ನವದೆಹಲಿ: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ ಶ್ರೇಯಸ್ ಅಯ್ಯರ್ (Shreyas Iyer) ಅವರು ಮುಂಬರುವ ರಣಜಿ ಟ್ರೋಫಿ 2024 ಪಂದ್ಯಾವಳಿಯ ಸೆಮಿಫೈನಲ್ನಲ್ಲಿ (Ranji Trophy) ತಮ್ಮ ದೇಶೀಯ ತಂಡ ಮುಂಬೈ ಪರ ಲಭ್ಯವಿರುವುದಾಗಿ ಘೋಷಿಸಿದ್ದಾರೆ. ಬಾಂದ್ರಾದ ಬಿಕೆಸಿ ಮೈದಾನದಲ್ಲಿ ನಡೆದ ಕ್ವಾರ್ಟರ್ ಫೈನಲ್ಸ್ನಲ್ಲಿ ಬರೋಡಾ ವಿರುದ್ಧ ಡ್ರಾ ಸಾಧಿಸಿದ ಮುಂಬೈ, ಮೊದಲ ಇನ್ನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಸೆಮಿಫೈನಲ್ಸ್ಗೆ ಅರ್ಹತೆ ಪಡೆಯಿತು. ಮಾರ್ಚ್ 2ರಿಂದ ಬಾಂದ್ರಾದ ಮುಂಬೈ ಕ್ರಿಕೆಟ್ ಅಸೋಸಿಯೇಷನ್ನ ಬಿಕೆಸಿ ಮೈದಾನದಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ನಲ್ಲಿ ಈ ತಂಡ ತಮಿಳುನಾಡು ವಿರುದ್ಧ ಸೆಣಸಲಿದೆ.
ಶ್ರೇಯಸ್ ಅಯ್ಯರ್ ಅವರನ್ನು ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯ ಕೊನೆಯ ಮೂರು ಟೆಸ್ಟ್ಗಳಿಗೆ ಭಾರತ ತಂಡದಿಂದ ಕೈಬಿಡಲಾಗಿತ್ತು. ವೈಜಾಗ್ನಲ್ಲಿ ನಡೆದ ಎರಡನೇ ಟೆಸ್ಟ್ನಲ್ಲಿ ಬ್ಯಾಟಿಂಗ್ ಮಾಡುವಾಗ ಅವರು ಬೆನ್ನುನೋವಿನ ಬಗ್ಗೆ ದೂರು ನೀಡಿದ್ದರು. ಹೀಗಾಗಿ ಅವರು ಬಿಡುಗಡೆಗೊಂಡಿದ್ದರು. ಆದಾಗ್ಯೂ ಮುಂಬೈನ ಈ ಹಿಂದಿನ ಎರಡು ರಣಜಿ ಟ್ರೋಫಿ ಪಂದ್ಯಗಳಲ್ಲಿ ಅವರು ಆಡಿಲ್ಲ.
ಬೆನ್ನುನೋವಿನಿಂದಾಗಿ ಅವರು ಆಯ್ಕೆಗೆ ಲಭ್ಯವಿಲ್ಲ ಎಂದು ಅವರು ಎಂಸಿಎಗೆ ತಿಳಿಸಿದ್ದರು ಎಂದು ವರದಿಯಾಗಿದೆ, ಆದರೆ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಕ್ರೀಡಾ ವಿಜ್ಞಾನ ಮತ್ತು ಆರೋಗ್ಯ ಮುಖ್ಯಸ್ಥ ನಿತಿನ್ ಪಟೇಲ್ ಅವರು ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆದಾರರಿಗೆ ಇಮೇಲ್ನಲ್ಲಿ ಅಯ್ಯರ್ ‘ಫಿಟ್’ ಆಗಿದ್ದಾರೆ ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು. ರೆಡ್ಬಾಲ್ ಕ್ರಿಕೆಟ್ನಲ್ಲಿ ಆಡುವುದನ್ನು ಅವರು ತಪ್ಪಿಸಿಕೊಂಡಿದ್ದಾರೆ ಎಂದು ದೂರಲಾಗಿತ್ತು.
ಮಂಡಳಿಗೆ ಮಾಹಿತಿ
ಈಗ ಶ್ರೇಯಸ್ ಅಯ್ಯರ್ ಅವರು ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಗೆ ಮಾಹಿತಿ ನೀಡಿದ್ದು, ಮುಂಬೈನ ರಣಜಿ ಟ್ರೋಫಿ ಸೆಮಿಫೈನಲ್ ಪಂದ್ಯಕ್ಕೆ ಲಭ್ಯವಿದ್ದಾರೆ ಎಂದು ವರದಿಯಾಗಿದೆ. “ಹೌದು, ಅಯ್ಯರ್ ಅವರು ಈಗ ಫಿಟ್ ಆಗಿದ್ದಾರೆ ಮತ್ತು ಮುಂಬೈನ ಸೆಮಿಫೈನಲ್ ಪಂದ್ಯಕ್ಕೆ ಲಭ್ಯವಿದ್ದಾರೆ ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಷನ್ಗೆ ಖಚಿತಪಡಿಸಿದ್ದಾರೆ” ಎಂದು ಮೂಲವೊಂದು ಟೈಮ್ಸ್ ಆಫ್ ಇಂಡಿಯಾಗೆ ತಿಳಿಸಿದೆ.
ರಣಜಿ ಟ್ರೋಫಿಯಲ್ಲಿ ಭಾಗವಹಿಸದಿರುವುದನ್ನು ಸಹಿಸುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕಳೆದ ವಾರ ಕೇಂದ್ರ ಗುತ್ತಿಗೆ ಮತ್ತು ಭಾರತ ಎ ಕ್ರಿಕೆಟಿಗರಿಗೆ ಕಠಿಣ ಎಚ್ಚರಿಕೆ ನೀಡಿದ್ದರು.
ಟೆಸ್ಟ್ ಕ್ರಿಕೆಟ್ ಆಡುವವರ ಸಂಬಳದಲ್ಲಿ ಏರಿಕೆ
ಬೆಂಗಳೂರು : ಟೆಸ್ಟ್ ಕ್ರಿಕೆಟ್ (Test Cricket) ಮಾದರಿಯನ್ನು ನಿರ್ಲಕ್ಷಿಸಿ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಕಡೆಗೆ ಓಡುತ್ತಿರುವ ಆಟಗಾರರಿಗೆ ಬುದ್ಧಿ ಕಲಿಸುವ ಉದ್ದೇಶದಿಂದ ಬಿಸಿಸಿಐ ಟೆಸ್ಟ್ ಕ್ರಿಕೆಟ್ ಪಂದ್ಯಗಳ ವೇತನದಲ್ಲಿ ಏರಿಕೆ ಮಾಡಿದೆ. ಹೆಚ್ಚು ವೇತನದ ಆಸೆಗಾದರೂ ಆಟಗಾರರು ಈ ಮಾದರಿಯನ್ನು ನಿರ್ಲಕ್ಷ್ಯ ಮಾಡಬಾರದು ಎಂಬ ಉದ್ದೇಶದೊಂದಿಗೆ ಬಿಸಿಸಿಐ (BCCI) ಈ ನಿರ್ಧಾರ ಕೈಗೊಂಡಿದೆ.
ಪ್ರಸ್ತುತ ಬಿಸಿಸಿಐ ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ., ಏಕದಿನಕ್ಕೆ 6 ಲಕ್ಷ ರೂ., ಟಿ 20 ಅಂತರರಾಷ್ಟ್ರೀಯ ಪಂದ್ಯಗಳಿಗೆ 3 ಲಕ್ಷ ರೂಪಾಯಿ ನೀಡುತ್ತಿದೆ. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶನ್ ದೇಶೀಯ ಕ್ರಿಕೆಟ್ ಆಡಲು ನಿರಾಕರಿಸಿದ ನಂತರ ವಿಷಯ ವಿವಾದ ಸೃಷ್ಟಿಸಿತ್ತು. ಹೀಗಾಗಿ ಕ್ರಿಕೆಟ್ ಮಂಡಳಿಯು ವೇತನ ರಚನೆಯನ್ನು ಮರುರೂಪಿಸಲು ನಿರ್ಧರಿಸಿದೆ. ಇಶಾನ್ ಜತೆಗೆ ಶ್ರೇಯಸ್ ಅಯ್ಯರ್ ಕೂಡ ಟೆಸ್ಡ್ ಮಾದರಿಯಿಂದ ವಿಮುಖರಾಗಲು ಯತ್ನಿಸಿದ್ದಾರೆ ಎಂಬ ಆರೋಪಗಳಿವೆ. ಹೀಗಾಗಿ ಸಂಬಳ ಹೆಚ್ಚಿಸಿ ಬುದ್ಧಿ ಕಲಿಸಲು ಬಿಸಿಸಿಐ ಮುಂದಾಗಿದೆ.
ಇದನ್ನೂ ಓದಿ :Ravindra Jadeja : ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ರವೀಂದ್ರ ಜಡೇಜಾ
ಕ್ಯಾಲೆಂಡರ್ ವರ್ಷದಲ್ಲಿ ಎಲ್ಲಾ ಟೆಸ್ಟ್ ಸರಣಿಗಳನ್ನು ಆಡಿದರೆ, ಅವರಿಗೆ ವಾರ್ಷಿಕ ಉಳಿಸಿಕೊಳ್ಳುವ ಒಪ್ಪಂದದ ಜತೆಗೆ ಹೆಚ್ಚುವರಿ ಹಣ ನೀಡುವುದು ಬಿಸಿಸಿಐ ಉದ್ದೇಶವಾಗಿದೆ. ಆಟಗಾರರು ಹೆಚ್ಚು ಹೆಚ್ಚು ಕೆಂಪು-ಚೆಂಡಿನ ಕ್ರಿಕೆಟ್ ಕಡೆಗೆ ಹೋಗಲಿ ಎಂಬುದೇ ಅದರ ಉದ್ದೇಶವಾಗಿದೆ. ಇದು ಟೆಸ್ಟ್ ಕ್ರಿಕೆಟ್ ಆಡಲು ಹೆಚ್ಚುವರಿ ಅನುಕೂಲವಾಗಲಿದೆ,” ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.
ಹೊಸ ಸಂಭಾವನೆ ಮಾದರಿಯನ್ನು ಅನುಮೋದಿಸಿದರೆ, ಈ ಐಪಿಎಲ್ ಋತುವಿನ ನಂತರ ಅದು ಜಾರಿಗೆ ಬರಲಿದೆ. ಒಬ್ಬ ಆಟಗಾರನು ಒಂದು ಋತುವಿನಲ್ಲಿ ಎಲ್ಲಾ ಟೆಸ್ಟ್ ಸರಣಿಗಳನ್ನು ಆಡಿದರೆ ಬಿಸಿಸಿಐ ಹೆಚ್ಚುವರಿ ಬೋನಸ್ ನೀಡಲಿದೆ.
ದೇಶೀಯ ಕ್ರಿಕೆಟ್ಗಿಂತ ಐಪಿಎಲ್ಗೆ ಆದ್ಯತೆ ನೀಡುವ ನಿರ್ಧಾರವು ಗಂಭೀರ ಪರಿಣಾಮಗಳನ್ನು ಬೀರುತ್ತದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ಹಿಂದೆ ಹೇಳಿದ್ದರು. ಪ್ರಮುಖವಾಗಿ ಕೇಂದ್ರ ಗುತ್ತಿಗೆ ಮತ್ತು ಭಾರತ ‘ಎ’ ತಂಡದಲ್ಲಿ ಪಡೆಯುವ ಅವಕಾಶಗಳು ಅನಿಶ್ಚಿತವಾಗಲಿದೆ ಎಂದು ಹೇಳಿದ್ದರು.