ಬೆಂಗಳೂರು: ದಕ್ಷಿಣ ಆಫ್ರಿಕಾ ಟಿ20 ಸರಣಿಯ ಪ್ರವಾಸದ ವೇಳೆ ಎಡ ಪಾದದ ನೋವಿಗೆ ಸಿಲುಕಿ ಲಂಡನ್ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಟೀಮ್ ಇಂಡಿಯಾದ ಹಾರ್ಡ್ ಹಿಟ್ಟರ್ ಸೂರ್ಯಕುಮಾರ್ ಯಾದವ್(Suryakumar Yadav) ಈಗ ಸಂಪೂರ್ಣ ಚೇತರಿಕೆ ಕಂಡಿದ್ದಾರೆ. ಅವರು ಬೆಂಗಳೂರಿನ ಎನ್ಸಿಎಯಲ್ಲಿ(NCA) ಫಿಟ್ನೆಸ್ ಶಿಬಿರದಲ್ಲಿ ಪಾಲ್ಗೊಂಡಿದ್ದಾರೆ. ಇದೇ ವೇಳೆ ಅವರು ಪಿಚ್ ರೋಲರ್ನಲ್ಲಿ ಜಾಲಿ ರೈಡ್ ಮಾಡಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.
ಬೆಂಗಳೂರಿನಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(ಎನ್ಸಿಎ)ಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿರುವ ಸೂರ್ಯಕುಮಾರ್ ಯಾದವ್ ಅವರು ಇಲ್ಲಿನ ಪಿಚ್ ಕ್ಯೂರೆಟರ್ ಜತೆಗೆ ರೋಲರ್ನಲ್ಲಿ ಸಂಚಾರ ಮಾಡಿದ್ದಾರೆ. ಈ ವಿಡಿಯೊವನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ(suryakumar yadav instagram) ಹಂಚಿಕೊಂಡಿದ್ದು ಅಕ್ಷಯ್ ಕುಮಾರ್, ತ್ರಿಶಾ, ಜಾನಿಲಿವರ್ ನಟಿಸಿರುವ ಖಟ್ಟಾ ಮೀಠಾ ಚಿತ್ರದ ಡೈಲಾಗ್ ಸೇರಿದ್ದಾರೆ. ಜತೆಗೆ ಇದೇ ಸಿನೆಮಾದಲ್ಲಿ ಬರುವ ಗಿರ್ಗರ್ಧನ್ ಘಾಟ್ ಕಾ ನಾಮ್ ತೋ ಸುನಾ ಹೈ ಹೋಗಾ!(ಗಿರ್ಗರ್ಧನ್ ಘಾಟ್ ಅವರ ಹೆಸರು ಹೇಳಿದ್ದೀಯಾ) ಎನ್ನುವ ಡೈಲಾಗ್ ಅನ್ನು ಬರೆದುಕೊಂಡಿದ್ದಾರೆ.
ಇದನ್ನೂ ಓದಿ Suryakumar Yadav: ಸೂರ್ಯಕುಮಾರ್ ಚೇತರಿಕೆಗೆ ಹಾರೈಸಿದ ಆಯುಷ್ಮಾನ್ ಖುರಾನ
ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್ ಎಡ ಪಾದದ ನೋವಿಗೆ ಸಿಲುಕಿದ್ದರು. ಗಾಯದ ಬಳಿಕ ಸ್ಟಿಕ್ನಲ್ಲಿ ನಡೆದಾಡುದ ವಿಡಿಯೊವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. “ಗಾಯಗಳು ಎಂದಿಗೂ ವಿನೋದಮಯವಾಗಿರುವುದಿಲ್ಲ, ಆದರೆ ನಾನು ಅದನ್ನು ನನ್ನ ಹೆಜ್ಜೆಯಲ್ಲಿ ತೆಗೆದುಕೊಳ್ಳುತ್ತೇನೆ ಮತ್ತು ಯಾವುದೇ ಸಮಯದಲ್ಲಿ ಹಿಂತಿರುಗಿ, ಸಂಪೂರ್ಣವಾಗಿ ಫಿಟ್ ಆಗುತ್ತೇನೆ ಎಂದು ಭರವಸೆ ನೀಡುತ್ತೇನೆ! ಅಲ್ಲಿಯವರೆಗೆ, ನೀವೆಲ್ಲರೂ ರಜಾದಿನವನ್ನು ಆನಂದಿಸುತ್ತಿದ್ದೀರಿ ಮತ್ತು ಪ್ರತಿದಿನ ಸ್ವಲ್ಪ ಸಂತೋಷವನ್ನು ಕಂಡುಕೊಳ್ಳುತ್ತಿದ್ದೀರಿ ಎಂದು ಭಾವಿಸುತ್ತೇವೆ” ಎಂದು ಸೂರ್ಯಕುಮಾರ್ ಬರೆದುಕೊಂಡಿದ್ದರು.
ಫಿಟ್ನೆಸ್ ಅಭ್ಯಾಸ ನಿರತ ಸೂರ್ಯ
🏋🏻♂️❤️#SuryaKumarYadav pic.twitter.com/kVdB5eg2aB
— . (@onlySKYmatters) February 14, 2024
ಸದ್ಯ ಗುಣಮುಖರಾಗಿರುವ ಸೂರ್ಯಕುಮಾರ್ ಅವರು ಮುಂದಿನ ತಿಂಗಳು ನಡೆಯುವ ಐಪಿಎಲ್ ಟೂರ್ನಿಯಲ್ಲಿ ಕಣಕ್ಕಿಳಿಯುವ ನಿರೀಕ್ಷೆಯಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಆಟಗಾರನಾಗಿದ್ದಾರೆ. ಈ ಬಾರಿ ಈ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ರೋಹಿತ್ ಅವರನ್ನು ತಂಡದ ನಾಯಕತ್ವದಿಂದ ಕೈಬಿಟ್ಟದ್ದಕ್ಕೆ ಸೂರ್ಯಕುಮಾರ್ ಅವರು ಒಡೆದು ಹೋದ ಹೃದಯದ ಎಮೊಜಿಯನ್ನು ಪೋಸ್ಟ್ ಮಾಡಿ ಫ್ರಾಂಚೈಸಿ ವಿರುದ್ಧ ಪರೋಕ್ಷ ಅಸಮಾಧಾನ ಹೊರಹಾಕಿದ್ದರು.