ಸಿಡ್ನಿ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಸಾವಿರಾರು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಭಾರತ ಹಾಗೂ ಆಸ್ಟ್ರೇಲಿಯಾ ಹೇಗೆ ಹಲವು ವಿಷಯಗಳಲ್ಲಿ ಸಾಮ್ಯತೆ ಹೊಂದಿದೆ, ಹೇಗೆ ಎರಡೂ ದೇಶಗಳ ಸಂಬಂಧ ವಿವಿಧ ವಿಷಯಗಳಿಂದ ಗಟ್ಟಿಯಾಗಿದೆ ಎಂಬುದನ್ನು ವಿವರಿಸಿದರು. ಹಾಗೆಯೇ, ಅವರು ಕ್ರಿಕೆಟ್ ಹಾಗೂ ಶೇನ್ ವಾರ್ನ್ ಬಗ್ಗೆ ಪ್ರಸ್ತಾಪಿಸಿದರು.
“ಭಾರತ ಹಾಗೂ ಆಸ್ಟ್ರೇಲಿಯಾ ಸಂಬಂಧ ಹಲವು ವಿಚಾರಗಳಿಂದ ಗಟ್ಟಿಯಾಗಿದೆ. ಯೋಗ, ಕ್ರಿಕೆಟ್, ಸಿನಿಮಾ, ಕುಕ್ಕಿಂಗ್ ಶೋ ಮಾಸ್ಟರ್‌ಶೆಫ್ ಸೇರಿ ವಿವಿಧ ವಿಚಾರಗಳಿಂದ ಎರಡೂ ದೇಶಗಳ ಸಂಬಂಧ ವೃದ್ಧಿಯಾಗಿದೆ. ಆಸ್ಟ್ರೇಲಿಯಾ ಕ್ರಿಕೆಟಿಗ ಶೇನ್ ವಾರ್ನ್ ಅವರು ನಿಧನರಾದಾಗ ಭಾರತದ ಕೋಟ್ಯಂತರ ಜನ ಸಂತಾಪ ಸೂಚಿಸಿದರು. ಭಾರತ ಹಾಗೂ ಆಸ್ಟ್ರೇಲಿಯಾ ಕ್ರಿಕೆಟ್ ಸಂಬಂಧ 75 ವರ್ಷಗಳಿಂದ ಇದೆ. ಅದಕ್ಕಾಗಿಯೇ ಶೇನ್ ವಾರ್ನ್ ಅವರು ನಿಧನರಾದಾಗ ಭಾರತದ ನಾಗರಿಕರು ಕಂಬನಿ ಮಿಡಿದರು” ಎಂದು ಸ್ಮರಿಸಿದರು. ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಶೇನ್ ವಾರ್ನ್ ಅವರು 2022ರ ಮಾರ್ಚ್ 4ರಂದು ನಿಧನರಾದರು.
ಮೂರು ‘ಸಿ’ ‘ಡಿ’ ಹಾಗೂ ‘ಇ’ಗಳೊಂದಿಗೆ ಭಾರತ-ಆಸ್ಟ್ರೇಲಿಯಾ ನಂಟು
ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸಂಬಂಧದ ಕುರಿತು ಕೂಡ ನರೇಂದ್ರ ಮೋದಿ ಪ್ರಸ್ತಾಪಿಸಿದರು. “ಮೂರು ‘ಸಿ’ಗಳು ಭಾರತ ಹಾಗೂ ಆಸ್ಟ್ರೇಲಿಯಾ ನಂಟು ಗಟ್ಟಿಯಾಗಿದೆ. ಕ್ರಿಕೆಟ್, ಕರಿ ಹಾಗೂ ಕ್ರಿಕೆಟ್‌ನೊಂದಿಗೆ ಉಭಯ ರಾಷ್ಟ್ರಗಳು ಉತ್ತಮ ಸಂಬಂಧ ಹೊಂದಿದೆ” ಎಂದು ಹೇಳಿದರು. ಹಾಗೆಯೇ, ಡೆಮಾಕ್ರಸಿ, ಡಯಸ್ಪೋರಾ ಹಾಗೂ ದೋಸ್ತಿ ಎಂಬ ಮೂರು ‘ಡಿʼ, ಎನರ್ಜಿ, ಎಕಾನಮಿ ಹಾಗೂ ಎಜುಕೇಷನ್ ಎಂಬ ಮೂರು ‘ಇ’ಗಳೊಂದಿಗೆ ಎರಡೂ ದೇಶಗಳ ಸಂಬಂಧ ಗಟ್ಟಿಯಾಗಿದೆ ಎಂದು ಕೂಡ ತಿಳಿಸಿದರು.
ಇದನ್ನೂ ಓದಿ: Narendra Modi: ಮೋದಿಯನ್ನು ಬಾಸ್ ಎಂದ ಆಸ್ಟ್ರೇಲಿಯಾ ಪ್ರಧಾನಿ; ಅಮೆರಿಕ ರಾಕ್‌ಸ್ಟಾರ್ ಜನಪ್ರಿಯತೆಗೆ ಹೋಲಿಕೆ
ಜನರನ್ನು ಮೋಡಿ ಮಾಡಿದ ಮೋಡಿ
ಸ್ಟೇಡಿಯಂನಲ್ಲಿ ಮೋದಿ ಭಾಷಣವು ಮೋಡಿ ಮಾಡಿತು. ಇಡೀ ಅನಿವಾಸಿ ಭಾರತೀಯರನ್ನು ಒಳಗೊಳ್ಳಿಸುವ ಮೂಲಕ ಎಲ್ಲರನ್ನೂ ಮಂತ್ರಮುಗ್ಧಗೊಳಿಸಿದರು. “ಜಗತ್ತಿನಲ್ಲೇ ಹಾಲಿನ ಉತ್ಪಾದನೆಯಲ್ಲಿ ನಂಬರ್ ಒನ್ ಇದೆ, ಅದು ಯಾವ ದೇಶ” ಎಂದು ಪ್ರಶ್ನಿಸಿದರು. ಆಗ ಎಲ್ಲರೂ ಇಂಡಿಯಾ ಇಂಡಿಯಾ ಎಂದು ಘೋಷಣೆ ಕೂಗಿದರು. ಹಾಗೆಯೇ, ಮೊಬೈಲ್ ಉತ್ಪಾದನೆಯಲ್ಲಿ ಎರಡನೇ ಸ್ಥಾನ, ಸ್ಟಾರ್ಟಪ್ ಎಕೋ ಸಿಸ್ಟಂನಲ್ಲಿ ನಂಬರ್ ಒನ್ ಸೇರಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದಾಗಲೂ ಜನ ಇಂಡಿಯಾ ಇಂಡಿಯಾ ಎಂದು ಘೋಷಿಸಿದರು.