ಕಿಂಗ್‌ಸ್ಟೌನ್ (ಸೇಂಟ್ ವಿನ್ಸೆಂಟ್): ಬಾಂಗ್ಲಾದೇಶವನ್ನು(Afghanistan vs Bangladesh) ಮಣಿಸಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿ ಐತಿಹಾಸಿಕ ಸಾಧನೆ ಮಾಡಿದ ಅಫಘಾನಿಸ್ತಾನ ತಂಡದ ಆಟಗಾರರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಆದರೆ, ಈ ಪಂದ್ಯದಲ್ಲಿ ಆಫ್ಘನ್ ನಾಯಕ ರಶೀದ್ ಖಾನ್(Rashid Khan) ಅವರು ತಾಳ್ಮೆ ಕಳೆದುಕೊಂಡು ಸಹ ಆಟಗಾರನತ್ತ ಬ್ಯಾಟ್(Rashid Khan throws bat) ಎಸೆದ ವಿಡಿಯೊವೊಂದು ವೈರಲ್(viral video) ಆಗಿದೆ. ಈ ವಿಡಿಯೊವನ್ನು ಸ್ವತಃ ಐಸಿಸಿ ಕೂಡ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ.
ಅಫಘಾನಿಸ್ತಾನದ ಬ್ಯಾಟಿಂಗ್ ಇನಿಂಗ್ಸ್ನ 19ನೇ ಓವರ್ನಲ್ಲಿ ಈ ಘಟನೆ ನಡೆದಿದೆ. ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ಪರ ಆರಂಭಿಕ ಆಟಗಾರ ರೆಹಮಾನುಲ್ಲಾ ಗುರ್ಬಾಜ್(43) ಬಳಿಕ ತಂಡಕ್ಕೆ ಆಸರೆಯಾದದ್ದು 7ನೇ ಕ್ರಮಾಂಕದಲ್ಲಿ ಆಡಲಿಳಿದ ರಶೀದ್ ಖಾನ್ ಮಾತ್ರ. 10 ಎಸೆತಗಳಲ್ಲಿ ಮೂರು ಸಿಕ್ಸರ್ ಬಾರಿಸಿ ಅಜೇಯ 19 ರನ್ ಗಳಿಸಿದ ಪರಿಣಾಮ ತಂಡ 100ರ ಗಡಿ ದಾಟಿತು.
ಇದನ್ನೂ ಓದಿ AFG vs BAN: ‘ನಿಧಾನವಾಗಿ ಆಡಿ, ಮಳೆ ಬರುತ್ತೆ’; ಆಫ್ಘನ್ ಆಟಗಾರರಿಗೆ ಸಲಹೆ ನೀಡಿದ ಕೋಚ್; ವಿಡಿಯೊ ವೈರಲ್
19ನೇ ಓವರ್ನ ಮೂರನೇ ಎಸೆತದಲ್ಲಿ ರಶೀದ್ ಅವರು ಹೆಲಿಕಾಪ್ಟರ್ ಹೊಡೆತದ ಮೂಲಕ ಸಿಕ್ಸರ್ ಬಾರಿಸಲು ಯತ್ನಿಸಿದರು. ಆದರೆ, ಈ ಹೊಡೆತ ಅಷ್ಟು ಪರಿಪೂರ್ಣವಾಗದ ಕಾರಣ ಚೆಂಡು ಮೈದಾನದ ಮಧ್ಯ ಭಾಗದಲ್ಲೇ ಬಿದ್ದಿತು. ಕ್ಯಾಚ್ ಹಿಡಿಯಲು ಬಂದ ಮೊಹಮ್ಮದುಲ್ಲ ಅವರು ಫೀಲ್ಡಿಂಗ್ ಮಿಸ್ ಮಾಡಿದರು. ಈ ವೇಳೆ ರಶೀದ್ 2 ರನ್ ಓಡಲು ಯತ್ನಿಸಿ ಅರ್ಧ ಪಿಚ್ ತನಕ ಬಂದರೂ ಕೂಡ ಮತ್ತೊಂದು ತುದಿಯಲ್ಲಿದ್ದ ಕರೀಂ ಜನ್ನತ್ ರನ್ ಓಡಲು ನಿರಾಕರಿಸಿದರು. ಚಿತ್ತ ನೆಚ್ಚತಿಗೇರಿದ ರಶೀದ್ ತನ್ನ ಬ್ಯಾಟನ್ ಎಸೆಯುವ ಮೂಲಕ ತಮ್ಮ ಕೋಪವನ್ನು ಹೊರಹಾಕಿದರು. ಜತೆಗೆ ಕೆಲ ಕೆಟ್ಟ ಪದಗಳಿಂದ ಜನ್ನತ್ ಮೇಲೆ ರೇಗಾಡಿದರು. ಈ ವಿಡಿಯೊ ವೈರಲ್ ಆಗಿದೆ.
ಬೌಲಿಂಗ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ರಶೀದ್ ಖಾನ್ 4 ಓವರ್ಗೆ 23 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತು ಮಿಂಚಿದರು. ಇವರಿಗೆ ಮಧ್ಯಮ ವೇಗಿ ನವೀನ್ ಉಲ್ ಹಕ್ ಉತ್ತಮ ಸಾಥ್ ನೀಡಿ 4 ವಿಕೆಟ್ ಉರುಳಿಸಿದರು. ಜತೆಗೆ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು. ಐತಿಹಾಸಿಕ ಗೆಲುವಿನೊಂದಿಗೆ ಸೆಮಿ ಫೈನಲ್ ಪ್ರವೇಶಿಸಿರುವ ಅಫಘಾನಿಸ್ತಾನ ಜೂನ್ 26ರಂದು ನಡೆಯುವ ಸೆಮಿ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿವೆ.
ಹಲವು ಬಾರಿ ಮಳೆಯಿಂದ ಅಡಚಣೆಯಾದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಅಫಘಾನಿಸ್ತಾನ ರಹಮಾನುಲ್ಲಾ ಗುರ್ಬಾಜ್(43) ಅವರ ಏಕಾಂಗಿ ಬ್ಯಾಟಿಂಗ್ ಹೋರಾಟದ ನೆರವಿನಿಂದ 5 ವಿಕೆಟ್ಗೆ 115 ರನ್ ಬಾರಿಸಿತು. ಬಾಂಗ್ಲಾ ಬ್ಯಾಟಿಂಗ್ ಸರದಿಯ ವೇಳೆ ಹಲವು ಬಾರಿ ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿತು. ಅಂತಿಮವಾಗಿ ಒಂದು ಓವರ್ ಕಡಿತಗೊಳಿಸಿ 19 ಓವರ್ಗೆ 114 ರನ್ ಗೆಲುವಿನ ಗುರಿ ನೀಡಲಾಯಿತು. ಈ ಮೊತ್ತವನ್ನು ಬಾಂಗ್ಲಾ ಒಂದು ಹಂತದವರೆಗೆ ಯಶಸ್ವಿಯಾಗಿ ಬೆನ್ನಟ್ಟಿಕೊಂಡು ಬಂದರೂ ಕೂಡ ಅಂತಿಮ ಹಂತದಲ್ಲಿ ನಾಟಕೀಯ ಕುಸಿತ ಕಂಡು 17.5 ಓವರ್ನಲ್ಲಿ 105 ರನ್ಗೆ ಸರ್ವಪತನ ಕಂಡಿತು.