ಸನತ್ ರೈ, ಬೆಂಗಳೂರು
ನಾನು ರಾಹುಲ್ ದ್ರಾವಿಡ್ (Rahul Dravid) ಅವರ ಅಪ್ಪಟ ಅಭಿಮಾನಿಯೇನಲ್ಲ. ಆದ್ರೂ ಜಾಮಿ ಬಗ್ಗೆ ಆಗಾಧವಾದ ಪ್ರೀತಿ ಇದೆ. ಅವರ ಕಲಾತ್ಮಕ ಆಟದ ಶೈಲಿಗಂತೂ ಮನಸೋತಿದೆ. ಆಟದ ಮೇಲಿನ ಪ್ರೀತಿ, ಆಕರ್ಷಣೆ, ಬದ್ಧತೆ, ತಾಳ್ಮೆ, ಸ್ಥಿರತೆ, ಶಿಸ್ತು, ಏಕಾಗ್ರತೆ, ಕಲಿಯುವ ಹಂಬಲ, ಪ್ಲ್ಯಾನಿಂಗ್, ಟ್ಯಾಕ್ಟಿಕ್ಸ್, ಸ್ಟ್ರಾಟೆಜಿ ಹೀಗೆ ಕ್ರಿಕೆಟ್ ಆಟವನ್ನು ಪರಿಪೂರ್ಣವಾಗಿ ಪರವಶಮಾಡಿಕೊಂಡವರು ನಮ್ಮ ದಿ ವಾಲ್..
ಆದ್ರೆ ಒಬ್ಬ ಆಟಗಾರನಾಗಿ, ನಾಯಕನಾಗಿ ಅವರ ಕ್ರಿಕೆಟ್ ಬದುಕು ಪರಿಪೂರ್ಣತೆಯನ್ನು ಪಡೆದುಕೊಂಡಿರಲಿಲ್ಲ. ದಿ ಇಂಡಿಯನ್ ಗ್ರೇಟ್ ವಾಲ್, ಕ್ರಿಕೆಟ್ ಬುದ್ಧ.. ಅಪತ್ಭಾಂದವ..ಸೈಲೆಂಟ್ ಕಿಲ್ಲರ್ ಬಿರುದುಗಳು ಅವರ ಹೆಸರಿಗೆ ಅಂಟಿಕೊಂಡಿದ್ದವು. ಹಾಗೇ ನಿಧಾನಗತಿಯ ಬ್ಯಾಟಿಂಗ್‍ನಿಂದಾಗಿ ಹಲವಾರು ಟೀಕೆಗಳಿಗೂ ಗುರಿಯಾಗಿದ್ದರು. ಆದ್ರೆ ದ್ರಾವಿಡ್ ಯಾವತ್ತೂ ಯಾವುದಕ್ಕೂ ಉತ್ತರ ನೀಡುತ್ತಿರಲಿಲ್ಲ. ಬದಲಾಗಿ ತನ್ನ ಬ್ಯಾಟ್‍ನಿಂದಲೇ ಎಲ್ಲರ ಬಾಯಿ ಮುಚ್ಚಿಸುತ್ತಿದ್ದರು. ಇದು ದ್ರಾವಿಡ್ ಅವರ ಜಾಯಮಾನವಾಗಿತ್ತು. ಕ್ರಿಕೆಟ್ ಬದುಕಿನಲ್ಲಿ ಅಂದೂ.. ಇಂದೂ ರೂಢಿಸಿಕೊಂಡು ಬಂದಿರುವ ಪದ್ಧತಿಯೂ ಹೌದು.
ತಂಡಕ್ಕಾಗಿ ಸರ್ವಸ್ಸವನ್ನೇ ತ್ಯಾಗ ಮಾಡಿದ ತ್ಯಾಗಿ..!
1996ರಿಂದ 2012ರವರೆಗೆ ಟೀಮ್ ಇಂಡಿಯಾದ ಹಲವು ಐತಿಹಾಸಿಕ ಗೆಲುವಿನಲ್ಲಿ ರಾಹುಲ್ ದ್ರಾವಿಡ್ ಪ್ರಮುಖ ಪಾತ್ರ ವಹಿಸಿದವರು. ಅದು ಆಸ್ಟ್ರೇಲಿಯಾ ವಿರುದ್ಧದ ಈಡನ್ ಗಾರ್ಡನ್ ಟೆಸ್ಟ್ ಪಂದ್ಯದ ರಣರೋಚಕ ಟೆಸ್ಟ್ ಗೆಲುವು ಆಗಿರಬಹುದು, ಅಂತದ್ದೇ ಹತ್ತು ಹಲವು ಪಂದ್ಯಗಳಿರಬಹುದಯ; ಧೋನಿ ಟೀಮ್ ಇಂಡಿಯಾದೊಳಗೆ ಬರುವುದಕ್ಕಿಂತ ಮುನ್ನ ವಿಕೆಟ್ ಕೀಪರ್ ಜವಾಬ್ದಾರಿಯನ್ನು ನಿಭಾಯಿಸಿದವರು ನಮ್ಮ ರಾಹುಲ್. ಮಧ್ಯಮ ಕ್ರಮಾಂಕದಲ್ಲಿ ಟೀಮ್ ಇಂಡಿಯಾದ ಗೋಡೆಯೂ ಆಗಿದ್ದರು. ಹೀಗೆ ತಂಡದ ಹಿತಕ್ಕಾಗಿ ಒಂಚೂರು ಸ್ವಾರ್ಥವಿಲ್ಲದೆ ಸರ್ವಸ್ವವನ್ನು ತ್ಯಾಗ ಮಾಡಿದ್ದ ಕ್ರಿಕೆಟ್ ಜಗತ್ತಿನ ಬುದ್ಧ ನಮ್ಮ ರಾಹುಲ್ ದ್ರಾವಿಡ್.
ರಾಹುಲ್ ಮೂರು ವಿಶ್ವಕಪ್ ಟೂರ್ನಿಗಳನ್ನು ಆಡಿದ್ದಾರೆ. ಆಟಗಾರನಾಗಿ 1999ರ ವಿಶ್ವಕಪ್‍ನಲ್ಲೂ ನಿರಾಸೆ ಅನುಭವಿಸಿದ್ದರು. ಉಪನಾಯಕನಾಗಿ 2003ರ ವಿಶ್ವಕಪ್‍ನಲ್ಲಿ ಕೈಗೆ ಬಂದಿದ್ದ ಟ್ರೋಫಿ ಕೊನೆ ಹಂತದಲ್ಲಿ ಕೈಜಾರಿತ್ತು. ಇನ್ನೂ ನಾಯಕನಾಗಿ 2007ರ ವಿಶ್ವಕಪ್ ಟೂರ್ನಿಯನ್ನು ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದರು. ಸಾಕಷ್ಟು ನಿರೀಕ್ಷೆಯನ್ನಿಟ್ಟುಕೊಂಡಿದ್ದ ರಾಹುಲ್ ಹುಡುಗರು ಲೀಗ್‍ನಲ್ಲಿ ಮುಖಭಂಗ ಅನುಭವಿಸಿದ್ದರು. ಹೀಗಾಗಿ ಸೋಲಿನ ಹೊಣೆ ಹೊತ್ತು ನಾಯಕತ್ವ ಸ್ಥಾನವನ್ನೇ ತ್ಯಜಿಸಿದ ತ್ಯಾಗ ಮೂರ್ತಿ ನಮ್ಮ ಜಾಮಿ.
ಅಷ್ಟೇ ಅಲ್ಲ, ಆಗಷ್ಟೇ ಪ್ರವರ್ಧಮಾನಕ್ಕೆ ಬಂದಿದ್ದ ಟಿ-20 ಕ್ರಿಕೆಟ್ ಯುವಕರ ಆಟ ಅಂತ ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆಗೆ ಕಾರಣೀಕರ್ತರಾಗಿದ್ದು ಕೂಡ ರಾಹುಲ್ ದ್ರಾವಿಡ್. ಏಕದಿನ ವಿಶ್ವಕಪ್‍ನಲ್ಲಿ ಸೋತು ಸುಣ್ಣವಾಗಿದ್ದ ಟೀಮ್ ಇಂಡಿಯಾಗೆ ಭರವಸೆಯ ಬೆಳಕು ಮೂಡಿಸುವಂತೆ ಮಾಡಿದ್ದು ಕೂಡ ರಾಹುಲ್ ಅವರ ದೂರದೃಷ್ಟಿಯ ಯೋಚನೆ. ವೃತ್ತಿ ಬದುಕಿನ ಕೊನೆಯ ದಿನಗಳಲ್ಲಿ ರಾಹುಲ್ ದ್ರಾವಿಡ್ ಕೇವಲ ಟೆಸ್ಟ್ ಪಂದ್ಯಗಳಿಗೆ ಸೀಮಿತವಾಗಿದ್ದರು. ಹೀಗಾಗಿ 2011ರ ವಿಶ್ವಕಪ್ ಟೂರ್ನಿಯಲ್ಲೂ ರಾಹುಲ್‍ಗೆ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಆದ್ರೂ ರಾಹುಲ್ ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ದೂರದಿಂದಲೇ ಟೀಮ್ ಇಂಡಿಯಾದ ಐತಿಹಾಸಿಕ ಗೆಲುವನ್ನು ನೋಡಿ ಖುಷಿಪಟ್ಟಿದ್ದರು.
ಸಂಕಷ್ಟದ ಸನ್ನಿವೇಶದಲ್ಲಿ ಏಕಾಂಗಿಯಾಗಿ ನಿಂತು ಟೀಮ್ ಇಂಡಿಯಾದ ಮರ್ಯಾದೆ ಕಾಪಾಡಿದ್ದ ರಾಹುಲ್ ದ್ರಾವಿಡ್ ಅವರನ್ನು ಬಿಸಿಸಿಐ ಸರಿಯಾಗಿ ನಡೆಸಿಕೊಳ್ಳಲಿಲ್ಲ. ವಿಶ್ವ ಕ್ರಿಕೆಟ್‍ನ ಮಹಾನ್ ಆಟಗಾರನಿಗೆ ಒಂದು ವಿದಾಯದ ಪಂದ್ಯವನ್ನು ಆಯೋಜನೆ ಮಾಡಲಿಲ್ಲ. ಸಚಿನ್, ಗಂಗೂಲಿ, ಅನಿಲ್ ಕುಂಬ್ಳೆಗೆ ಸಿಕ್ಕ ಗೌರವ ರಾಹುಲ್‍ಗೆ ಸಿಗಲೇ ಇಲ್ಲ. ಅಷ್ಟೇ ಯಾಕೆ, ಟೀಮ್ ಇಂಡಿಯಾ ಆಟಗಾರರು ಕೂಡ ಜಾಮಿಗೆ ಗೆಲುವಿನೊಂದಿಗೆ ವಿದಾಯ ಹೇಳಲಿಲ್ಲ. ಇಂಗ್ಲೆಂಡ್ ವಿರುದ್ಧ 2011ರಲ್ಲಿ ಟಿ-20 ಮತ್ತು ಏಕದಿನ ಪಂದ್ಯಗಳಿಗೆ ಸೋಲಿನೊಂದಿಗೆ ವಿದಾಯ ಹೇಳಿದ್ರು. ಹಾಗೇ ಆಸ್ಟ್ರೇಲಿಯಾ ವಿರುದ್ಧ 2012ರಲ್ಲಿ ಟೆಸ್ಟ್ ಕ್ರಿಕೆಟ್‍ಗೂ ಸೋಲಿನೊಂದಿಗೆ ತನ್ನ 16 ವರ್ಷಗಳ ಕ್ರಿಕೆಟ್ ಬದುಕಿಗೆ ಗುಡ್‍ಬೈ ಹೇಳಿದ್ರು.
ಚೆಂಡಿನಲ್ಲಿ ನೂಲಿನಂತೆ ಗೆರೆ ಎಳೆಯುವ ಕಲಾಕಾರ..!
ಅದೇನೇ ಇರಲಿ, ರಾಹುಲ್ ದ್ರಾವಿಡ್ ನೋಡೋಕೆ ಸೌಮ್ಯ ಸ್ವಭಾವದವರು. ಎಂದೂ ಕೂಡ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಒಂದು ವೇಳೆ ತಾಳ್ಮೆ ಕಳೆದುಕೊಂಡ್ರೆ ಮೈದಾನದಲ್ಲಿ ರೌದ್ರವತಾರದ ಇನ್ನೊಂದು ಮುಖವನ್ನು ನೋಡಿದ್ದೇವೆ. ಆದ್ರೆ ಇವತ್ತಿಗೂ ರಾಹುಲ್ ದ್ರಾವಿಡ್ ಅಂದ ತಕ್ಷಣ ಕಣ್ಣ ಮುಂದೆ ಬರೋದು ಅವರ ಕಲಾತ್ಮಕ ಶೈಲಿಯ ಬ್ಯಾಟಿಂಗ್ ವೈಖರಿ. ಅದು ಶೋಯಿಬ್ ಅಖ್ತರ್, ಬ್ರೇಟ್ ಲೀ ಸೇರಿದಂತೆ ಘಾತಕ ವೇಗಿಗಳ ಬೆಂಕಿ ಎಸೆತಗಳಿಗೆ ತಲೆ ತಗ್ಗಿಸಿ ತನ್ನ ಕಾಲ ಬುಡದಲ್ಲಿ ನಿಲ್ಲಿಸುವಂತಹ ಸಾಮಥ್ರ್ಯ ಇರೋ ಏಕೈಕ ವಿಶ್ವದ ಬ್ಯಾಟ್ಸ್‍ಮೆನ್ ಅಂದ್ರೆ ಅದು ರಾಹುಲ್ ದ್ರಾವಿಡ್. ಇನ್ನು, ದ್ರಾವಿಡ್ ಅವರ ಬ್ಯಾಟ್‍ನ ಸ್ಪರ್ಶಕ್ಕೆ ಚೆಂಡು ನೂಲಿನಲ್ಲಿ ಗೆರೆ ಎಳೆದಂತೆ ಬೌಂಡರಿ ಲೈನ್ ದಾಟುವುದನ್ನು ನೋಡುವುದೇ ಒಂದು ಚೆಂದ. ‘ನೋಡಲೆರಡು ಕಂಗಳು ಸಾಲದು’ ಅಂತರಲ್ಲ, ಹಾಗೇ ಮತ್ತೆ ಮತ್ತೆ ನೋಡಬೇಕು ಅನ್ನಿಸುವಂತಿರುವ ಕಲಾತ್ಮಕ ತಾಂತ್ರಕ ಪರಿಪೂರ್ಣತೆಯ ಬ್ಯಾಟಿಂಗ್ ವೈಖರಿ ನಮ್ಮ ರಾಹುಲ್ ಬಾಬಾರದ್ದು.
ಇದನ್ನೂ ಓದಿ: IND vs ZIM: ಜಿಂಬಾಬ್ವೆ ಟಿ20 ಸರಣಿಗೆ ಭಾರತ ತಂಡಲ್ಲಿ ದಿಢೀರ್ ಬದಲಾವಣೆ ಮಾಡಿದ ಬಿಸಿಸಿಐ
ರಾಹುಲ್ ದ್ರಾವಿಡ್ ಬದುಕಿನಲ್ಲಿ ಅಳವಡಿಸಿಕೊಂಡಿದ್ದ ಶಿಸ್ತು ಮತ್ತು ಬದ್ಧತೆ ಯುವ ಕ್ರಿಕೆಟಿಗರಿಗೆ ದಾರಿದೀಪ. ಅದಕ್ಕೆ ಸಾಕಷ್ಟು ನಿದರ್ಶನಗಳಿವೆ. ಅದರಲ್ಲಿ ಇದೊಂದು ಸಣ್ಣ ನಿದರ್ಶನ. ಒಂದು ಬಾರಿ ಕಾಲೇಜ್ ಕ್ಲಾಸ್ ರೂಂನಲ್ಲಿ ರಾಹುಲ್ ದ್ರಾವಿಡ್ ಕೈಗೆ ಗ್ಲೌಸ್ ಹಾಕೊಂಡು ಬರೆಯುತ್ತಿದ್ದರು. ದ್ರಾವಿಡ್ ಅವರ ವಿಚಿತ್ರ ವರ್ತನೆ ಗೆಳೆಯರಿಗೂ ಅಚ್ಚರಿಯನ್ನುಂಟು ಮಾಡಿತ್ತಂತೆ. ಆದ್ರೆ ಇದಕ್ಕೆ ಕಾರಣ ಕೇಳಿದಾಗ ಯಾರಿಗೂ ಕೂಡ ನಗುಬರಬಹುದು. ಯಾಕಂದ್ರೆ ಬ್ಯಾಟ್‍ನ ಗ್ರಿಪ್ ಪಡೆದುಕೊಳ್ಳಲು ದ್ರಾವಿಡ್ ಈ ತಂತ್ರವನ್ನು ಬಳಸುತ್ತಿದ್ದರಂತೆ. ಹೀಗೆ ದ್ರಾವಿಡ್ ಬಗ್ಗೆ ಹಲವಾರು ಸ್ವಾರಸ್ಯಕರವಾದ ಘಟನೆಗಳಿವೆ.
ಟೀಮ್ ಇಂಡಿಯಾದ ಮಾಜಿ ಆಟಗಾರ ಮಹಾ ಗುರು ಆಗಿದ್ದೇಗೆ..?
ಇನ್ನು, ವೃತ್ತಿಪರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ನಂತ್ರ ದ್ರಾವಿಡ್ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಮನಸು ಮಾಡಿದ್ರೆ ವೀಕ್ಷಕ ವಿವರಣೆಕಾರನಾಗಬಹುದಿತ್ತು.. ತನ್ನದೇ ಕ್ರಿಕೆಟ್ ಅಕಾಡೆಮಿ ಕೂಡ ಶುರು ಮಾಡಬಹುದಿತ್ತು. ಆದ್ರೆ ದ್ರಾವಿಡ್ ಉದ್ದೇಶವೇ ಬೇರೆ ಇತ್ತು. ದೇಶದ ಯುವ ಕ್ರಿಕೆಟಿಗರ ಪ್ರತಿಭೆಯನ್ನು ಬೆಳಕಿಗೆ ತರುವಂತಹ ದೂರದೃಷ್ಟಿಯನ್ನು ಹೊಂದಿದ್ದರು. ಬಲಿಷ್ಠ ಟೀಮ್ ಇಂಡಿಯಾ ಕಟ್ಟುವಂತಹ ಮಹೋನ್ನತ ಕಾರ್ಯಕ್ಕೆ ದ್ರಾವಿಡ್ ಮುಂದಾದ್ರು. ಅದಕ್ಕೆ ಪೂರಕವಾಗಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ನಿದೇರ್ಶಕನಾದ್ರು. ಬಳಿಕ 19 ವಯೋಮಿತಿ ತಂಡದ ಕೋಚ್ ಆಗಿ ವಿಶ್ವಕಪ್ ಕೂಡ ಗೆಲ್ಲಿಸಿಕೊಂಡು ಬಂದ್ರು. ಆದಾದ ನಂತ್ರ ಭಾರತ ಎ ತಂಡದ ಕೋಚ್ ಆಗಿ ಭವಿಷ್ಯದ ಟೀಮ್ ಇಂಡಿಯಾಗೆ ಫೌಂಡೇಶನ್ ಕಟ್ಟುವ ಕಾರ್ಯದಲ್ಲಿ ನಿರತರಾದ್ರು. ನಮ್ಮ ಕಣ್ಣ ಮುಂದೆ ಸಾಲು ಸಾಲಾಗಿ ಸಮರ್ಥ ಟೀಮ್ ಇಂಡಿಯಾದ ಯುವ ಪಡೆ ನಿಂತಿದೆ ಅಂದ್ರೆ ಅದಕ್ಕೆ ಮೂಲ ಕಾರಣ ಜಾಮಿ. ಯುವ ಆಟಗಾರರಿಗೆ ಶಿಸ್ತು, ಬದ್ಧತೆಯನ್ನು ಹೇಳಿಕೊಟ್ಟ ಹೆಡ್ ಮಾಸ್ಟರ್ ಕೂಡ ಹೌದು ರಾಹುಲ್.
ಸರಿಯಾಗಿ ಮೂರು ವರ್ಷಗಳ ಹಿಂದೆ ದ್ರಾವಿಡ್ ದ್ರಾವಿಡ್ ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿ ನೇಮಕಗೊಂಡ್ರು. ಸುಮಾರು 9-10 ವರ್ಷಗಳ ನಂತ್ರ ಟೀಮ್ ಇಂಡಿಯಾದ ಗರ್ಭಗುಡಿಯೊಳಗೆ ಮಹಾಗುರುವಾಗಿ ಪ್ರವೇಶಿಸಿದ್ರು. ತಂಡದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮಾತ್ರ ದ್ರಾವಿಡ್ ಜೊತೆ ಆಡಿದ್ದರು. ಇನ್ನುಳಿದವರು ಅನುಭವ ಮಾಗದ ಎಳೆತನದ ಯುವ ಆಟಗಾರರು. ದ್ರಾವಿಡ್ ಎಂಟ್ರಿಯಾಗುತ್ತಿದ್ದಂತೆ ತಂಡದಲ್ಲಿ ಕೆಲವೊಂದು ಬದಲಾವಣೆಗಳು ಕೂಡ ಆಗಿದ್ದವು. ರೋಹಿತ್ ಶರ್ಮಾ ಹೆಗಲಿಗೆ ನಾಯಕತ್ವವೂ ಒಲಿದು ಬಂತು. ಹಾಗೇ ನಾಯಕನ ಜೊತೆ ಸೇರಿಕೊಂಡು ಮೂರು ವರ್ಷಗಳ ಪ್ಲ್ಯಾನ್ ಕೂಡ ರೆಡಿಯಾಗಿತ್ತು. ‘ಮಿಷನ್ ಐಸಿಸಿ ಟ್ರೋಫಿ’ ಗೆಲ್ಲಲು ಸೈನ್ಯ ಕಟ್ಟುವ ಕೆಲಸಕ್ಕೆ ಮುಂದಾದ್ರು. ಪ್ರತಿ ಸರಣಿಗಳಲ್ಲೂ ಪ್ರಯೋಗ ಮಾಡಿದ್ರು. ಯುವ ಆಟಗಾರರಿಗೆ ಅವಕಾಶಗಳನ್ನು ನೀಡಿದ್ರು. ಪ್ರತಿ ಆಟಗಾರನ ಸಾಮಥ್ರ್ಯವನ್ನು ಅರಿತುಕೊಂಡ್ರು. ಆದ್ರೆ 2023ರ ವಿಶ್ವ ಟೆಸ್ಟ್ ಚಾಂಪಿಯನ್‍ಷಿಪ್ ಮತ್ತು ಏಕದಿನ ವಿಶ್ವಕಪ್ ಫೈನಲ್‍ನಲ್ಲಿ ಸೋತಾಗ ಮಂಕಾಗಿದ್ದು ನಿಜ. ಆದ್ರೆ ಆತ್ಮವಿಶ್ವಾಸವನ್ನು ಕಳೆದುಕೊಳ್ಳಲಿಲ್ಲ. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಆಟಗಾರರ ಮನಸ್ಥಿತಿಯನ್ನು ಅರಿತುಕೊಂಡು ಮತ್ತೆ ಪ್ರೇರಣೆ ನೀಡಿದ್ದು ಕೂಡ ಮಹಾ ಗುರು ರಾಹುಲ್ ದ್ರಾವಿಡ್.
ಮಿಷನ್ ಟಿ-20 ವಿಶ್ವಕಪ್ -2024 ಕಂಪ್ಲೀಟ್…
ಹಾಗೇ ನೋಡಿದ್ರೆ 2024ರ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಗೆದ್ದೇ ಗೆಲ್ಲುತ್ತೆ ಅನ್ನೋ ನಂಬಿಕೆ ಬಹುತೇಕ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಇರಲಿಲ್ಲ. ಯಾಕಂದ್ರೆ 13 ವರ್ಷಗಳಿಂದ ಟೀಮ್ ಇಂಡಿಯಾ ಆಟಗಾರರು ಸತತವಾಗಿ ತಮ್ಮ ಮೇಲಿಟ್ಟಿದ್ದ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದರು. ಹೀಗಾಗಿ ಫೈನಲ್‍ಗೆ ಬರಬಹುದು ಎಂಬ ಲೆಕ್ಕಾಚಾರವಂತೂ ಇದ್ದೇ ಇತ್ತು. ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನೆಲದಲ್ಲಿ ದ್ರಾವಿಡ್ ಶಿಷ್ಯಂದಿರು ನಿರೀಕ್ಷಿತ ಪ್ರದರ್ಶನವನ್ನೇ ನೀಡಿದ್ರು. ಟೀಮ್ ಇಂಡಿಯಾ ಆಡಿರುವ ಎಂಟು ಪಂದ್ಯಗಳ ಗೆಲುವನ್ನು ನೋಡಿದಾಗ ದಶಕಗಳ ಹಿಂದಿನ ಸ್ಟೀವ್ ವಾ, ಪಾಟಿಂಗ್ ನಾಯಕತ್ವದ ಆಸ್ಟ್ರೇಲಿಯಾ ತಂಡವನ್ನು ನೆನಪಿಸುವಂತಿತ್ತು. ಯಾಕಂದ್ರೆ, ದ್ರಾವಿಡ್ ಶಿಷ್ಯಂದಿರು ಎಲ್ಲೂ ಕೂಡ ‘ಶೃತಿ’ ತಪ್ಪಲಿಲ್ಲ. ಬ್ಯಾಟರ್‍ಗಳು ‘ತಾಳ‘ ತಪ್ಪಿದಾಗ ಬೌಲರ್‍ಗಳು ‘ವೀಣೆ’ ನುಡಿಸುವಂತೆ ಬೌಲಿಂಗ್ ಮಾಡುತ್ತಾ ಗೆಲುವಿನ ದಡ ಸೇರಿಸುತ್ತಿದ್ದರು. ಹಾಗೇ ಬೌಲರ್‍ಗಳು ‘ಲಯ‘ ತಪ್ಪಿದಾಗ ಬ್ಯಾಟರ್‍ಗಳು ‘ಡ್ರಮ್ಸ್‘ ಬಾರಿಸುವಂತೆ ಅಂಗಣದಲ್ಲಿ ದರ್ಬಾರು ಮಾಡಿ ಅಭಿಮಾನಿಗಳಿಗೆ ‘ರಸಮಂಜರಿ’ಯ ಮನರಂಜನೆಯನ್ನು ನೀಡುತ್ತಿದ್ದರು. ಇತ್ತ ಡಕೌಟ್‍ನಲ್ಲಿ ನಿರ್ದೇಶಕ/ ಮಹಾ ಗುರು ರಾಹುಲ್ ದ್ರಾವಿಡ್ ಆಚಾರ್ಯನಂತೆ ಶಿಷ್ಯಂದಿರ ಸಾಧನೆಯನ್ನು ಮನದೊಳಗೆ ಖುಷಿಪಟ್ಟು ಹೆಮ್ಮೆಯಿಂದ ಬೀಗುತ್ತಿದ್ದರು. ಅಷ್ಟೇ ಅಲ್ಲ, ರೋಹಿತ್ ಹುಡುಗರು ಟ್ರೋಫಿ ಸ್ವೀಕರಿಸುವಾಗ ತೆರೆಮರೆಯಲ್ಲಿ ನೋಡುತ್ತಿದ್ದ ದ್ರಾವಿಡ್ ಮುಖದಲ್ಲಿ ಮಿಷನ್ ಟಿ-20 ವಿಶ್ವಕಪ್ ಕಂಪ್ಲೀಟ್ ಮಾಡಿದ ಸಾರ್ಥಕತೆ ಎದ್ದುಕಾಣುತ್ತಿತ್ತು.
ಮತ್ತೆ ಕ್ರಿಕೆಟ್ ಬುದ್ಧ ನಕ್ಕಾಗ… ನಕ್ಕು ನಲಿದಾಡಿದಾಗ…ನಾ ಸೋತು ಹೋದೆ..!
ಹೌದು, ರಾಹುಲ್ ದ್ರಾವಿಡ್ ಟೀಮ್ ಇಂಡಿಯಾ ಸೋತಾಗ ಕಣ್ಣೀರು ಹಾಕಿದ್ದಾರೆ. ವೇದನೆ ಅನುಭವಿಸಿದ್ದಾರೆ. ಹಾಗೇ, ಟೀಮ್ ಇಂಡಿಯಾ ಗೆದ್ದಾಗಲೂ ಸಂಭ್ರಮಪಟ್ಟಿದ್ದಾರೆ. ಆದ್ರೆ ಗೆದ್ದಾಗ ಕಣ್ಣೀರು ಹಾಕಿದ್ದು ಇದೇ ಮೊದಲು.. ಜೊತೆಗೆ ಈ ಪರಿ ಸಂಭ್ರಮಪಟ್ಟಿದ್ದು ಇದೇ ಮೊದಲ ಸಲ. ಈ ರೀತಿ ದ್ರಾವಿಡ್ ಯಾವತ್ತೂ ಸಂಭ್ರಮಪಟ್ಟಿರುವುದನ್ನು ಯಾರು ಕೂಡ ನೋಡಿರಲಿಲ್ಲ. ಯಾಕಂದ್ರೆ ತನಗೆ ಗಗನ ಕುಸುಮವಾಗಿದ್ದ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ತನ್ನ ಶಿಷ್ಯಂದಿರ ಮೂಲಕ ಪಡೆದುಕೊಂಡು ತನ್ನ ಕ್ರಿಕೆಟ್ ಬದುಕನ್ನು ಸಾರ್ಥಕವನ್ನಾಗಿಸಿಕೊಂಡ ಸಂತೃಪ್ತಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ರೋಹಿತ್, ವಿರಾಟ್, ಜಡೇಜಾ ಅವರ ಕಣ್ಣೇದುರೇ ಸೋಲಿನೊಂದಿಗೆ ವಿದಾಯ ಹೇಳಿದ್ದ ದ್ರಾವಿಡ್‍ಗೆ ವಿಶ್ವಕಪ್ ಗೆಲ್ಲುವ ಮೂಲಕ ಮಹಾ ಗುರುವಿಗೆ ಅರ್ಥಪೂರ್ಣ ವಿದಾಯ ಹೇಳುವಂತೆ ಮಾಡಿದವರು ಇದೇ ಕೋಹ್ಲಿ, ಶರ್ಮಾ & ಜಡೇಜಾ.. ಅಷ್ಟೇ ಅಲ್ಲ, ಟೀಮ್ ಇಂಡಿಯಾ ಹುಡುಗರು ದ್ರಾವಿಡ್‍ಗೆ ಟಿ-20 ವಿಶ್ವಕಪ್ ಟ್ರೋಫಿಯನ್ನೇ ಗುರು ಕಾಣಿಕೆಯನ್ನಾಗಿ ನೀಡಿದ್ರು. ಅಲ್ಲದೆ ವಿರಾಟ್, ರೋಹಿತ್ ಸೇರಿದಂತೆ ಟೀಮ್ ಇಂಡಿಯಾ ಹುಡುಗರು ಗುರು ಎಂಬುದನ್ನು ಮರೆತು ದ್ರಾವಿಡ್ ಅವರನ್ನು ಮಗುವಿನಂತೆ ಮೇಲಕ್ಕೆತ್ತಿ ಕೊಂಡಾಟ ಮಾಡಿ ಸಂಭ್ರಮಿಸಿದ ಕ್ಷಣವನ್ನು ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ. ಹಾಗೇ ರೋಹಿತ್ ಮತ್ತು ವಿರಾಟ್‍ನನ್ನು ದ್ರಾವಿಡ್ ತಬ್ಬಿಕೊಂಡು ಮುದ್ದಾಡುತ್ತಿದ್ದ ದೃಶ್ಯವನ್ನು ಯಶಸ್ವಿ ಜೈಸ್ವಾಲ್ ಪುಟ್ಟ ಮಗುವಿನಂತೆ ನೋಡುತ್ತಿದ್ದ ದೃಶ್ಯವಂತೂ ಕಣ್ಣಿಗೆ ಕಟ್ಟುವಂತಿತ್ತು. ಅದರಲ್ಲೂ ವಿರಾಟ್ ಕೊಹ್ಲಿ ವಿಶ್ವಕಪ್ ಟ್ರೋಫಿಯನ್ನು ದ್ರಾವಿಡ್ ಕೈಗಿಟ್ಟಾಗ ಭಾವೋದ್ರಿಕ್ತರಾಗಿ ಒಂದು ಕ್ಷಣ ಸುಮ್ಮನಿದ್ದ ದ್ರಾವಿಡ್, ಏಕಾಏಕಿ ಟ್ರೋಪಿಯನ್ನು ಮೇಲಕ್ಕೆತ್ತಿ ಸಂಭ್ರಮಿಸಿದ ರೀತಿಯನ್ನು ವರ್ಣಿಸಲು ಅಸಾಧ್ಯ. ಟ್ರೋಫಿಯೊಂದಿಗೆ ಮನ ತಣಿಸುವಷ್ಟು ಜಾಮಿ ಸಂಭ್ರಮಿಸಿ, ಕುಣಿದಾಡಿದ್ರು. ಎರಡು ದಶಕಗಳ ನೋವುಗಳನ್ನು ಕೇವಲ ಎರಡು ನಿಮಿಷಗಳಲ್ಲಿ ಮರೆಮಾಚುವಂತೆ ಮಾಡಿ ನಾಚಿ ನೀರಾದ್ರು.
ಒಟ್ಟಿನಲ್ಲಿ ಐಸಿಸಿ ಟಿ-20 ವಿಶ್ವಕಪ್ ಟ್ರೋಫಿ ದ್ರಾವಿಡ್ ಕೈಗೆ ಸ್ಪರ್ಶಿಸುತ್ತಿದ್ದಂತೆ ಎಲ್ಲ ನೋವು , ಬೇಸರ, ವೇದನೆ ಮಾಯವಾಗಿ ಅಲ್ಲಿ ತುಂಬಿಕೊಂಡಿದ್ದು ಬರೀ ಸಂಭ್ರಮ..ಸಡಗರ.. ಭಾವೋದ್ವೇಗ, ಆನಂದಭಾಷ್ಟ.. ಆ ಭಾವುಕ ದೃಶ್ಯಗಳನ್ನು ನೋಡಿದ ಕೋಟ್ಯಾನುಕೋಟಿ ಅಭಿಮಾನಿಗಳ ಹೃನ್ಮನ ತುಂಬಿ ಬಂದಿದೆ. ನನ್ನಲ್ಲೂ ಅರಿವಿಲ್ಲದೇ ಭಾವೋದ್ವೇಗದಿಂದ ಕಣ್ಣೀರಧಾರೆ.. ಅರೇ ಕ್ಷಣ ನನ್ನನ್ನೇ ಮರೆತಂಗೆ ಶೂನ್ಯ ಭಾವ… ಕೊನೆಗೂ ನಾನು ದ್ರಾವಿಡ್‍ನ ಅಪ್ಪಟ ಅಭಿಮಾನಿಯಾದೆ.. ಸಲಾಂ ಜಾಮಿ ಭಾಯ್!