಿಸಾಡಿದ ಆವೇಶ್‌ ಖಾನ್‌ ಇರಲಿ, ನವೀನ್‌ ಹುಲ್‌ ಹಕ್‌ ಇರಲಿ. ಅವರು ಮೈದಾನದಲ್ಲಿಯೇ ತಿರುಗೇಟು ನೀಡದೆ ಬಿಡುವುದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ, ಪ್ರಸಕ್ತ ಐಪಿಎಲ್‌ ಆವೃತ್ತಿಯ (IPL 2024) ಪಂಜಾಬ್‌ ಕಿಂಗ್ಸ್‌ (PBKS) ವಿರುದ್ಧ ನಡೆದ ಐಪಿಎಲ್‌ ಪಂದ್ಯದಲ್ಲಿ ರೀಲಿ ರುಸ್ಸೊ (Rilee Rossouw) ಅವರಿಗೆ ಅವರದ್ದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಆರ್‌ಸಿಬಿ ನೀಡಿದ 242 ರನ್‌ಗಳ ಬೃಹತ್‌ ಮೊತ್ತ ಬೆನ್ನತ್ತುವಾಗ ರೀಲಿ ರುಸ್ಸೊ ಅವರು ಬಿರುಸಿನ ಅರ್ಧಶತಕ ಬಾರಿಸಿದರು. ಅರ್ಧಶತಕ ಬಾರಿಸಿದ ಬಳಿಕ ಅವರು ಗನ್‌ ಶಾಟ್‌ ರೀತಿಯ ಭಂಗಿ ಮೂಲಕ ಸಂಭ್ರಮಾಚರಿಸಿದರು. ಆದರೆ, ಅರ್ಧಶತಕದ ಬಳಿಕ ಕರಣ್‌ ಶರ್ಮಾ ಎಸೆತದಲ್ಲಿ ವಿಲ್‌ ಜಾಕ್ಸ್‌ಗೆ ಕ್ಯಾಚಿತ್ತು ರೀಲಿ ರುಸ್ಸೊ ಔಟಾದರು. ರುಸ್ಸೊ ಔಟಾಗುತ್ತಲೇ ವಿರಾಟ್‌ ಕೊಹ್ಲಿ ಅವರೂ ಗನ್‌ನಿಂದ ಶೂಟ್‌ ಮಾಡುವ ರೀತಿ ಸಂಭ್ರಮಿಸುವ ಮೂಲಕ ಅವರಿಗೆ ತಿರುಗೇಟು ನೀಡಿದರು. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಪಂಜಾಬ್ ತಂಡ ಆರ್​ಸಿಬಿಯನ್ನು ಬ್ಯಾಟ್ ಮಾಡಲು ಆಹ್ವಾನಿಸಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ರೆಡ್ ಆರ್ಮಿ ನಿಗದಿತ 20 ಓವರ್​​ಗಳಲ್ಲಿ 7 ವಿಕೆಟ್​ಗೆ 241 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಂಜಾಬ್ ಬಳಗ 17 ಓವರ್​ಗಳಲ್ಲಿ 181 ರನ್​ಗಳಿಗೆ ಆಲ್​ಔಟ್ ಆಯಿತು. ಇದರೊಂದಿಗೆ ಆರ್‌ಸಿಬಿಯು ಸತತ ನಾಲ್ಕನೇ ಜಯ ದಾಖಲಿಸಿತು.

ಕೊಹ್ಲಿಯ ಪ್ರದರ್ಶನ ‘ಕಿಂಗ್’

ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ಪರ ಫಾಫ್​ ಡು ಪ್ಲೆಸಿಸ್​ ಮತ್ತೊಂದು ಬಾರಿ ಕಳಪೆ ಪ್ರದರ್ಶನ ನೀಡಿದರು. 9 ರನ್​ಗೆ ಅವರು ಔಟಾದರು. ಹೀಗಾಗಿ 19 ರನ್​ಗೆ ಒಂದು ವಿಕೆಟ್​ ಕಳೆದುಕೊಂಡ ಆರ್​ಸಿಬಿಗೆ ಸಂಕಷ್ಟ ಶುರುವಾಯಿತು. ಬಳಿಕ ಬಂದ ವಿಲ್​ ಜ್ಯಾಕ್ಸ್​ ಕೂಡ 12 ರನ್​ಗೆ ಸೀಮಿತಗೊಂಡರು. ಆದರೆ, ಮತ್ತೊಂದು ಬದಿಯಲ್ಲಿ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ ವಿರಾಟ್ ಕೊಹ್ಲಿ ಇನಿಂಗ್ಸ್ ಕಟ್ಟಲು ಆರಂಭಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಇವರಿಗೆ ಜತೆಯಾದ ರಜತ್​ ಪಾಟೀದರ್ ಮತ್ತೊಂದು ವಿಸ್ಫೋಟಕ ಆಟ ಆಡಿದರು. ಅವರು 23 ಎಸೆತಕ್ಕೆ 55 ರನ್ ಬಾರಿಸಿದ್ದ ಕಾರಣ ಆರ್​ಸಿಬಿಯ ರನ್​ ಗಳಿಕೆ ಏರುಗತಿಯಲ್ಲಿ ಸಾಗಿತು.

ವಿರಾಟ್​ ಕೊಹ್ಲಿ ಜತೆ ಮತ್ತೊಂದು ಉತ್ತಮ ಜತೆಯಾಟ ನೀಡಿದ ವಿಲ್ ಜ್ಯಾಕ್ಸ್​ 46 ರನ್​ ಬಾರಿಸಿದರು. ಕೊಹ್ಲಿ 6 ಫೋರ್ ಹಾಗೂ 4 ಸಿಕ್ಸರ್ ಸಮೇತ ಭರ್ಜರಿ ಆಟವಾಡಿ ಶತಕದ ಹಾದಿಯಲ್ಲಿದ್ದರು. ಆದರೆ, ಕೊನೇ ಹಂತದಲ್ಲಿ ರನ್ ಬಾಚುವ ಒತ್ತಡಕ್ಕೆ ಬಿದ್ದ ಅವರು 8 ರನ್​ಗಳಿಂದ ಶತಕ ವಂಚಿತರಾದರು.

ದೊಡ್ಡ ಗುರಿಯನ್ನು ಬೆನ್ನಟ್ಟಲು ಹೊರಟ ಪಂಜಾಬ್ ಹೀನಾಯ ಪ್ರದರ್ಶನ ನೀಡಿತು. ಪ್ರಭ್​ ಸಿಮ್ರಾನ್ ಸಿಂಗ್ 6 ರನ್​ಗೆ ಜಾಗ ಖಾಲಿ ಮಾಡಿದರು. ಬೈರ್​ಸ್ಟೋವ್ 27 ರನ್​ ಬಾರಿಸಿ ಔಟಾದರು. ಆದರೆ, ಮೂರನೇ ಕ್ರಮಾಂಕದಲ್ಲಿ ಆಡಲು ಇಳಿದ ರೀಲಿ ರೊಸ್ಸೊ 27 ಎಸೆತಕ್ಕೆ 61 ರನ್ ಬಾರಿಸಿ ಗೆಲುವಿನ ಹುಮ್ಮಸ್ಸು ತಂದರು. ಆದರೆ, ತಲೆಗೆ ಚೆಂಡು ಬಡಿಸಿಕೊಂಡ ಮರು ಎಸೆತದಲ್ಲಿಯೇ ಸ್ಪಿನ್ನರ್​ ಕರಣ್ ಶರ್ಮಾ ಬೌಲಿಂಗ್​ನಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಅಲ್ಲಿಂ ದ ಪಂಜಾಬ್ ಇನಿಂಗ್ಸ್ ಕುಸಿಯಿತು. ನಡುವೆ ಶಶಾಂಕ್​ ಶರ್ಮಾ 37 ರನ್ ಬಾರಿಸಿದರು. ಆದರೆ, ಕೊಹ್ಲಿ ಮಾಡಿದ ಅದ್ಭುತ ರನ್​ಔಟ್​ಗೆ ಅವರು ಬಲಿಯಾದರು. ಸ್ಯಾಮ್​ ಕರ್ರನ್​ 22 ರನ್​ ಕೊಡುಗೆ ಕೊಟ್ಟರು. ಆರ್​ಸಿಬಿ ಪರ ಮೊಹಮ್ಮಸ್ ಸಿರಾಜ್​ 3 ವಿಕೆಟ್​, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗ್ಯೂಸನ್​ ಹಾಗೂ ಕರಣ್ ಶರ್ಮಾ ತಲಾ 1 ವಿಕೆಟ್ ಉರುಳಿಸಿದರು.

ಇದನ್ನೂ ಓದಿ: IPL 2024 : ಆರ್​ಸಿಬಿಗೆ ಐದನೇ ವಿಜಯ, ಪಂಜಾಬ್​ ವಿರುದ್ಧ 60 ರನ್ ಭರ್ಜರಿ ಗೆಲುವು

Exit mobile version