Site icon Vistara News

IPL 2024: ಬೆಂಗಳೂರಲ್ಲಿಂದು ಆರ್‌ಸಿಬಿ, ಡೆಲ್ಲಿ ನಿರ್ಣಾಯಕ ಪಂದ್ಯ; ಮಳೆ ಅಡ್ಡಿ ಆಗತ್ತಾ ? ಇಲ್ಲಿದೆ ರಿಪೋರ್ಟ್

IPL 2024

RCB vs DC IPL 2024: M Chinnaswamy Stadium Pitch Report, Bengaluru Weather Forecast

ಬೆಂಗಳೂರು: ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯು (IPL 2024) ದಿನೇದಿನೆ ಹೆಚ್ಚು ರೋಚಕವಾಗುತ್ತಿದೆ. ಪ್ಲೇ ಆಫ್‌, ರನ್‌ರೇಟ್‌, ಎದುರಾಳಿ ತಂಡದ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಅದರಲ್ಲೂ, ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಪ್ಲೇಆಫ್‌ಗೇರಲು ಭಾನುವಾರ ಅಗ್ನಿಪರೀಕ್ಷೆ ಎದುರಿಸುತ್ತಿದೆ. ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಮಧ್ಯೆ ನಿರ್ಣಾಯಕ ಪಂದ್ಯ ನಡೆಯಲಿದ್ದು, ಪ್ಲೇಆಫ್‌ಗೇರಲು ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಇನ್ನು, ಆರ್‌ಸಿಬಿ, ಡೆಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ವೆದರ್‌ ರಿಪೋರ್ಟ್‌ ಹೇಳುವುದೇನು?

ಅಕ್ಯುವೆದರ್‌ (Accuweather) ವರದಿ ಪ್ರಕಾರ, ಬೆಂಗಳೂರಿನಲ್ಲಿ ಭಾನುವಾರ ಸಂಜೆ ಮೋಡಿ ಕವಿದ ವಾತಾವರಣ ಇರಲಿದೆ ಎಂದು ತಿಳಿದುಬಂದಿದೆ. ಮಳೆ ಬರುವ ಸಾಧ್ಯತೆ ಕಡಿಮೆ ಇದೆ ಎಂದು ವರದಿ ತಿಳಿಸಿದೆ. ಮಳೆ ಬರುವ ಸಾಧ್ಯತೆ ಶೇ.50-60ರಷ್ಟು ಕಡಿಮೆ ಇದೆ. ಇನ್ನು, ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಗಂಟೆಗೆ 13 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ. ರಾಜ್ಯ ರಾಜಧಾನಿಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಸಂಜೆ ಮಳೆ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಹೇಗಿದೆ ಪಿಚ್?‌

ಚಿಕ್ಕದಾದ ಬೌಂಡರಿ ಲೈನ್, ಫ್ಲ್ಯಾಟ್‌ ಪಿಚ್‌ ಇರುವ ಕಾರಣ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟರ್‌ಗಳ ಸ್ವರ್ಗ ಎಂದೇ ಹೇಳಲಾಗುತ್ತದೆ. ಹಾಗಾಗಿ, ಆರ್‌ಸಿಬಿ ಹಾಗೂ ಡೆಲ್ಲಿ ಪಂದ್ಯದಲ್ಲೂ ರನ್‌ ಮಳೆ ಸುರಿಯುವ ಸಾಧ್ಯತೆ ಇದೆ. ಪಿಚ್‌ ಸ್ಪಿನ್ನರ್‌ಗಳಿಗಿಂತ ಪೇಸರ್‌ಗಳಿಗೆ ಹೆಚ್ಚು ಅನುಕೂಲವಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಆರ್‌ಸಿಬಿಯು ಗುಜರಾತ್‌ ಟೈಟನ್ಸ್‌ ವಿರುದ್ಧ ಭರ್ಜರಿ ಜಯ ಗಳಿಸಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಅತ್ತ, ಆರ್‌ಸಿಬಿಯನ್ನು ತವರಿನಲ್ಲೇ ಮಣಿಸುವ ಮೂಲಕ ಪ್ಲೇಆಫ್‌ ಹಾದಿ ಸುಗಮ ಮಾಡಿಕೊಳ್ಳುವ ಯೋಜನೆಯನ್ನು ಡೆಲ್ಲಿ ಕ್ಯಾಪಿಟಲ್ಸ್‌ ಹಾಕಿಕೊಂಡಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ

ಆಡಿದ 12 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಆರ್‌ಸಿಬಿಯು ಪ್ಲೇಆಫ್‌ ತಲುಪಲು ಭಾನುವಾರ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ. ಗೆಲುವು ಸಾಧಿಸದಿದ್ದರೆ, ಟೂರ್ನಿಯಿಂದಲೇ ಆರ್‌ಸಿಬಿ ಹೊರಬೀಳಲಿದೆ. ಡೆಲ್ಲಿ ವಿರುದ್ಧ ಗೆದ್ದು, ಉಳಿದ ತಂಡಗಳ ಸೋಲು-ಗೆಲುವು, ರನ್‌ರೇಟ್‌ ಲೆಕ್ಕಾಚಾರದಲ್ಲಿರುವ ಆರ್‌ಸಿಬಿಯು ಕಳೆದ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಕಂಡಿರುವ ಗೆಲುವು, ತವರಿನ ಅಭಿಮಾನಿಗಳ ಬಲದೊಂದಿಗೆ ಕಣಕ್ಕಿಳಿಯುತ್ತಿದೆ. ಭಾನುವಾರ ಮಧ್ಯಾಹ್ನ ರಾಜಸ್ಥಾನ ರಾಯಲ್ಸ್‌ ಹಾಗೂ ಸಿಎಸ್‌ಕೆ ಪಂದ್ಯ ನಡೆಯಲಿದ್ದು, ಸಿಎಸ್‌ಕೆ ಸೋಲಿಗಾಗಿ ಆರ್‌ಸಿಬಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

Exit mobile version