Site icon Vistara News

IPL 2024 : ಪಂಜಾಬ್​ ಕಿಂಗ್ಸ್​ ತಂಡಕ್ಕೆ ಇಕ್ಕಟ್ಟು ; ಹರಿಯಾಣ ಕೋರ್ಟ್​ನಲ್ಲಿ ಬಿತ್ತು ಕೇಸು

IPL 2024

ಮೊಹಾಲಿ : ಮೊಹಾಲಿಯ ಮುಲ್ಲಾನ್​ಪುರ ಮಹಾರಾಜ ಯಾದವೀಂದ್ರ ಸಿಂಗ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಐಪಿಎಲ್​ 2024 (IPL 2024) ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಇತರ ಸಂಬಂಧಿತ ವ್ಯಕ್ತಿಗಳಿಗೆ ನಿರ್ಬಂಧಿಸುವಂತೆ ಕೋರಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​​ನಲ್ಲಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ದಾಖಲಾಗಿದೆ. ವಕೀಲೆ ಸುನಯನಾ ಅವರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. 41 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಮತ್ತು 33,000 ಆಸನ ಸಾಮರ್ಥ್ಯವನ್ನು ಹೊಂದಿರುವ ಕ್ರೀಡಾಂಗಣವನ್ನು 2021 ರಲ್ಲಿ ನಿರ್ಮಿಸಲಾಗಿದೆ. ಇದು ಅಕ್ರಮ ಎಂದು ವಕೀಲರು ಅರ್ಜಿ ಹೂಡಿದ್ದಾರೆ. ಅಂದ ಹಾಗೆ ಇದು ಪಂಜಾಬ್​ ಕಿಂಗ್ಸ್ ತಂಡಕ್ಕೆ ತವರು ಮೈದಾನವಾಗಿದೆ. ಹೀಗಾಗಿ ಆ ತಂಡದ ಯೋಜನೆಗಳಿಗೆ ಸಮಸ್ಯೆಯಾಗಬಹುದು.

ಅದೇ ರೀತಿ ಕಾನೂನು ವಿದ್ಯಾರ್ಥಿ ನಿಖಿಲ್ ಎಂಬುವರು ತಮ್ಮ ಪಿಐಎಲ್​ ಅರ್ಜಿಯಲ್ಲಿ ಪಂಜಾಬ್ ರಾಜ್ಯ ಸರ್ಕಾರ ಮತ್ತು ಇತರ ಪ್ರತಿವಾದಿಗಳನ್ನು ಗುರಿಯಾಗಿಸಿಕೊಂಡು, ಕ್ರೀಡಾಂಗಣದ ನಿರ್ಮಾಣವು “ಅನಧಿಕೃತ” ಎಂದು ಪ್ರತಿಪಾದಿಸಿದ್ದಾರೆ. ಈ ನಿರ್ಮಾಣವು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿದ 2006 ರ ಪರಿಸರ ಪರಿಣಾಮ ಮೌಲ್ಯಮಾಪನ ಅಧಿಸೂಚನೆಯನ್ನು ಸ್ಪಷ್ಟವಾಗಿ ಉಲ್ಲಂಘಿಸಿದೆ ಎಂದು ಅವರು ಹೇಳಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972 ರ ಅಡಿಯಲ್ಲಿ ನಿರ್ಮಾಣ ಮಾಡಿರುವ ಅಧಿಕಾರಿಗಳು ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅನುಮತಿ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ. ವಿಶೇಷವೆಂದರೆ, ಅವರ ಪಿಐಎಲ್ ಪ್ರಕಾರ, ಈ ಯೋಜನೆಯು ಚಂಡೀಗಢದ ಸೆಕ್ಟರ್ 21 ರ ಪಕ್ಷಿಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡಿದೆ.

ಟಿಕೆಟ್ ಮಾರದಂತೆ ಕೋರಿಕೆ

ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಪಂದ್ಯಗಳನ್ನು ಆಯೋಜಿಸದಂತೆ ಮತ್ತು ಬಿಸಿಸಿಐ-ಪಿಸಿಎ ಸಂಸ್ಥೆಯನ್ನು ನಿಷೇಧಿಸುವಂಥೆ ಅರ್ಜಿದಾರರು ಕೋರಿದ್ದಾರೆ. ಇದಲ್ಲದೆ, ಐಪಿಎಲ್​​ ಪಂದ್ಯದ ಟಿಕೆಟ್​​ಗಳನ್ನು ಮಾರಾಟ ಮಾಡದಂತೆ ಬಿಸಿಸಿಐ ತಕ್ಷಣ ತಡೆಯಾಜ್ಞೆ ನೀಡುವಂತೆಯೂ ಅವರು ಕೋರಿದ್ದಾರೆ. ಐಪಿಎಲ್ 2024 ರಲ್ಲಿ ಪಂಜಾಬ್ ಕಿಂಗ್ಸ್ ತನ್ನ ಮೊದಲ ಪಂದ್ಯವನ್ನು ಮಾರ್ಚ್ 23 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಮುಲ್ಲಾನ್​​ಪುರ ಕ್ರೀಡಾಂಗಣದಲ್ಲಿ ಆಡಿತು.

ಅರ್ಜಿದಾರರ ಪ್ರಕಾರ, ಸೆಪ್ಟೆಂಬರ್ 14, 2006 ರ ಅಧಿಸೂಚನೆಯು 1.5 ಲಕ್ಷ ಚದರ ಮೀಟರ್ ಗಿಂತ ಹೆಚ್ಚಿನ ನಿರ್ಮಾಣ ಪ್ರದೇಶದ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಪರಿಸರ ಅನುಮತಿ ಪಡೆಯಬೇಕು. ಮಾರ್ಚ್ 15, 2011 ರಂದು ಪರಿಸರ ಮತ್ತು ಅರಣ್ಯ ಸಚಿವಾಲಯ ಹೊರಡಿಸಿದ ಸೂಚನೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಯೋಜನೆಯ ಸ್ಥಳವು ಪರಿಸರ ಸೂಕ್ಷ್ಮ ವಲಯದೊಳಗೆ ಅಥವಾ ಅದರ 10 ಕಿ.ಮೀ ವ್ಯಾಪ್ತಿಯಲ್ಲಿದ್ದರೆ ಬಳಕೆದಾರ ಏಜೆನ್ಸಿಯು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಯಿಂದ ಪೂರ್ವಾನುಮತಿ ಪಡೆಯಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: IPL 2024 : ಮುಂಬಯಿ – ಡೆಲ್ಲಿ​ ಪಂದ್ಯದಲ್ಲಿ ಸೃಷ್ಟಿಯಾದ ಕೆಲವು ದಾಖಲೆಗಳ ವಿವರ ಇಲ್ಲಿದೆ

” ಕೇಂದ್ರಾಡಳಿತ ಪ್ರದೇವಾಗಿರುವ ಚಂಡೀಗಢದ ಎರಡು ವನ್ಯಜೀವಿ ಅಭಯಾರಣ್ಯಗಳ ಸುತ್ತಲೂ ಯಾವುದೇ ಪರಿಸರ ಸೂಕ್ಷ್ಮ ವಲಯವನ್ನು ಘೋಷಿಸಲಾಗಿಲ್ಲ. ಆದ್ದರಿಂದ, ಸೆಕ್ಟರ್ 21 ರ ಚಂಡೀಗಢ ನಗರ ಪಕ್ಷಿಧಾಮ ಮತ್ತು ಸುಖ್ನಾ ವನ್ಯಜೀವಿ ಅಭಯಾರಣ್ಯದ ಗಡಿಯ 10 ಕಿ.ಮೀ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಯೋಜನೆಗಳು ಪರಿಸರ ಅನುಮತಿಯನ್ನು ಪಡೆಯಬೇಕಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

Exit mobile version