ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ನಟನೆಗೆ ಮುಂದಾಗುವ ಸಾಧ್ಯತೆ ಇದೆ ಎಂದು ಪತ್ನಿ ಸಾಕ್ಷಿ ಧೋನಿ ಬಹಿರಂಗಪಡಿಸಿದ್ದಾರೆ. ಚೆನ್ನೈನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಕ್ಷಿ, ʻʻ2006ರಿಂದ ಜಾಹೀರಾತುಗಳಲ್ಲಿ ನಟಿಸುತ್ತಿರುವ ಧೋನಿ ಅವರು ಕ್ಯಾಮೆರಾ ಎದುರಿಸಲು ಹೆದರುವುದಿಲ್ಲʼʼ. ಎಂದಿದ್ದಾರೆ.
ಕ್ಯಾಪ್ಟನ್ ಕೂಲ್ ಎಂ.ಎಸ್ ಧೋನಿ (MS Dhoni) ಪತ್ನಿ ಸಾಕ್ಷಿ ಜತೆಗೂಡಿ ತಮ್ಮದೇ ಧೋನಿ ಎಂಟರ್‌ಟೇನ್‌ಮೆಂಟ್ ಮೂಲಕ ನಿರ್ಮಿಸುತ್ತಿರುವ ಚೊಚ್ಚಲ ಸಿನಿಮಾ’ಎಲ್‌ಜಿಎಂ – ಲೆಟ್ಸ್ ಗೆಟ್ ಮ್ಯಾರೀಡ್’ . ರಮೇಶ್ ತಮಿಳ್‌ಮಣಿ ನಿರ್ದೇಶನದ ತಮಿಳು ಚಿತ್ರ ʻಲೆಟ್ಸ್ ಗೆಟ್ ಮ್ಯಾರೀಡ್ʼ ತೆಲುಗಿನಲ್ಲೂ ಬಿಡುಗಡೆಯಾಗಲಿದೆ. ಇದರಲ್ಲಿ ನಾದಿಯಾ, ಯೋಗಿ ಬಾಬು ಮತ್ತು ಮಿರ್ಚಿ ವಿಜಯ್ ನಟಿಸಿದ್ದಾರೆ. ಸಾಕ್ಷಿ ಚೆನ್ನೈನಲ್ಲಿ ತಮ್ಮ ಮೊದಲ ನಿರ್ಮಾಣದ ಪ್ರಚಾರಕ್ಕಾಗಿ ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದರು. ನಿರ್ಮಾಪಕ ಶಕ್ತಿ, ಆರ್‌ಜೆ ವಿಜಯ್, ನಾದಿಯಾ, ರಮೇಶ್ ತಮಿಳ್ಮಣಿ, ಇವಾನಾ ಮತ್ತು ಹರೀಶ್ ಕಲ್ಯಾಣ್ ಜತೆಗಿದ್ದರು. ಎಂಎಸ್ ಧೋನಿ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ವಹಿಸಬಹುದೇ ಎಂಬ ಪ್ರಶ್ನೆಗೆ ಸಾಕ್ಷಿ “ಅವರಿಗೆ ಕ್ಯಾಮೆರಾ ಶೈ ಇಲ್ಲ. 2006ರಿಂದ ಜಾಹೀರಾತುಗಳಲ್ಲಿ ನಟಿಸುತ್ತಿರುವ ಅವರು ಕ್ಯಾಮೆರಾ ಎದುರಿಸಲು ಹೆದರುವುದಿಲ್ಲ. ಆದ್ದರಿಂದ, ಮುಂದೆ ಅಂತಹ ಅವಕಾಶ ಬಂದರೆ ನಟಿಸಬಹುದುʼʼ ಎಂದರು.
ಮಾತು ಮುಂದುವರಿಸಿದ ಸಾಕ್ಷಿ ʻʻಕ್ರಿಕೆಟಿಗರು ಆ್ಯಕ್ಷನ್ ಚಿತ್ರಗಳಿಗೆ ಹೆಚ್ಚು ಸೂಕ್ತ ಎನಿಸುತ್ತಾರೆ. ಎಂಎಸ್ ಧೋನಿ ಅವರನ್ನು ಹೀರೊ ಆಗಿಟ್ಟುಕೊಂಡು ಸಿನಿಮಾ ಮಾಡುವ ಪ್ಲಾನ್ ಮಾಡಿದರೆ ಅದು ಕೇವಲ ಆ್ಯಕ್ಷನ್-ಪ್ಯಾಕ್ಡ್ ಎಂಟರ್‌ಟೈನರ್ ಆಗಿರುತ್ತದೆ. ಒಳ್ಳೆಯ ಕಥೆ ಮತ್ತು ಉತ್ತಮ ಸಂದೇಶವುಳ್ಳ ಪಾತ್ರ ಬಂದರೆ ಎಂಎಸ್ ಧೋನಿ ಸಿನಿಮಾದಲ್ಲಿ ನಟಿಸುವ ಬಗ್ಗೆ ಯೋಚಿಸುತ್ತಾರೆ” ಎಂದಿದ್ದಾರೆ.
ಇದನ್ನೂ ಓದಿ: MS Dhoni: ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾ ಟ್ರೈಲರ್ ಬಿಡುಗಡೆ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ
‘ಎಲ್‌ಜಿಎಂ – ಲೆಟ್ಸ್ ಗೆಟ್ ಮ್ಯಾರೀಡ್’ ಟೀಸರ್ ಮೂಲಕ ನಗುವಿನ ಕಿಕ್ ಕೊಟ್ಟಿರುವ ಈ ಚಿತ್ರ ಜುಲೈ 28ರಂದು (lgm let’s get married release date) ತೆರೆ ಕಾಣುತ್ತಿದೆ. ಫ್ಯಾಮಿಲಿ ಎಂಟರ್ಟೇನರ್ ಕಥಾಹಂದರ ಹೊಂದಿರುವ ಸಿನಿಮಾವನ್ನು ಅಥರ್ವ- ದಿ ಒರಿಜಿನ್ ಎಂಬ ಹೊಸ ಯುಗದ ಕಾದಂಬರಿ ಬರೆದಿರುವ ರಮೇಶ್ ತಮಿಳ್‌ಮಣಿ ಈ ಚಲನಚಿತ್ರವನ್ನು ನಿರ್ದೇಶಿಸಲಿದ್ದಾರೆ. ನಾಯಕ ಹರೀಶ್ ಕಲ್ಯಾಣ್, ನಾಯಕಿ ಇವಾನಾ ನಟಿಸಿದ್ದು, ಹಿರಿಯ ನಟಿ ನದಿಯಾ, ಯೋಗಿ ಬಾಬು ಮತ್ತು ಆರ್‌ಜೆ ವಿಜಯ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.