ಟರೌಬಾ: ಟಿ-20 ಪಂದ್ಯಗಳಲ್ಲಿ ಯಾವುದೇ ಬೌಲರ್ ಒಂದು ಓವರ್‌ಗೆ 8ಕ್ಕಿಂತ ಕಡಿಮೆ ರನ್‌ಗಳನ್ನು ನೀಡಿದರೆ, ಆತನನ್ನೇ ಉತ್ತಮ ಬೌಲರ್ ಎಂದು ಕರೆಯಲಾಗುತ್ತದೆ. ಆದರೆ, ನ್ಯೂಜಿಲ್ಯಾಂಡ್ ಕ್ರಿಕೆಟ್ ತಂಡದ ವೇಗಿ ಲಾಕಿ ಫರ್ಗ್ಯೂಸನ್ (Lockie Ferguson) ಅವರು 4 ಓವರ್‌ಗಳನ್ನು ಎಸೆದು, ನಾಲ್ಕೂ ಓವರ್‌ಗಳನ್ನು ಮೇಡನ್ ಮಾಡಿದ್ದಲ್ಲದೆ 3 ವಿಕೆಟ್‌ಗಳನ್ನು ಪಡೆಯುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ. ಟಿ-20 ವಿಶ್ವಕಪ್ (T20 World Cup 2024) ಇತಿಹಾಸದಲ್ಲಿಯೇ ನಾಲ್ಕು ಓವರ್ ಎಸೆದು, ಒಂದು ರನ್ ಕೊಡದ ಅಥವಾ ಮೋಸ್ಟ್ ಎಕನಾಮಿಕಲ್ ಸ್ಪೆಲ್ ಮಾಡಿದ ಬೌಲರ್ ಎನಿಸಿದ್ದಾರೆ.
ಟಿ-20 ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಕೇನ್ ವಿಲಿಯಮ್ಸನ್ ಅವರು ಬೌಲಿಂಗ್ ಆಯ್ದುಕೊಂಡರು. ಪಪುವಾ ನ್ಯೂಗಿನಿಯಾ ಇನ್ನಿಂಗ್ಸ್‌ನ ಐದನೇ ಓವರ್ ಎಸೆಯಲು ಲಾಕಿ ಫರ್ಗ್ಯೂಸನ್ ಕಣಕ್ಕಿಳಿದರು. ಮೊದಲ ಓವರ್‌ನ ಮೊದಲ ಎಸೆತದಲ್ಲಿಯೇ ಲಾಕಿ ಫರ್ಗ್ಯೂಸನ್ ಅವರು ನಾಯಕ ಅಸಾದ್ ವಾಲಾ ಅವರ ವಿಕೆಟ್ ಕಬಳಿಸಿದರು. ಇದೇ ಆತ್ಮವಿಶ್ವಾಸದಲ್ಲಿಯೇ ಲಾಕಿ ಫರ್ಗ್ಯೂಸನ್ ಅವರು ನಾಲ್ಕೂ ಓವರ್‌ಗಳನ್ನು ಎಸೆದರು. ನಾಲ್ಕಕ್ಕೆ ನಾಲ್ಕೂ ಮೇಡನ್ ಮಾಡಿದ ಅವರು, ಅಸಾದ್ ವಾಲಾ ಜತೆಗೆ ಚಾರ್ಲ್ಸ್ ಅಮಿತಿ ಹಾಗೂ ಚಾಡ್ ಸೋಪರ್ ಅವರ ವಿಕೆಟ್ ಪಡೆದರು.
4️⃣ OVERS 4️⃣ MAIDENS 🤯
— ICC (@ICC) June 17, 2024
Lockie Ferguson becomes the first bowler in Men's #T20WorldCup history to bowl four maidens in a match 👏#NZvPNG | Read On ➡️ https://t.co/FAMNFlxbvi pic.twitter.com/ryUlq9BOkW
ಲಾಕಿ ಫರ್ಗ್ಯೂಸನ್ ಸೇರಿ ನ್ಯೂಜಿಲ್ಯಾಂಡ್ ಬೌಲರ್‌ಗಳ ಎದುರು ಮಂಡಿಯೂರಿದ ಪಪುವಾ ನ್ಯೂಗಿನಿಯಾ ತಂಡವು 19.4 ಓವರ್‌ಗಳಲ್ಲಿ 78 ರನ್‌ಗಳಿಗೆ ಸರ್ವಪತನ ಕಂಡಿತು. ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಹಾಗೂ ಐಶ್ ಸೋಧಿ ಅವರು ಕೂಡ ತಲಾ ಎರಡು ವಿಕೆಟ್ ಪಡೆದು ಎದುರಾಳಿ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದರು. ಟಿ-20 ವಿಶ್ವಕಪ್ ಇತಿಹಾಸದಲ್ಲಿಯೇ ನಾಲ್ಕೂ ಓವರ್‌ಗಳನ್ನು ಮೇಡನ್ ಮಾಡಿದ ಮೊದಲ ಬೌಲರ್ ಎಂಬ ಖ್ಯಾತಿಗೆ ಲಾಕಿ ಫರ್ಗ್ಯೂಸನ್ ಪಾತ್ರರಾದರು. ಇನ್ನು ಟಿ-20 ಇತಿಹಾಸದಲ್ಲಿ ನಾಲ್ಕೂ ಓವರ್ ಮೇಡನ್ ಮಾಡಿದ ಎರಡನೇ ಬೌಲರ್ ಎನಿಸಿದರು. ಇದಕ್ಕೂ ಮೊದಲು ಅಂದರೆ 2021ರಲ್ಲಿ ಕೆನಡಾದ ಸಾದ್ ಬಿನ್ ಜಫರ್ ಅವರು ಪನಾಮ ವಿರುದ್ಧ ನಡೆದ ಟಿ-20 ಪಂದ್ಯದಲ್ಲಿ ಎಲ್ಲ ನಾಲ್ಕೂ ಓವರ್‌ಗಳನ್ನು ಮೇಡನ್ ಮಾಡಿದ್ದರು.
ಪಪುವಾ ನ್ಯೂಗಿನಿಯಾ ನೀಡಿದ ಅಲ್ಪ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ತಂಡವು 12.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗೆಲುವಿನ ದಡ ಸೇರಿತು. ಇದರೊಂದಿಗೆ ಗ್ರೂಪ್ ಹಂತದ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದು ಟೂರ್ನಿಯಿಂದ ಹೊರ ನಡೆಯಿತು. ನ್ಯೂಜಿಲ್ಯಾಂಡ್ ತಂಡ ಇರುವ ಸಿ ಗ್ರೂಪ್‌ನಿಂದ ಅಫಘಾನಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಸೂಪರ್ 8ರ ಘಟ್ಟಕ್ಕೆ ತಲುಪಿವೆ. ಅಂದಹಾಗೆ, ಲಾಕಿ ಫರ್ಗ್ಯೂಸನ್ ಅವರು ಆರ್‌ಸಿಬಿಯ ಪ್ರಮುಖ ಬೌಲರ್ ಕೂಡ ಆಗಿದ್ದಾರೆ.
ಇದನ್ನೂ ಓದಿ: T20 World Cup Super 8 Stage: ಸೂಪರ್-8 ಪಂದ್ಯಕ್ಕೂ ಮಳೆ ಭೀತಿ; ಭಾರತ-ಆಸೀಸ್ ಪಂದ್ಯ ಅನುಮಾನ!