Site icon Vistara News

SRH vs DC: ಬೃಹತ್​ ಮೊತ್ತದ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ಹೈದರಾಬಾದ್

SRH vs DC

ನವದೆಹಲಿ: ಎಡಗೈ ಬ್ಯಾಟರ್​ಗಳಾದ ಟ್ರಾವಿಸ್​ ಹೆಡ್​(89), ಅಭಿಷೇಕ್​ ಶರ್ಮ(46) ಮತ್ತು ಶಾಬಾಜ್​ ಅಹ್ಮದ್​(59) ಅವರ ಬಿರುಸಿನ ಬ್ಯಾಟಿಂಗ್ ನೆರವಿನಿಂದ ಸನ್​ರೈಸರ್ಸ್​ ಹೈದರಾಬಾದ್(SRH vs DC)​ ತಂಡವು ಶನಿವಾರದ ಐಪಿಎಲ್‌ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್(SRH vs DC)​ ತಂಡವನ್ನು 67 ರನ್​ಗಳಿಂದ ಸೋಲಿಸಿತು. ಇದು ಹೈದರಾಬಾದ್​ಗೆ ಒಲಿದ 5ನೇ ಗೆಲುವು.

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಹೈದರಾಬಾದ್​ ತಂಡಕ್ಕೆ ಆರಂಭಿಕರಾದ ಟ್ರಾವಿಸ್​ ಹೆಡ್​(89) ಮತ್ತು ಅಭಿಷೇಕ್​ ಶರ್ಮ(46) ಜಿದ್ದಿಗೆ ಬಿದ್ದವರಂತೆ ಬ್ಯಾಟ್ ಬೀಸಿ ಅಮೋಘ ಆರಂಭ ಒದಗಿಸಿದರು. ಇವರ ಈ ಬ್ಯಾಟಿಂಗ್​ ಪರಾಕ್ರಮದಿಂದ ತಂಡ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 266 ರನ್​ ಬಾರಿಸಿತು. ಸವಾಲಿನ ಮೊತ್ತವನ್ನು ದಿಟ್ಟ ರೀತಿಯಲ್ಲಿ ಬೆನ್ನಟ್ಟಿಕೊಂಡು ಹೋದ ಡೆಲ್ಲಿ ಕ್ಯಾಪಿಟಲ್ಸ್​ ಅಂತಿಮವಾಗಿ 19.1 ಓವರ್​ಗಳಲ್ಲಿ 199 ರನ್​ಗೆ ಸರ್ವಪತನ ಕಂಡಿತು. ಗೆಲುವು ಕಂಡ ಹೈದರಾಬಾದ್​ 10 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರಿತು.

ಮ್ಯಾಕ್‌ಗುರ್ಕ್ ಅರ್ಧಶತಕದ ಮಿಂಚು


ಡೆಲ್ಲಿ ತಂಡದ ಆರಂಭ ಅಷ್ಟು ಉತ್ತಮವಾಗಿರಲಿಲ್ಲ. ಪೃಥ್ವಿ ಶಾ ಮೊದಲ ಓವರ್​ನಲ್ಲಿ ಸತತ 4 ಬೌಂಡರಿ ಬಾರಿಸಿದರೂ ಇದೇ ಆಟವನ್ನು ಮುಂದುವರಿಸುವಲ್ಲಿ ವಿಫಲರಾದರು. 4 ಬೌಂಡರಿಗೆ ಸೀಮಿತರಾಗಿ ವಿಕೆಟ್​ ಕಳೆದುಕೊಂಡರು. ಇದರ ಬೆನ್ನಲ್ಲೇ ಡೇವಿಡ್​ ವಾರ್ನರ್(1)​ ಕೂಡ ವಿಕೆಟ್​ ಕಳೆದುಕೊಂಡರು.

ಸಂಕಷ್ಟದಲ್ಲಿದ್ದ ಡೆಲ್ಲಿಗೆ ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ ಮತ್ತು ಅಭಿಷೇಕ್​ ಪೋರೆಲ್​ ಆಕ್ರಮಣಕಾರಿ ಬ್ಯಾಟಿಂಗ್​ ನಡೆಸಿ ಆಸರೆಯಾದರು. ಉಭಯ ಆಟಗಾರರ ಈ ಬ್ಯಾಟಿಂಗ್​ ಆರ್ಭಟದಿಂದ ಡೆಲ್ಲಿ ಕೂಡ ಹೈದರಾಬಾದ್​ ತಂಡದಂತೆ 7 ಓವರ್​ಗೂ ಮುನ್ನ 100 ರನ್​ಗಳ ಗಡಿ ದಾಟಿತು. ಈ ವೇಳೆ ಡೆಲ್ಲಿ ಗೆಲುವಿನ ಆಸೆಯೊಂದು ಚಿಗುರಿಕೊಂಡಿತು. ಆದರೆ, ಜಿದ್ದಿಗೆ ಬಿದ್ದವರಂತೆ ಬ್ಯಾಟ್​ ಬೀಸುತ್ತಿದ್ದ ಈ ಜೋಡಿಯನ್ನು ಮಯಾಂಕ್‌ ಮಾರ್ಕಂಡೆ ಬೇರ್ಪಡಿಸಿದರು. ಸತತ ಸಿಕ್ಸರ್​ ಚಚ್ಚಿಕೊಂಡಿದ್ದ ಮಾರ್ಕಂಡೆ ಕೊನೆಗೂ ಮ್ಯಾಕ್‌ಗುರ್ಕ್ ವಿಕೆಟ್​ ಕಿತ್ತು ತಂಡಕ್ಕೆ ಮುನ್ನಡೆ ತಂದುಕೊಟ್ಟರು.

ಇದನ್ನೂ ಓದಿ IPL 2024: ಟಿ20 ಕ್ರಿಕೆಟ್​ನಲ್ಲೇ ನೂತನ ದಾಖಲೆ ಬರೆದ ಸನ್​ರೈರ್ಸ್​ ಹೈದರಾಬಾದ್

ಮ್ಯಾಕ್‌ಗುರ್ಕ್ ಕೇವಲ 15 ಎಸೆತಗಳಿಂದ ಅರ್ಧಶತಕ ಬಾರಿಸುವ ಮೂಲಕ ಈ ಬಾರಿಯ ಐಪಿಎಲ್​ನಲ್ಲಿ ಅತಿ ವೇಗವಾಗಿ ಅರ್ಧಶತಕ ಬಾರಿಸಿದ ದಾಖಲೆ ಬರೆದರು. ಎಬಿಡಿ ವಿಲಿಯರ್ಸ್​ ರೀತಿ ಬ್ಯಾಟಿಂಗ್​ ನಡೆಸಿದ ಮ್ಯಾಕ್‌ಗುರ್ಕ್ ಒಟ್ಟು 18 ಎಸೆತಗಳಿಂದ 65 ರನ್​ ಚಚ್ಚಿದರು. ಈ ವೇಳೆ 7 ಸೊಗಸಾದ ಸಿಕ್ಸರ್​ ಮತ್ತು 5 ಆಕರ್ಷಕ ಬೌಂಡರಿ ದಾಖಲಾಯಿತು. ಈ ವಿಕೆಟ್​ ಬಿದ್ದು 26 ರನ್​ ಒಟ್ಟುಗೂಡುವಷ್ಟರಲ್ಲಿ ಉತ್ತಮವಾಗಿ ಆಡುತ್ತಿದ್ದ ಅಭಿಷೇಕ್​ ವಿಕೆಟ್​ ಕೂಡ ಪತನಗೊಂಡಿತು. ಈ ಜೋಡಿ ಮೂರನೇ ವಿಕೆಟ್​ಗೆ 84 ರನ್​ಗಳ ಅತ್ಯಮೂಲ್ಯ ಜತೆಯಾಟ ನಡೆಸಿತು. ಅಭಿಷೇಕ್ 22 ಎಸೆತಗಳಿಂದ 42 ರನ್( 7 ಬೌಂಡರಿ, 1 ಸಿಕ್ಸ್​)​ ಬಾರಿಸಿದರು. ಈ ವಿಕೆಟ್​ ಪತನಗೊಳ್ಳುತ್ತಿದ್ದಂತೆ ಡೆಲ್ಲಿ ಸೋಲು ಕೂಡ ಖಚಿತಗೊಂಡಿತು.

ನಟರಾಜನ್​ ಘಾತಕ ದಾಳಿ


ನಾಯಕ ರಿಷಭ್​ ಪಂತ್​ ಕೆಳ ಕ್ರಮಾಂಕದಲ್ಲಿ ಶಕ್ತಿ ಮೀರಿ ಪ್ರಯತ್ನಿಸಿದರೂ ಇವರಿಗೆ ಮತ್ತೊಂದು ತುದಿಯಲ್ಲಿ ಸರಿಯಾದ ಸಾಥ್​ ಸಿಗದ ಕಾರಣ ತಂಡವನ್ನು ಗೆಲುವಿನ ದಡ ಸೇರಿಸಲು ವಿಫಲರಾದರು. ಪಂತ್​ 35 ಎಸೆತಗಳಿಂದ 44 ರನ್​ ಬಾರಿಸಿ ಔಟಾದರು. ಈ ವಿಕೆಟ್​ ಪತನದೊಂದಿಗೆ ಡೆಲ್ಲಿ ಆಲೌಟ್​ ಕೂಡ ಆಯಿತು. ಹೈದರಾಬಾದ್​ ಪರ ಘಾತಕ ಬೌಲಿಂಗ್​ ದಾಳಿ ನಡೆಸಿದ ಎಡಗೈ ವೇಗಿ ಟಿ.ನಟರಾಜನ್​ ಕೇವಲ 19 ರನ್​ ನೀಡಿ ಪ್ರಮುಖ 4 ವಿಕೆಟ್​ ಕಿತ್ತು ಮಿಂಚಿದರು. ಮಾರ್ಕಂಡೆ 2 ವಿಕೆಟ್​ ಪಡೆದರು.

ಅಭಿಷೇಕ್​-ಹೆಡ್​ ಸ್ಫೋಟಕ ಬ್ಯಾಟಿಂಗ್​

ಮೊದಲು ಬ್ಯಾಟಿಂಗ್​ ನಡೆಸಿದ ಹೈದರಾಬಾದ್​ ತಂಡದ ಪರ ಆರಂಭಿಕ ಬ್ಯಾಟರ್​ಗಳಾದ ಅಭಿಷೇಕ್​ ಶರ್ಮ ಮತ್ತು ಟ್ರಾವಿಸ್​ ಹೆಡ್​ ಸಿಡಿದು ನಿಂತು ಡೆಲ್ಲಿ ಬೌಲರ್​ಳ ಎಸೆತವನ್ನು ಧೂಳಿಪಟ ಮಾಡಿದರು. ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಯನ್ನೇ ಸುರಿಸಿ ಕ್ರಿಕೆಟ್​ ಅಭಿಮಾನಿಗಳಿಗೆ ಬರಪೂರ ರಂಚನೆ ನೀಡಿದರು. ವಿಕೆಟ್​ ನಷ್ಟವಿಲ್ಲದೆ 125 ರನ್​ ಬಾರಿಸುವ ಮೂಲಕ ಟಿ20 ಕ್ರಿಕೆಟ್​ನಲ್ಲಿ ಪವರ್​ ಪ್ಲೇಯಲ್ಲಿ ಅತ್ಯಧಿಕ ರನ್​ ಬಾರಿಸಿದ ತಂಡವೆಂಬ ಹೆಗ್ಗಳಿಗೆ ಪಾತ್ರವಾಯಿತು. ಇವರಿಬ್ಬರ ಆಟ ನೋಡುವಾಗ ಈ ಬಾರಿ 300 ಪ್ಲಸ್​ ಮೊತ್ತ ದಾಖಲಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಈ ಅಬ್ಬರ ಬ್ಯಾಟಿಂಗ್​ಗೆ ಕುಲ್​ದೀಪ್​ ಯಾದವ್​ ಬ್ರೇಕ್​ ಹಾಕುವಲ್ಲಿ ಯಶಸ್ಸು ಕಂಡರು.

ಒಂದೇ ಓವರ್​ನಲ್ಲಿ ಅಪಾಯಕಾರಿ ಅಭಿಷೇಕ್ ಮತ್ತು ಆ ಬಳಿಕ ಬಂದ ಐಡೆನ್​ ಮಾರ್ಕ್ರಮ್​(1) ವಿಕೆಟ್​ ಕಿತ್ತು ಡೆಲ್ಲಿಗೆ ಮುನ್ನಡೆ ತಂದುಕೊಟ್ಟರು. ಅಭಿಷೇಕ್​ ಕೇವಲ 12 ಎಸೆತಗಳಲ್ಲಿ 6 ಸಿಕ್ಸರ್​ ಮತ್ತು 2 ಬೌಂಡರಿ ನೆರವಿನಿಂದ 46 ರನ್​ ಬಾರಿಸಿದರು. ಅಭಿಷೇಕ್​ ಮತ್ತು ಹೆಡ್​ ಸೇರಿಕೊಂಡು ಮೊದಲ ವಿಕೆಟ್​ಗೆ 131 ರನ್​ ಜತೆಯಾಟ ನಡೆಸಿದರು. 16 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದ ಟ್ರಾವಿಸ್​ ಹೆಡ್​ 11 ಬೌಂಡರಿ ಮತ್ತು 6 ಸಿಕ್ಸರ್​ ನೆರವಿನಿಂದ 89 ರನ್​ ಬಾರಿಸಿದರು. ಎದುರಿಸಿದ್ದು ಕೇವಲ 32 ಎಸೆತ. ಉಭಯ ಆಟಗಾರರ ವಿಕೆಟ್​ ಪತನದ ಬಳಿಕ ಹೈದರಾಬಾದ್​ ನಾಟಕೀಯ ಕುಸಿತ ಕಂಡಿತು. ಹೆನ್ರಿಚ್​ ಕ್ಲಾಸೆನ್​(15) ರನ್​ ಗಳಿಸಿ ನಿರಾಸೆ ಮೂಡಿಸಿದರು.

ಅಂತಿಮ ಹಂತದಲ್ಲಿ ಸಿಡಿದು ನಿಂತ ಆರ್​ಸಿಬಿಯ ಮಾಜಿ ಆಟಗಾರ ಶಾಬಾಜ್​ ಅಹ್ಮದ್​ 29 ಎಸೆತಗಳಿಂದ 5 ಸಿಕ್ಸರ್​ ಮತ್ತು 2 ಬೌಂಡರಿ ಬಾರಿಸಿ 59 ರನ್​ ಬಾರಿಸಿದರು. ಇವರಿಗೆ ಮತ್ತೊಂದು ತುದಿಯಲ್ಲಿ ಸಾಥ್​ ನೀಡಿದ ನಿತೀಶ್ ರೆಡ್ಡಿ ತಲಾ 2 ಸಿಕ್ಸರ್​ ಮತ್ತು ಬೌಂಡರಿ ಹೊಡೆದು 37 ರನ್​ ಗಳಿಸಿದರು. ಹೀಗಾಗಿ ತಂಡ 250ರ ಗಡಿ ದಾಡಿತು. ಡೆಲ್ಲಿ ಪರ ಕುಲ್​ದೀಪ್​ ಯಾದವ್​ 55 ರನ್​ ವೆಚ್ಚದಲ್ಲಿ 4 ವಿಕೆಟ್​ ಕಿತ್ತರು.

Exit mobile version