ಧರ್ಮಶಾಲಾ (ಹಿಮಾಚಲ ಪ್ರದೇಶ)
ಭಾರತೀಯ ಪುರುಷರ ಕ್ರಿಕೆಟ್ ತಂಡದ ಕೋಚ್, ಜಗತ್ತು ಕಂಡ ಸರ್ವಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾದ ಕನ್ನಡಿಗ ರಾಹುಲ್ ದ್ರಾವಿಡ್ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲಿದ್ದಾರೆ.
ರಾಹುಲ್ ದ್ರಾವಿಡ್ ಗೂ ಬಿಜೆಪಿಗೂ ಏನು ಸಂಬಂಧ? ಅವರೂ ಬಿಜೆಪಿ ಸೇರಿದರಾ? ಅಲ್ಲಿ ಅವರಿಗೇನು ಕೆಲಸ? ಒಬ್ಬ ಮಹಾನ್ ಕ್ರಿಕೆಟಿಗ ಹೀಗೆ ಒಂದು ಪಕ್ಷವನ್ನು ಸೇರುವುದು ಸರಿಯಾ? ತಪ್ಪಾ ಎಂಬಿತ್ಯಾದಿ ಹಲವು ಪ್ರಶ್ನೆಗಳು ಈಗ ನಿಮ್ಮನ್ನು ಕಾಡುತ್ತಿರಬಹುದಲ್ವೇ? ಹಾಗೆ ಕಾಡುತ್ತಿದ್ದರೆ ಈ ವರದಿಯನ್ನೊಮ್ಮೆ ಪೂರ್ಣವಾಗಿ ಓದಿ..
ಹಿಮಾಚಲ ಪ್ರದೇಶದಲ್ಲಿ ಈ ವರ್ಷವೇ ವಿಧಾನಸಭೆ ಚುನಾವಣೆ ನಡೆಯಲಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 68 ಕ್ಷೇತ್ರಗಳ ಪೈಕಿ 43ರಲ್ಲಿ ಗೆಲುವು ಸಾಧಿಸಿದ ಬಿಜೆಪಿ ಅಧಿಕಾರದಲ್ಲಿದೆ. ಈ ಬಾರಿಯೂ ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಹಲವು ಪ್ರಯತ್ನಗಳನ್ನು ನಡೆಸುತ್ತಿದೆ.
ಈ ಬಾರಿಯ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿಯನ್ನು ಮೇ 12ರಿಂದ ಮೇ 15ರವರೆಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲೇ ಆಯೋಜಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಹಿರಿಯ ಪದಾಧಿಕಾರಿಗಳು, ಕೇಂದ್ರ ಮಂತ್ರಿಗಳು, ರಾಜ್ಯದ ಬಹುತೇಕ ಎಲ್ಲ ಆಹ್ವಾನಿತ ನಾಯಕರು ಭಾಗವಹಿಸಲಿದ್ದಾರೆ. ಯುವಮೋರ್ಚಾದ ಎಲ್ಲ ಉನ್ನತ ಮಟ್ಟದ ಪದಾಧಿಕಾರಿಗಳಿಗೆ ಇದು ಚುನಾವಣಾ ತಯಾರಿಯ ಸೆಷನ್ ಕೂಡಾ ಆಗಲಿದೆ. ಇದರಲ್ಲಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಕೂಡಾ ಭಾಗವಹಿಸಲಿದ್ದಾರೆ ಎಂದು ಧರ್ಮಶಾಲಾ ಕ್ಷೇತ್ರದ ಶಾಸಕರೂ ಆಗಿರುವ ವಿಶಾಲ್ ನಹೇರಿಯಾ ಹೇಳಿದ್ದಾರೆ.
ರಾಹುಲ್ ಗೇನು ಕೆಲಸ?
ಸದ್ಯದ ವರೆಗೆ ರಾಹುಲ್ ದ್ರಾವಿಡ್ ಬಿಜೆಪಿ ಸೇರಿಲ್ಲ. ಅವರು ಪಕ್ಷದ ನೆಲೆಯಲ್ಲಿ ಭಾಗವಹಿಸುತ್ತಲೂ ಅಲ್ಲ. ಬಿಜೆಪಿ ಯುವ ಮೋರ್ಚಾ ಪಕ್ಷದ ನೆಲೆಯಲ್ಲಿ ಕೆಲಸ ಮಾಡುವುದು ನಿಜವಾದರೂ ಪಕ್ಷದ ಆಚೆಗೂ ವೈಯಕ್ತಿಕವಾಗಿ ನಾಯಕತ್ವವನ್ನು ಬೆಳೆಸಿಕೊಳ್ಳಬೇಕು, ಬೇರೆ ವಿಚಾರಗಳಲ್ಲೂ ಅನುಭವಗಳನ್ನು ಪಡೆದುಕೊಳ್ಳಬೇಕು ಎನ್ನುವ ನೆಲೆಯಲ್ಲಿ ಯುವಕರಿಗೆ ಸ್ಫೂರ್ತಿ ತುಂಬಲು ರಾಹುಲ್ ದ್ರಾವಿಡ್ ಅವರನ್ನು ಕರೆಸಲಾಗುತ್ತಿದೆ ಎಂದು ಹೇಳಲಾಗಿದೆ.
“ರಾಹುಲ್ ದ್ರಾವಿಡ್ ಅವರು ಕ್ರಿಕೆಟ್‌ನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ವೈಯಕ್ತಿಕ ಬದುಕಿನಲ್ಲೂ ಅತ್ಯುನ್ನತ ಮೌಲ್ಯಗಳನ್ನು ಉಳಿಸಿಕೊಂಡಿದ್ದಾರೆ. ಅವರ ಮೂಲಕ ಯುವಜನರಿಗೆ ಒಂದು ಸಂದೇಶವನ್ನು ಕೊಡಬೇಕು ಎನ್ನುವ ನೆಲೆಯಲ್ಲಿ ಅವರಿಗೆ ಆಹ್ವಾನ ನೀಡಲಾಗಿದೆ. ಯುವಜನರು ಕೇವಲ ರಾಜಕೀಯ ಮಾತ್ರವಲ್ಲದೆ, ಇತರ ಕ್ಷೇತ್ರಗಳಲ್ಲೂ ಉನ್ನತ ಮಟ್ಟಕ್ಕೇರಲು ಅವಕಾಶಗಳಿವೆ ಎನ್ನುವುದನ್ನು ಮನದಟ್ಟು ಮಾಡುವುದು ನಮ್ಮ ಉದ್ದೇಶ” ಎಂದು ನಹೇರಿಯಾ ಹೇಳಿದ್ದಾರೆ.
ಆದರೂ ರಾಹುಲ್ ದ್ರಾವಿಡ್ ಅವರನ್ನು ಪಕ್ಷದ ವೇದಿಕೆಗೆ ಆಹ್ವಾನಿಸಿ ಯುವಜನರ ಮೇಲೆ ಪ್ರಭಾವ ಬೀರುವ ಉದ್ದೇಶ ಬಿಜೆಪಿಗೆ ಇರುವುದು ನಿಜ ಎಂದು ಹೇಳಲಾಗುತ್ತಿದೆ. ಚುನಾವಣೆ ಹತ್ತಿರದಲ್ಲಿರುವಾಗ ಈ ಹೆಜ್ಜೆ ಇಟ್ಟಿರುವುದು ಈ ಸಂಶಯಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ.
ರಾಹುಲ್ ದ್ರಾವಿಡ್ ರಾಯಭಾರಿ
ಸಾಧನೆ ಮತ್ತು ಸಜ್ಜನಿಕೆಯ ರಾಯಭಾರಿ ಎಂದೇ ಹೆಸರಾಗಿರುವ ರಾಹುಲ್ ದ್ರಾವಿಡ್ ಅವರು ಚುನಾವಣಾ ಆಯೋಗದ ರಾಯಭಾರಿಯಾಗಿಯೂ ಹಿಂದೆ ಕೆಲಸ ಮಾಡಿದ್ದಾರೆ. ಯುವಜನರಲ್ಲಿ ಮತದಾನ ಜಾಗೃತಿ ಮೂಡಿಸುವುದಕ್ಕಾಗಿ ಕರ್ನಾಟಕದಲ್ಲಿ ಚುನಾವಣಾ ಆಯೋಗ ಅವರನ್ನು ಬಳಸಿಕೊಂಡಿತ್ತು.
ಬಿಸಿಸಿಐ ನಿರಾಕರಣೆ
ಈ ನಡುವೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ದ್ರಾವಿಡ್ ಅವರು ಈ ಕಾರ್ಯಕಾರಿಣಿಯಲ್ಲಿ ಭಾಗವಹಿಸುತ್ತಾರೆ ಎಂಬ ಸುದ್ದಿಯನ್ನು ನಿರಾಕರಿಸಿದೆ. ಇದು ಸುಳ್ಳು ಎಂದು ಬಿಸಿಸಿಐ ಮೀಡಿಯಾ ಮ್ಯಾನೇಜರ್ ಮೌಲಿನ್ ಪಾರೀಖ್ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾದರೆ ರಾಹುಲ್ ದ್ರಾವಿಡ್ ಗೆ ಬಿಸಿಸಿಐ ಅನುಮತಿ ಅಗತ್ಯವಾಗಿದೆ.