Site icon Vistara News

Mady Villiers: ಎಬಿಡಿ ವಿಲಿಯರ್ಸ್ ಶೈಲಿಯಲ್ಲೇ ಕ್ಯಾಚ್​ ಹಿಡಿದ ಇಂಗ್ಲೆಂಡ್​ ಆಟಗಾರ್ತಿ ಮ್ಯಾಡಿ ವಿಲಿಯರ್ಸ್; ವಿಡಿಯೊ ವೈರಲ್​

Mady Villiers

Mady Villiers: Flying Mady Villiers takes stunning one-handed catch in The Hundred

ಲಂಡನ್​: ವಿಶ್ವ ಕ್ರಿಕೆಟ್‌ನಲ್ಲಿ ಈಗಾಗಲೇ ಹಲವು ಅದ್ಭುತ ಕ್ಯಾಚ್‌ಗಳು(stunning catch) ದಾಖಲಾಗಿವೆ. ಆ ಸಾಲಿಗೆ ಇದೀಗ ಇಂಗ್ಲೆಂಡ್​ ತಂಡದ ಆಟಗಾರ್ತಿ ಮ್ಯಾಡಿ ವಿಲಿಯರ್ಸ್(Mady Villiers) ಸೇರ್ಪಡೆಗೊಂಡಿದ್ದಾರೆ. ‘ದಿ ಹಂಟ್ರೆಡ್​’ ಕ್ರಿಕೆಟ್(The Hundred)​ ಟೂರ್ನಿಯ ಪಂದ್ಯವೊಂದರಲ್ಲಿ ಮ್ಯಾಡಿ ವಿಲಿಯರ್ಸ್ ಯಾರೂ ಊಹಿಸದ ರೀತಿಯಲ್ಲಿ ಮೇಲಕ್ಕೆ ಜಂಪ್ ಮಾಡಿ ಒಂದೇ ಕೈಯಲ್ಲಿ ಅದ್ಭುತ ಕ್ಯಾಚ್ ಒಂದನ್ನು ಹಿಡಿಯುವ ಮೂಲಕ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಸದ್ಯ ಈ ಕ್ಯಾಚ್​ನ ವಿಡಿಯೊ ವೈರಲ್​ ಆಗುತ್ತಿದ್ದು, ಮಹಿಳಾ ಕ್ರಿಕೆಟ್​ನಲ್ಲಿ ಕಂಡು ಬಂದ ಅತ್ಯದ್ಭುತ ಕ್ಯಾಚ್​ ಎಂದು ಕ್ರಿಕೆಟ್​ ಪಂಡಿತರು ಹೇಳಿದ್ದಾರೆ.

ಓವಲ್‌ ಇನ್ವಿನ್ಸಿಬಲ್‌ ತಂಡದ ಪರವಾಗಿ ಆಡುತ್ತಿರುವ 25 ವರ್ಷದ ಮ್ಯಾಡಿ ವಿಲಿಯರ್ಸ್‌ 30ಯಾರ್ಡ್​ನಲ್ಲಿ ಫೀಲ್ಡಿಂಗ್​ ನಡೆಸುತ್ತಿದ್ದರು. ಈ ವೇಳೆ ಎದುರಾಳಿ ತಂಡದ ಆಟಗಾರ್ತಿ ಬೌಂಡರಿ ಕಡೆಗೆ ಬಾರಿಸಿದ ಚೆಂಡನ್ನು ಕಣ್ಣು ಮಿಟುಕಿಸುವಷ್ಟರಲ್ಲಿ ಮೇಲಕ್ಕೆ ಜಿಗಿದು ತನ್ನ ಎಡಗೈಯಿಂದ ಕ್ಯಾಚ್​ ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಈ ಕ್ಯಾಚ್​ ಕಂಡ ಪ್ರೇಕ್ಷಕರು ಒಂದು ಕ್ಷಣ ದಂಗಾಗಿದ್ದಾರೆ. ಅತ್ತ ಕಾಮೆಂಟ್ರಿ ನಡೆಸುತ್ತಿದ್ದವರು, ಕ್ಯಾಚ್‌ ಆಫ್‌ ದಿ ಟೂರ್ನಮೆಂಟ್‌ ಎಂದು ಬಣ್ಣಿಸಿದ್ದಾರೆ. ಟ್ರೆಂಟ್‌ ರಾಕೆಟ್ಸ್‌ ತಂಡ ಆರಂಭಿ ಆಟಗಾರ್ತಿ ಬ್ರಯೋನಿ ಸ್ಮಿತ್ ಅವರ ಕ್ಯಾಚ್​ ಇದಾಗಿತ್ತು.

ಇದನ್ನೂ ಓದಿ Kieron Pollard: ರಶೀದ್ ಖಾನ್‌ ಓವರ್​ನಲ್ಲಿ ಸತತ 5 ಸಿಕ್ಸರ್ ಬಾರಿಸಿದ ಪೊಲಾರ್ಡ್‌; ವಿಡಿಯೊ ಇಲ್ಲಿದೆ

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಟ್ರೆಂಟ್‌ ರಾಕೆಟ್ಸ್‌ ತಂಡ ಆಶ್ಲೀ ಗಾರ್ಡ್ನರ್(43) ಅವರ ಏಕಾಂಗಿ ಬ್ಯಾಟಿಂಗ್​ ಹೋರಾಟದ ನೆರವಿನಿಂದ 8 ವಿಕೆಟ್​ಗೆ 91 ರನ್​ ಬಾರಿಸಿ ಸವಾಲೊಡ್ಡಿತು. ಗುರಿ ಬೆನ್ನಟ್ಟಿದ ಓವಲ್‌ ಇನ್ವಿನ್ಸಿಬಲ್‌ ತಂಡ 5 ವಿಕೆಟ್​ ನಷ್ಟಕ್ಕೆ 92 ರನ್​ ಬಾರಿಸಿ ಗೆಲುವು ಸಾಧಿಸಿತು. ಮ್ಯಾಡಿ ವಿಲಿಯರ್ಸ್ ಫೀಲ್ಡಿಂಗ್​ ಮಾತ್ರವಲ್ಲದೆ ಬೌಲಿಂಗ್​ನಲ್ಲಿ 1 ವಿಕೆಟ್​ ಪಡೆದರು. ಅದು ಕೂಡ ಆಶ್ಲೀ ಗಾರ್ಡ್ನರ್ ಅವರದ್ದು. ಬ್ಯಾಟಿಂಗ್​ನಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಕೇವಲ ಒಂದು ರನ್​ಗೆ ಸೀಮಿತರಾಗಿ ವಿಕೆಟ್​ ಕಳೆದುಕೊಂಡರು.

ಓವಲ್‌ ಇನ್ವಿನ್ಸಿಬಲ್‌ ತಂಡ ಆಡಿದ 8 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 2ನೇ ಸ್ಥಾನಿಯಾಗಿ ಸೆಮಿಫೈನಲ್​ ಹಂತಕ್ಕೇರಿದೆ. ನಾಳೆ(ಆ.17) ನಡೆಯುವ ಸೆಮಿ ಪಂದ್ಯದಲ್ಲಿ ಲಂಡನ್ ಸ್ಪಿರಿಟ್ ತಂಡದ ಸವಾಲು ಎದುರಿಸಲಿದೆ. ಗೆದ್ದರೆ ಆಗಸ್ಟ್​ 18ರಂದು ನಡೆಯುವ ಫೈನಲ್​ ಪಂದ್ಯದಲ್ಲಿ ವೆಲ್ಷ್ ಫೈರ್​ ತಂಡದ ವಿರುದ್ಧ ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ.

Exit mobile version