ಮುಂಬಯಿ: ಶ್ರೀಲಂಕಾ ಪ್ರವಾಸಕ್ಕೆ (Sri Lanka series) ಇಂದು ಭಾರತ ತಂಡ ಪ್ರಕಟಗೊಳ್ಳುವ ಸಾಧ್ಯತೆ ಇದೆ. (Team India) ಲಂಕಾ ವಿರುದ್ಧ ಟೀಮ್ ಇಂಡಿಯಾ ಟಿ20 ಮತ್ತು ಏಕದಿನ(SL vs IND) ಸರಣಿ ಆಡಲಿದೆ. ಈ ತಿಂಗಳ ಅಂತ್ಯಕ್ಕೆ ಸರಣಿ ಆರಂಭಗೊಳ್ಳಲಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರೋಹಿತ್ ಶರ್ಮ ಸರಣಿಯಿಂದ ವಿಶ್ರಾಂತಿ ಪಡೆಯಲಿದ್ದಾರೆ. ಹೀಗಾಗಿ ಕನ್ನಡಿಗ ರಾಹುಲ್ ಏಕದಿನಕ್ಕೆ, ಟಿ20ಗೆ ಸೂರ್ಯಕುಮಾರ್ ನಾಯಕನಾಗಿ ಆಯ್ಕೆಯಾಗಬಹುದು.
ಕೋಚ್ ಗೌತಮ್ ಗಂಭೀರ್ ಅವರ ಉಸ್ತುವಾರಿಯಲ್ಲಿ ಭಾರತ ತಂಡ ಆಡುವ ಮೊದಲ ಸರಣಿ ಇದಾಗಲಿದೆ. ಹೀಗಾಗಿ ನಿರೀಕ್ಷೆ ಹೆಚ್ಚಾಗಿಯೇ ಇರಲಿದೆ. ಪ್ರಮುಖ ಆಟಗಾರರಾದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಅವರು ಟಿ20 ಮಾದರಿಗೆ ವಿದಾಯ ಹೇಳಿದ್ದಾರೆ. ಹೀಗಾಗಿ ಚುಟುಕು ಮಾದರಿಯಲ್ಲಿ ಯುವ ಆಟಗಾರರು ಅವಕಾಶ ಪಡೆಯಲಿದ್ದಾರೆ.
ಇದನ್ನೂ ಓದಿ IND vs SL: ಶ್ರೀಲಂಕಾ ವಿರುದ್ಧದ ಸರಣಿಗೆ ಮೊಹಮ್ಮದ್ ಶಮಿ ಆಯ್ಕೆ ಸಾಧ್ಯತೆ
ವರದಿಯ ಪ್ರಕಾರ ಹಾರ್ದಿಕ್ ಪಾಂಡ್ಯ ಈ ಸರಣಿಯಿಂದ ವಿಶ್ರಾಂತಿ ಬಯಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಟಿ20 ತಂಡಕ್ಕೆ ಸೂರ್ಯಕುಮಾರ್ ಯಾದವ್ ಅವರನ್ನು ಹಂಗಾಮಿ ನಾಯಕನನ್ನಾಗಿ ಮಾಡಲಿದ್ದಾರೆ ಎನ್ನಲಾಗಿದೆ. ಉಪನಾಯಕರನ್ನಾಗಿ ಪಂತ್ ಆಯ್ಕೆ ಮಾಡುವ ಸಾಧ್ಯತೆಯಿದೆ. ಭಾರತದ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯರಾಗಿದ್ದ ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಮತ್ತು ಅರ್ಶದೀಪ್ ಸಿಂಗ್ ಕೂಡ ಲಂಕಾ ಸರಣಿಗೆ ಆಯ್ಕೆ ಮಾಡುವ ಸಾಧ್ಯತೆಯಿದೆ. ಜಿಂಬಾಬ್ವೆ ಪ್ರವಾಸಕ್ಕೆ ತೆರಳಿದ್ದ ತಂಡದಲ್ಲಿ ಸ್ಥಾನ ಪಡೆದಿದ್ದ ರಿಯಾನ್ ಪರಾಗ್, ಸಾಯಿ ಸುದರ್ಶನ್ ಮತ್ತು ಜಿತೇಶ್ ಶರ್ಮಾಗೂ ಅವಕಾಶ ಸಿಗುವುದು ಕಷ್ಟ ಸಾಧ್ಯ.
ಶ್ರೇಯಸ್ಗೆ ಏಕದಿನ ತಂಡದಲ್ಲಿ ಅವಕಾಶ?
ಕೆಎಲ್ ರಾಹುಲ್ ಟಿ 20 ವಿಶ್ವಕಪ್ ಗೆ ಹೋಗಿದ್ದ ಭಾರತದ ತಂಡದಿಂದ ಹೊರಗುಳಿದಿದ್ದರು. ಆದರೆ ಈಗ ಶ್ರೀಲಂಕಾ ಪ್ರವಾಸದ ಏಕದಿನ ಹಂತದಲ್ಲಿ ಕಾಣಿಸಿಕೊಳ್ಳಲು ಸಜ್ಜಾಗಿದ್ದಾರೆ. ನಾಯಕತ್ವದ ಪಾತ್ರವನ್ನು ಸಹ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ರಣಜಿ ಆಡಲು ನಿರಾಕರಿಸಿ ಅಶಿಸ್ತು ತೋರಿದ ಕಾರಣದಿಂದ ಬಿಸಿಸಿಐ(BCCI) ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್(Shreyas Iyer) ಅವರು ಶ್ರೀಲಂಕಾ(IND vs SL) ವಿರುದ್ದದ ಏಕದಿನ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.
2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ. ಗಂಭೀರ್‌ಗೆ ಶ್ರೀಲಂಕಾ ವಿರುದ್ಧದ ಸರಣಿ ಮೊದಲ ಅಗ್ನಿ ಪರೀಕ್ಷೆಯಾಗಿದೆ. ಲಂಕಾ, ಸನತ್ ಜಯಸೂರ್ಯ ಅವರ ಮಾರ್ಗದರ್ಶನದಲ್ಲಿ ಆಡಲಿದೆ.
ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ 26ರಿಂದ ಟಿ20 ಪಂದ್ಯ ಆರಂಭವಾಗಬೇಕಿತ್ತು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಬೇಕಿತ್ತು. ಏಕದಿನ ಆಗಸ್ಟ್ 1ರದ ಬದಲಾಗಿ ಆಗಸ್ಟ್ 2ರಿಂದ ಆರಂಭಗೊಳ್ಳಲಿದೆ. ಉಳಿದ ಪಂದ್ಯಗಳ ದಿನಾಂಕ ಬದಲಾಗಲಿಲ್ಲ. ಈ ಹಿಂದಿನಂತೆ ಆಗಸ್ಟ್ 4 ಮತ್ತು 7ರಂದೇ ನಡೆಯಲಿದೆ.