ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಅನ್ನು ವಿದೇಶಕ್ಕೆ ಸ್ಥಳಾಂತರಿಸುವುದಿಲ್ಲ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಸಂದರ್ಶನವೊಂದರಲ್ಲಿ ಖಚಿತಪಡಿಸಿದ್ದಾರೆ. ಭಾರತದಲ್ಲಿ ಸಾರ್ವತ್ರಿಕ ಚುನಾವಣೆ ಇರುವುದರಿಂದ ನಗದು ಸಮೃದ್ಧ ಟಿ 20 ಲೀಗ್ ಅನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ಸ್ಥಳಾಂತರಿಸಬಹುದು ಎಂಬ ವರದಿಗಳ ನಂತರ ಈ ಬೆಳವಣಿಗೆ ನಡೆದಿದೆ. ಸಾರ್ವತ್ರಿಕ ಚುನಾವಣೆಯ ದಿನಾಂಕಗಳನ್ನು ಶನಿವಾರ (ಮಾರ್ಚ್16) ಚುನಾವಣಾ ಆಯೋಗ ಘೋಷಿಸಿದೆ. ನಂತರ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಂದರ್ಶನವೊಂದರಲ್ಲಿ ಐಪಿಎಲ್ ಅನ್ನು ಸ್ಥಳಾಂತರಿಸುವುದಿಲ್ಲ ಎಂದು ಹೇಳಿಕೆ ಕೊಟ್ಟಿದ್ದಾರೆ.
“ಇಲ್ಲ, ಇದನ್ನು ವಿದೇಶಕ್ಕೆ ಸ್ಥಳಾಂತರಿಸಲಾಗುವುದಿಲ್ಲ” ಎಂದು ಶಾ ಶನಿವಾರ ಕ್ರಿಕ್ಬಜ್ ಸಂದರ್ಶನದಲ್ಲಿ ತಿಳಿಸಿದ್ದಾರೆ. ಮಾರ್ಚ್ 19 ರಿಂದ ಜೂನ್ 4 ರವರೆಗೆ ಚುನಾವಣೆ ಪ್ರಕ್ರಿಯೆಗಳು ನಡೆಯಲಿದೆ. ಮಾರ್ಚ್ 22ರಂದು ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಎಂಎಸ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ. ಇಲ್ಲಿಯವರೆಗೆ, ಮೊದಲ ಎರಡು ವಾರಗಳ ದಿನಾಂಕಗಳನ್ನು ಘೋಷಿಸಲಾಗಿದೆ.
ಐಪಿಎಲ್ನ ದ್ವಿತೀಯಾರ್ಧವನ್ನು ಗಲ್ಫ್ ದೇಶಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಅನ್ವೇಷಿಸಲು ಕೆಲವು ಬಿಸಿಸಿಐ ಅಧಿಕಾರಿಗಳು ಯುಎಇಯಲ್ಲಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ” ಟೂರ್ನಿಯನ್ನು ದುಬೈಗೆ ಸ್ಥಳಾಂತರಿಸಬೇಕೇ ಎಂದು ಬಿಸಿಸಿಐ ನಿರ್ಧರಿಸುತ್ತದೆ. ಪ್ರಸ್ತುತ, ಐಪಿಎಲ್ನ ದ್ವಿತೀಯಾರ್ಧವನ್ನು ದುಬೈನಲ್ಲಿ ಆಯೋಜಿಸುವ ಸಾಧ್ಯತೆಯನ್ನು ಅನ್ವೇಷಿಸಲು ಬಿಸಿಸಿಐನ ಕೆಲವು ಉನ್ನತ ಅಧಿಕಾರಿಗಳು ದುಬೈನಲ್ಲಿದ್ದಾರೆ” ಎಂದು ಬಿಸಿಸಿಐ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಲಾಗಿದೆ.
ಚೆನ್ನೈ- ಆರ್ಸಿಬಿ ಪಂದ್ಯ
ಮಾರ್ಚ್ 22ರಂದು ರಾತ್ರಿ 8 ಗಂಟೆಗೆ ಚೆನ್ನೈನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಎಂ.ಎಸ್.ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. ಮೊದಲ ವಾರಾಂತ್ಯದಲ್ಲಿ ಎರಡು ಡಬಲ್ ಹೆಡರ್ಗಳು ನಡೆಯಲಿದ್ದು, ಶನಿವಾರ ಮಧ್ಯಾಹ್ನ ಪಂಜಾಬ್ ಕಿಂಗ್ಸ್ ಡೆಲ್ಲಿ ಕ್ಯಾಪಿಟಲ್ಸ್ಗೆ ಆತಿಥ್ಯ ವಹಿಸಲಿದೆ. ಸಂಜೆ ಎಸ್ಆರ್ಎಚ್ ತಂಡ ಕೋಲ್ಕತಾ ನೈಟ್ ರೈಡರ್ಸ್ ಆತಿಥ್ಯ ವಹಿಸಲಿದೆ.
ಇದನ್ನೂ ಓದಿ : IPL 2024 : ಐಪಿಎಲ್ ಫೈನಲ್ ದಿನಾಂಕವನ್ನು ಬಾಯ್ತಪ್ಪಿ ಹೇಳಿದ ಗೌತಮ್ ಗಂಭೀರ್! ಇಲ್ಲಿದೆ ವಿಡಿಯೊ
ಭಾನುವಾರ ಮಧ್ಯಾಹ್ನ (ಮಾರ್ಚ್ 24) ಪಂದ್ಯವು ಜೈಪುರಕ್ಕೆ ಹೋಗಲಿದೆ. ಅಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಭಾನುವಾರ ಸಂಜೆ 2022ರ ಚಾಂಪಿಯನ್ಸ್ ಹಾಗೂ ಕಳೆದ ಋತುವಿನ ಫೈನಲ್ ತಲುಪಿರುವ ಗುಜರಾತ್ ಟೈಟಾನ್ಸ್ ತಂಡ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ.
ವಿಶಾಖಪಟ್ಟಣಂನಲ್ಲಿ ತಮ್ಮ ಮೊದಲ ಎರಡು ತವರು ಪಂದ್ಯಗಳನ್ನು ಡೆಲ್ಲಿ ತಂಡ ಆಡಲಿದೆ. ಮೊದಲು ಮಾರ್ಚ್ 31 ರ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಆಡಲಿದೆ. ನಂತರ ಏಪ್ರಿಲ್ 3 ರ ಬುಧವಾರ ಅದೇ ಸ್ಥಳದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ.